ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

ಕೆಲವು ಧಾರ್ಮಿಕ ಗ್ರಂಥಗಳ ಭಗವಂತನು ಸದಾ ನಮ್ಮನ್ನು ಶಿಕ್ಷಿಸಲು ಸಿದ್ಧನಿರುವ ಪ್ರತೀಕಾರದ ಸ್ವರೂಪ. ಆದರೆ ಏಸುಕ್ರಿಸ್ತನು ನಮಗೆ ಭಗವಂತನ ನಿಜ ಸ್ವರೂಪವನ್ನು ತೋರಿಸಿಕೊಟ್ಟನು…ಅವನು ತನ್ನ ಶತ್ರುಗಳನ್ನು “ದೇವತೆಗಳ ಹನ್ನೆರಡು ಸೈನ್ಯಗಳಿಂದ” ನಾಶಮಾಡಲಿಲ್ಲ, ಅದರ ಬದಲು ದುಷ್ಟತೆಯನ್ನು ದಿವ್ಯಪ್ರೇಮದ ಶಕ್ತಿಯಿಂದ ಜಯಿಸಿದ. ಅವನ ವರ್ತನೆಗಳು ಭಗವಂತನ ಅತ್ಯುನ್ನತ ಪ್ರೀತಿಯನ್ನು ಹಾಗು ಭಗವಂತನೊಂದಿಗೆ ಒಂದಾಗಿರುವವರ ವರ್ತನೆಗಳನ್ನು ವ್ಯಕ್ತಗೊಳಿಸಿದವು.
Flower floating on water“ಯಾವುದೇ ಹಾನಿಗೀಡಾದರೂ ಕ್ಷಮಿಸಬೇಕು.” ಎಂದು ಮಹಾಭಾರತ ಹೇಳುತ್ತದೆ. “ಮನುಷ್ಯನು ಕ್ಷಮಾಶೀಲನಾದುದರಿಂದಲೇ ಮನುಷ್ಯ ಜಾತಿಯು ಮುಂದುವರಿದುಕೊಂಡು ಹೋಗುತ್ತಿರುವುದೆಂದು ಹೇಳುತ್ತಾರೆ. ಕ್ಷಮಾಗುಣವು ಪವಿತ್ರವಾದುದು; ಕ್ಷಮೆಯಿಂದಲೇ ವಿಶ್ವವು ಅಖಂಡವಾಗಿ ಉಳಿದಿರುವುದು. ಕ್ಷಮೆಯೇ ಶಕ್ತಿವಂತರ ಶಕ್ತಿ; ಕ್ಷಮೆಯೇ ತ್ಯಾಗ; ಕ್ಷಮೆಯು ಮನಸ್ಸಿನ ಶಾಂತಿ. ಕ್ಷಮೆ ಮತ್ತು ಸಾಧು ಸ್ವಭಾವ ಆತ್ಮಸಂಯಮಿಗಳ ಗುಣ. ಅವು ಶಾಶ್ವತ ಸದ್ಗುಣವನ್ನು ಪ್ರತಿನಿಧಿಸುತ್ತವೆ.”
ಒಬ್ಬ ವ್ಯಕ್ತಿಯು ತಪ್ಪು ಮಾಡಿದಾಗ ಎಷ್ಟು ಸುಲಭವಾಗಿ ತನ್ನನ್ನು ತಾನು ಕ್ಷಮಿಸಿಕೊಳ್ಳುತ್ತಾನೆ; ಅದೇ ಬೇರೊಬ್ಬರಿಂದ ತಪ್ಪಾದಾಗ, ಆತನ ತಕ್ಷಣದ ಪ್ರತಿಕ್ರಿಯೆಯು ತಪ್ಪಿತಸ್ಥನ ಬಗೆಗೆ ತೀರ್ಪುದಾಯಕ ಹಾಗೂ ಖಂಡನೀಯವಾಗಿರುತ್ತದೆ. ಬದಲಾಗಿ ನಿಷ್ಕಪಟ ಮನೋಭಾವದಿಂದ ನಿಮ್ಮನ್ನು ಆ ವ್ಯಕ್ತಿಯ ಸ್ಥಾನದಲ್ಲಿರಿಸಿ ಹಾಗೂ ಹೇಗೆ ನಿಮ್ಮನ್ನು, ನೀವು ಕ್ಷಮಿಸಿಕೊಳ್ಳಲು ಇಷ್ಟಪಡುತ್ತೀರಿ ಎಂಬುದನ್ನು ಗಮನಿಸಿ. ಅಂತೆಯೇ ಪರರನ್ನೂ ಕ್ಷಿಪ್ರವಾಗಿ ಕ್ಷಮಿಸಲು ನಿಮಗೆ ಏಕೆ ಸಾಧ್ಯವಾಗಬಾರದು? ಜನರು ತಪ್ಪಿ ನಡೆಯಲು ಕಾರಣ ಕೇವಲ ದುಷ್ಟತನವೇನಲ್ಲ, ಬದಲಾಗಿ ಸರಿಯಾದ ವಿವೇಚನೆಯಿಲ್ಲದ ಅವರ ಮೌಢ್ಯತೆಯ ಸೆಳೆತ….ನೆನಪಿರಲಿ, ಪ್ರೀತಿ ಎಂತಹ ವ್ಯಕ್ತಿಯನ್ನೂ ಬದಲಾಯಿಸಬಲ್ಲದು.
“ಅನಂತರ ಪೀಟರ್ ಆತನ ಬಳಿಗೆ ಬಂದು, ಪ್ರಭು, ನನ್ನ ಸೋದರ ನನಗೆ ಎಷ್ಟು ಸಾರಿ ಅನ್ಯಾಯ ಬಗೆಯಬಹುದು, ನಾನು ಎಷ್ಟು ಬಾರಿ ಅವನನ್ನು ಕ್ಷಮಿಸಬೇಕು: ಏಳು ಬಾರಿ ಕ್ಷಮಿಸಲೇ? ಎಂದು ಕೇಳಿದ. ಅದಕ್ಕೆ ಏಸು, ಏಳು ಬಾರಿ ಎಂದು ನಿನಗೆ ನಾನು ಹೇಳಲಿಲ್ಲ: ಏಳು ಎಪ್ಪತ್ತು ಬಾರಿ ಆಗುವಷ್ಟು ಸಾರಿ ಎಂದ.”ನಾನು ಈ ರಾಜಿಗೆ ಬಾರದ ಉಪದೇಶವನ್ನು ನನಗೆ ಮನವರಿಕೆ ಮಾಡಿಕೊಡಬೇಕೆಂದು ಪ್ರಾರ್ಥಿಸಿದೆ. “ಪ್ರಭುವೇ,” ನಾನು ಪ್ರತಿಭಟಿಸಿದೆ, “ಅದು ಹೇಗೆ ಸಾಧ್ಯ?” ಆ ದಿವ್ಯವಾಣಿಯು ಅಂತಿಮವಾಗಿ ಉತ್ತರಿಸಿದಾಗ, ಅದು ವಿನೀತಗೊಳಿಸುವ ಬೆಳಕಿನ ಮಹಾಪೂರವನ್ನು ತಂದಿತು: “ಎಲೋ ಮಾನವಾ, ನಿಮ್ಮಲ್ಲಿ ಒಬ್ಬೊಬ್ಬರನ್ನೂ ಎಷ್ಟು ಬಾರಿ ನಾನು ಪ್ರತಿದಿನವೂ ಮನ್ನಿಸಲಿ?”
ಹೇಗೆ ಭಗವಂತನು ನಮ್ಮೆಲ್ಲಾ [ತಪ್ಪು] ಯೋಚನೆಗಳ ಅರಿವಿದ್ದರೂ ಸದಾ ನಮ್ಮನ್ನು ಕ್ಷಮಿಸುತ್ತಾನೋ, ಹಾಗೆಯೇ ಭಗವಂತನಲ್ಲಿ ಸಂಪೂರ್ಣವಾಗಿ ಶ್ರುತಿಗೂಡಿಕೊಂಡ ಪ್ರತೀ ವ್ಯಕ್ತಿಯೂ ಸ್ವಾಭಾವಿಕವಾಗಿ ತನ್ನಲ್ಲಿ ಅದೇ ಪ್ರೇಮವನ್ನು ಹೊಂದಿರುತ್ತಾನೆ.
ಅದೆಷ್ಟೇ ಬಾರಿ ನೀವು ಕಪಾಳಕ್ಕೆ ಹೊಡೆಸಿಕೊಂಡರೂ, ಎಡೆಬಿಡದೆ ಒಳ್ಳೆಯದನ್ನೇ ಮಾಡುತ್ತಾ ಇರಿ. ಸಾವಿರಾರು ಜನರು ನಿಮ್ಮ ಪ್ರಯತ್ನವನ್ನು ಮೆಚ್ಚುತ್ತಾರೆ ಆದರೆ ಕೆಲವರು ಮೆಚ್ಚುವುದಿಲ್ಲ. ಅಂಥವರು ತಮ್ಮ ನಿರ್ದಯತೆಯಿಂದ ನಿಮ್ಮನ್ನು ಶಿಲುಬೆಗೇರಿಸಿದಾಗ, ನೀವು ಹೇಳಬೇಕು, “ತಂದೆಯೇ, ಅವರನ್ನು ಕ್ಷಮಿಸು, ಏಕೆಂದರೆ ಅವರಿಗೆ ತಾವೇನು ಮಾಡುತ್ತಿದ್ದೇವೆಂದು ತಿಳಿಯದು.” ಮನಸ್ತಾಪಗಳನ್ನು ಬಗೆಹರಿಸುವುದನ್ನೂ ಒಳಗೊಂಡಂತೆ, ಭಗವಂತನನ್ನು ಮೆಚ್ಚಿಸುವ ಸಲುವಾಗಿ ಸತ್ಕರ್ಮವನ್ನು ಮುಂದುವರಿಸಿ. ಆದರೆ ನೀವು ಕಾಲ ಕಸವಾಗಬೇಡಿ ಅಥವಾ ದುಷ್ಟತನದೊಂದಿಗೆ ಸಹಕರಿಸಬೇಡಿ, ಆದರೆ ನಿಮ್ಮ ಹೃದಯದಲ್ಲಿ ಅವರ ಆತ್ಮಗಳನ್ನು ಅವರ ದುರ್ಮಾರ್ಗದ ನಡವಳಿಕೆಯಿಂದ ಪ್ರತ್ಯೇಕಿಸಿ ಹಾಗೂ ಪ್ರಾಮಾಣಿಕವಾಗಿ ಅವರನ್ನು ಪ್ರೀತಿಸಿ. ಇದರಿಂದ ಸ್ವಯಂ-ಪ್ರಭುತ್ವ— ಬೇರೆ ಯಾರಿಂದಲೂ ನಾಶ ಮಾಡಲು ಸಾಧ್ಯವಾಗದ ಆಂತರಿಕ ಶಾಂತಿ ನಿಮ್ಮದಾಗುತ್ತದೆ.

ನಿಮ್ಮ ಹೃದಯದಲ್ಲಿ ಇತರರ ಹೃದಯದ ಎಲ್ಲ ನೋವುಗಳನ್ನು ಪರಿಹರಿಸುವಂತಹ ಸಹಾನುಭೂತಿಯು ತುಂಬಿಬರಬೇಕು, ಏಸುವಿಗೆ, “ತಂದೆಯೇ, ಅವರನ್ನು ಕ್ಷಮಿಸು; ಏಕೆಂದರೆ ಅವರಿಗೆ ತಾವೇನು ಮಾಡುತ್ತಿದ್ದೇವೆಂದು ತಿಳಿಯದು,” ಎಂದು ಹೇಳಲು ಸಾಧ್ಯವಾದಂತಹ ಸಹಾನುಭೂತಿ. ಅವನ ಉತ್ಕೃಷ್ಟವಾದ ಪ್ರೀತಿಯು ಎಲ್ಲರನ್ನೂ ಒಳಗೊಂಡಿತ್ತು. ಅವನು ತನ್ನ ಒಂದು ನೋಟದಿಂದ ಶತ್ರುಗಳನ್ನು ನಾಶಪಡಿಸಬಹುದಿತ್ತು, ಆದರೂ ಭಗವಂತನಿಗೆ ನಮ್ಮೆಲ್ಲ ದುಷ್ಟ ಆಲೋಚನೆಗಳ ಬಗ್ಗೆ ತಿಳಿದಿದ್ದರೂ, ಅವನು ನಮ್ಮನ್ನು ನಿರಂತರವಾಗಿ ಕ್ಷಮಿಸುತ್ತಿರುವಂತೆ, ಅವನೊಂದಿಗೆ ಶ್ರುತಿಗೊಂಡ ಆ ಮಹಾನ್ ಆತ್ಮಗಳು ನಮಗೆ ಅಂತಹುದೇ ಪ್ರೇಮವನ್ನು ಕೊಡುತ್ತಾರೆ.

ನೀವು ಕ್ರಿಸ್ತ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದಿದ್ದರೆ, ಸಹಾನುಭೂತಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಹೃದಯದಲ್ಲಿ ಇತರರಿಗಾಗಿ ಪ್ರಾಮಾಣಿಕವಾದ ಅಂತಃಕರಣ ಮೂಡಿದರೆ, ನೀವು ಆ ಶ್ರೇಷ್ಠ ಚೈತನ್ಯವನ್ನು ಅಭಿವ್ಯಕ್ತಿಸಲು ಆರಂಭಿಸುತ್ತಿರುವಿರಿ ಎಂದರ್ಥ… “ಎಲ್ಲ ಜನರನ್ನು ಸಮಚಿತ್ತತೆಯಿಂದ ಕಾಣುವವನೇ ಅತ್ಯುತ್ತಮ ಯೋಗಿ…” ಎಂದು ಭಗವಾನ್ ಕೃಷ್ಣ ಹೇಳಿದ್ದಾನೆ.

ಕೋಪ ಮತ್ತು ದ್ವೇಷ ಏನನ್ನೂ ಸಾಧಿಸಲಾರವು. ಪ್ರೀತಿಯು ಪುರಸ್ಕರಿಸುತ್ತದೆ. ನೀವು ಒಬ್ಬರನ್ನು ಭಯಪಡಿಸಿ ಕುಗ್ಗಿಸಬಹುದು, ಆದರೆ ಆ ವ್ಯಕ್ತಿಯು ಮತ್ತೆ ಮೇಲೆದ್ದಾಗ, ನಿಮ್ಮನ್ನು ನಾಶ ಮಾಡಲು ಪ್ರಯತ್ನಿಸುತ್ತಾನೆ. ಅಂದ ಮೇಲೆ ನೀವು ಅವನನ್ನು ಹೇಗೆ ಗೆದ್ದಂತಾಯಿತು? ನೀವು ಗೆದ್ದಿಲ್ಲ. ಗೆಲ್ಲುವ ಒಂದೇ ಹಾದಿ ಎಂದರೆ ಪ್ರೀತಿ. ಎಲ್ಲಿ ನಿಮಗೆ ಗೆಲ್ಲಲು ಸಾಧ್ಯವಿಲ್ಲವೊ, ಅಲ್ಲಿ ಸ್ವಲ್ಪ ಮೌನವಾಗಿರಿ ಅಥವಾ ಅಲ್ಲಿಂದ ದೂರಸರಿದು ಆ ವ್ಯಕ್ತಿಗಾಗಿ ಪ್ರಾರ್ಥಿಸಿ. ಈ ರೀತಿಯಲ್ಲಿ ನೀವು ಪ್ರೀತಿಸಬೇಕು. ನಿಮ್ಮ ಜೀವನದಲ್ಲಿ ನೀವು ಇದನ್ನು ಅಭ್ಯಾಸ ಮಾಡಿದರೆ, ಅರಿವಿಗೂ ಮೀರಿದ ಶಾಂತಿ ನಿಮ್ಮದಾಗುತ್ತದೆ.

ದೃಢೀಕರಣ

ದೃಢೀಕರಣದ ಸಿದ್ಧಾಂತ ಮತ್ತು ಸೂಚನೆಗಳು

“ಇದುವರೆಗೆ ನನ್ನ ಮನಸ್ಸನ್ನು ನೋಯಿಸಿದ ಎಲ್ಲರನ್ನೂ ನಾನು ಈ ದಿನ ಕ್ಷಮಿಸುತ್ತೇನೆ. ಬಾಯಾರಿದ ಎಲ್ಲ ಹೃದಯಗಳಿಗೆ, ನನ್ನನ್ನು ಪ್ರೀತಿಸುವವರಿಗೂ, ಪ್ರೀತಿಸದವರಿಗೂ ನಾನು ನನ್ನ ಪ್ರೀತಿಯನ್ನು ಹಂಚುತ್ತೇನೆ.”

ಹೆಚ್ಚಿನ ಅನ್ವೇಷಣೆ

ಇದನ್ನು ಹಂಚಿಕೊಳ್ಳಿ