“ನಾನು ವಿರಮಿಸುತ್ತ ನನ್ನೆಲ್ಲ ಮಾನಸಿಕ ಹೊರೆಗಳನ್ನು ಬದಿಗಿರಿಸಿ, ನನ್ನ ಮೂಲಕ ಭಗವಂತನು ತನ್ನ ಪರಿಪೂರ್ಣ ಪ್ರೇಮ, ಶಾಂತಿ ಮತ್ತು ಜ್ಞಾನವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತೇನೆ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ

Sunrise from mountain top.

ಮನಸ್ಸು ಮತ್ತು ದೇಹವನ್ನು ಗುಣಪಡಿಸುವಲ್ಲಿ ದೃಢೀಕರಣದ ಶಕ್ತಿಯನ್ನು ಮುಖ್ಯವಾಹಿನಿಯು ಕಂಡುಹಿಡಿಯುವ ದಶಕಗಳ ಮೊದಲೇ, ಪರಮಹಂಸ ಯೋಗಾನಂದರು ದೇಶದಾದ್ಯಂತದ ತಲ್ಲೀನ ಶ್ರೋತೃಗಳಿಗೆ, ಪ್ರತಿ ಮನುಷ್ಯನೊಳಗೆ ಅಡಗಿರುವ ಗಮನಾರ್ಹವಾದ ಗುಣಪಡಿಸುವ ಶಕ್ತಿಯನ್ನು ಹೇಗೆ ನೇರವಾಗಿ ತಲುಪಬೇಕು ಮತ್ತು ಅನ್ವಯಿಸಬೇಕು ಎಂಬುದನ್ನು ಕಲಿಸುತ್ತಿದ್ದರು. ಅವರು 1924ರಲ್ಲಿ ತಮ್ಮ ಮೊದಲ ದೇಶಾದ್ಯಂತದ ಉಪನ್ಯಾಸ ಪ್ರವಾಸದಲ್ಲಿ ಅಮೇರಿಕನ್ ಪ್ರೇಕ್ಷಕರಿಗೆ ಈ ಶಕ್ತಿಯುತ ಗುಣಕಾರಿ ಅಭ್ಯಾಸವನ್ನು ಪರಿಚಯಿಸಿದರು. 1930 ಮತ್ತು 40 ರ ದಶಕದ ಉದ್ದಕ್ಕೂ, ಈ ಮಹಾನ್ ಗುರು ತಾವು ಸ್ಥಾಪಿಸಿದ ಎಸ್‌ಆರ್‌ಎಫ್‌ ಮಂದಿರಗಳಲ್ಲಿ, ಅಲ್ಲಿದ್ದವರಿಗೆ, ಉಪಶಮನಕ್ಕಾಗಿ ಅಥವಾ ಇಚ್ಛಾಶಕ್ತಿಯನ್ನು ಜಾಗೃತಗೊಳಿಸುವುದಕ್ಕಾಗಿ ಅಥವಾ ಭಕ್ತಿಗಾಗಿ ಅಥವಾ ಭಗವಂತನ ಉಪಸ್ಥಿತಿಯ ಗ್ರಹಣಶೀಲತೆಗಾಗಿ ಒಂದು ದೃಢೀಕರಣವನ್ನು ಹೇಳಿಕೊಡುವುದರೊಂದಿಗೆ ಸ್ಫೂರ್ತಿದಾಯಕ ಸತ್ಸಂಗವನ್ನು ಆರಂಭಿಸುತ್ತಿದ್ದರು ಅಥವಾ ಅಂತ್ಯಗೊಳಿಸುತ್ತಿದ್ದರು. ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅವರ ವೈಜ್ಞಾನಿಕ ಗುಣಕಾರಿ ದೃಢೀಕರಣಗಳ ತಂತ್ರಗಳ ಅಭ್ಯಾಸದಿಂದ ಪ್ರಯೋಜನ ಪಡೆದಿದ್ದಾರೆ.

ಪರಮಹಂಸಜಿಯವರು ತಮ್ಮ ಮಾರ್ಗದರ್ಶಕ ಪುಸ್ತಕ, ಸೈಂಟಿಫಿಕ್‌ ಹೀಲಿಂಗ್‌ ಅಫರ್ಮೇಷನ್ಸ್ ನಲ್ಲಿ ಹೀಗೆ ಹೇಳಿದ್ದಾರೆ

ಪ್ರಾಮಾಣಿಕತೆ, ಮನೋನಿಶ್ಚಯ, ವಿಶ್ವಾಸ ಮತ್ತು ಅಂತರ್ದೃಷ್ಟಿಯಿಂದ ಸಂಪೂರಿತವಾದ ನುಡಿಗಳು ಕಂಪನದ ಸ್ಫೋಟಕ ಸಿಡಿಗುಂಡುಗಳಿದ್ದಂತೆ, ಅದನ್ನು ಹಚ್ಚಿದಾಗ, ಅದು ಕಷ್ಟಗಳ ಬಂಡೆಗಳನ್ನು ಚೂರು ಚೂರು ಮಾಡುತ್ತದೆ ಮತ್ತು ಬಯಸಿದ ಬದಲಾವಣೆಯನ್ನು ತರುತ್ತದೆ…. ಅರಿವಿನಿಂದ, ಭಾವನಾತ್ಮಕವಾಗಿ ಮತ್ತು ಇಷ್ಟಪಟ್ಟು ಪುನರಾವರ್ತನೆ ಮಾಡಿದ ನುಡಿಗಳು ಅಥವಾ ದೃಢೀಕರಣಗಳು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಸರ್ವವ್ಯಾಪಿ ಬ್ರಹ್ಮಾಂಡ ಕಂಪನದ ಶಕ್ತಿಯನ್ನು ಬಡಿದೆಬ್ಬಿಸುತ್ತವೆ. ಎಲ್ಲ ಸಂಶಯಗಳನ್ನೂ ಕಿತ್ತೊಗೆದು, ಅಸೀಮ ನಂಬಿಕೆಯಿಂದ ಆ ಶಕ್ತಿಗೆ ಮೊರೆಯಿಡಿ; ಇಲ್ಲದಿದ್ದರೆ, ನಿಮ್ಮ ಲಕ್ಷ್ಯದ ಬಾಣವು ತನ್ನ ಗುರಿಯ ದಾರಿ ತಪ್ಪುತ್ತದೆ.

“ನೀವು ಬ್ರಹ್ಮಾಂಡ ಪ್ರಜ್ಞೆಯ ನೆಲದಲ್ಲಿ ನಿಮ್ಮ ಸ್ಪಂದನಾತ್ಮಕ ಪ್ರಾರ್ಥನೆಯ-ಬೀಜವನ್ನು ಬಿತ್ತಿದ ಮೇಲೆ, ಅದು ಮೊಳಕೆ ಒಡೆದಿದೆಯೋ ಇಲ್ಲವೋ ಎಂದು ನೋಡಲು ಪದೇ ಪದೇ ಅದನ್ನು ಹೊರಗೆ ತೆಗೆಯ ಬೇಡಿ. ದಿವ್ಯ ಶಕ್ತಿಗಳು ತಡೆಯಿಲ್ಲದ ಕಾರ್ಯ ನಿರ್ವಹಿಸಲು ಒಂದು ಅವಕಾಶವನ್ನು ನೀಡಿ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ, ಸೈಂಟಿಫಿಕ್‌ ಹೀಲಿಂಗ್‌ ಅಫರ್ಮೇಷನ್ಸ್

“ಒಬ್ಬರು ವಿಭಿನ್ನ ದೃಢೀಕರಣಗಳನ್ನು ಉಪಯೋಗಿಸುವಾಗ, ಅವರ ಮನಸ್ಸಿನ ಮನೋಭಾವ ಬದಲಾಗಬೇಕು; ಉದಾಹರಣೆಗೆ, ಸಂಕಲ್ಪ ಶಕ್ತಿಯ ದೃಢೀಕರಣಗಳು ದೃಢನಿರ್ಧಾರದ ಜೊತೆಗೂಡಿರಬೇಕು; ಭಾವನಾತ್ಮಕ ದೃಢೀಕರಣಗಳು ಭಕ್ತಿಯ ಜೊತೆ; ವಿವೇಚನಾಯುಕ್ತ ದೃಢೀಕರಣಗಳು ಸ್ಪಷ್ಟ ತಿಳುವಳಿಕೆಯ ಜೊತೆ. ಇನ್ನೊಬ್ಬರನ್ನು ಉಪಶಮನಗೊಳಿಸುವಾಗ ಅವರ ಸ್ವಾಭಾವಿಕ, ಕಲ್ಪನಾತ್ಮಕ, ಭಾವನಾತ್ಮಕ ಅಥವಾ ನಿಮ್ಮ ಅಸ್ವಸ್ಥನ ವಿಚಾರಪೂರ್ಣ ಸ್ವಭಾವಕ್ಕೆ ಅನುಗುಣವಾದ ದೃಢೀಕರಣವನ್ನು ಆಯ್ದುಕೊಳ್ಳಿ. ಎಲ್ಲ ದೃಢೀಕರಣಗಳಲ್ಲೂ ಲಕ್ಷ್ಯದ ತೀವ್ರತೆಗೆ ಮೊದಲ ಆದ್ಯತೆ. ಆದರೆ ಅವಿರತ ಮತ್ತು ಪುನರುಚ್ಚಾರಣೆ ಕೂಡ ಬಹಳ ಗಮನಾರ್ಹದ್ದಾಗಿದೆ. ನಿಮ್ಮ ದೃಢೀಕರಣಗಳನ್ನು ಭಕ್ತಿಯಿಂದ, ಸಂಕಲ್ಪ ಶಕ್ತಿಯಿಂದ ಮತ್ತು ವಿಶ್ವಾಸದಿಂದ ಸಂಪೂರಿತಗೊಳಿಸಿ ಮತ್ತು ಸ್ವಾಭಾವಿಕವಾಗಿ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುವುದರಿಂದ, ಪ್ರತಿಫಲದ ಬಗ್ಗೆ ಯೋಚನೆ ಮಾಡದೆ ತೀವ್ರತೆಯಿಂದ ಪುನರುಚ್ಚರಿಸಿ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ, ಸೈಂಟಿಫಿಕ್‌ ಹೀಲಿಂಗ್‌ ಅಫರ್ಮೇಷನ್ಸ್

Yogananda speaking.ಪರಮಹಂಸ ಯೋಗಾನಂದರು ಕೇಂದ್ರೀಕೃತ ಆಲೋಚನೆಯ ಶಕ್ತಿಯನ್ನು ಬಳಸಿಕೊಳ್ಳಲು ಗುಪ್ತ ನಿಯಮಗಳನ್ನು ಬಹಿರಂಗಪಡಿಸುತ್ತಾರೆ — ಕೇವಲ ಶಾರೀರಿಕ ಉಪಶಮನಕ್ಕಾಗಿ ಮಾತ್ರವಲ್ಲ, ಆದರೆ ಎಲ್ಲಾ ಅಡೆತಡೆಗಳನ್ನು ಜಯಿಸಲು ಮತ್ತು ನಮ್ಮ ಜೀವನದಲ್ಲಿ ಸರ್ವತೋಮುಖ ಯಶಸ್ಸನ್ನು ಸೃಷ್ಟಿಸಲು. ಇದರಲ್ಲಿ ವ್ಯಾಪಕ ಸೂಚನೆಗಳು ಮತ್ತು ದೇಹವನ್ನು ಗುಣಪಡಿಸಲು, ಆತ್ಮವಿಶ್ವಾಸವನ್ನು ಬೆಳೆಸಲು, ವಿವೇಕವನ್ನು ಜಾಗೃತಗೊಳಿಸಲು, ದುರಭ್ಯಾಸಗಳನ್ನು ಹೋಗಲಾಡಿಸಲು ಇತ್ಯಾದಿಗಳಿಗಾಗಿ ಬಹು ವಿಧದ ದೃಢೀಕರಣಗಳಿವೆ.

ದೃಢೀಕರಣಕ್ಕೆ ಸಲಹೆಗಳು

ಒಂದು ದೃಢೀಕರಣವನ್ನು ಆಯ್ದುಕೊಳ್ಳಿ

ಬೆಳಿಗ್ಗೆ ಎದ್ದ ತಕ್ಷಣ ಅಥವಾ ರಾತ್ರಿ ಮಲಗುವ ಮುನ್ನ ದೃಢೀಕರಣಗಳನ್ನು ಅಭ್ಯಾಸ ಮಾಡುವುದು ಅತ್ಯಂತ ಪರಿಣಾಮಕಾರಿಯಾಗಿದೆ. ದೃಢೀಕರಣವನ್ನು ಪ್ರಾರಂಭಿಸುವ ಮೊದಲು, ಕುರ್ಚಿಯ ಮೇಲೆ ಅಥವಾ ದೃಢವಾದ ಮೇಲ್ಮೈ ಮೇಲೆ ಸರಿಯಾದ ಧ್ಯಾನ ಭಂಗಿಯಲ್ಲಿ, ಕುಳಿತುಕೊಳ್ಳುವುದು ಮುಖ್ಯ. ಬೆನ್ನುಹುರಿಯನ್ನು ನೆಟ್ಟಗೆ ಇರಿಸಿಕೊಂಡು, ಕಣ್ಣುಗಳು ಮುಚ್ಚಿಕೊಂಡು, ನಿಧಾನವಾಗಿ ನಿಮ್ಮ ದೃಷ್ಟಿಯನ್ನು ಭ್ರೂಮಧ್ಯದ ನಡುವಿನ ಬಿಂದುವಿನಲ್ಲಿ ಕೇಂದ್ರೀಕರಿಸಬೇಕು. ಮನಸ್ಸನ್ನು ಚಂಚಲ ಆಲೋಚನೆಗಳು ಮತ್ತು ಚಿಂತೆಗಳಿಂದ ಮುಕ್ತಗೊಳಿಸಿ.

ಈ ಕೆಳಗಿನ ಯಾವುದಾದರೂ ಒಂದು ದೃಢೀಕರಣವನ್ನು ಆಯ್ದುಕೊಂಡು ಅದನ್ನು ಪೂರ್ಣವಾಗಿ ಮೊದಲು ಗಟ್ಟಿಯಾಗಿ, ನಂತರ ಮೆಲ್ಲಗೆ ಮತ್ತು ನಿಧಾನವಾಗಿ, ನಿಮ್ಮ ದನಿಯು ಪಿಸುನುಡಿಯಾಗುವವರೆಗೆ ಪುನರುಚ್ಚರಿಸಿ. ನಂತರ ಕ್ರಮೇಣವಾಗಿ ಅದನ್ನು ಮನಸ್ಸಿನಲ್ಲೇ, ಆಳವಾದ, ಅಖಂಡ ಏಕಾಗ್ರತೆಯನ್ನು ಅನುಭವಿಸುವವರೆಗೆ ದೃಢೀಕರಿಸಿ. ನೀವು ವೃದ್ಧಿಸುತ್ತಿರುವ ಶಾಂತಿಯನ್ನು ಅನುಭವಿಸುತ್ತಿರುವಂತೆ, ನಿಮ್ಮ ಏಕಾಗ್ರತೆಯನ್ನು ಇನ್ನೂ ಆಳವಾಗಿಸಲು ಪ್ರಯತ್ನಿಸಿ, ಆಗ ನೀವು ಅತೀತಪ್ರಜ್ಞೆಯ ಕ್ಷೇತ್ರಕ್ಕೆ ಪ್ರವೇಶಿಸಬಹುದು ಮತ್ತು ನಿಮ್ಮ ದೃಢೀಕರಣಗಳನ್ನು ಸಾಕಾರಗೊಳಿಸಬಹುದು.

“ನಾನು ಶಾಶ್ವತ ಬೆಳಕಿನಲ್ಲಿ ಮುಳುಗಿಹೋಗಿದ್ದೇನೆ. ಅದು ನನ್ನ ದೇಹದ ಕಣ ಕಣವನ್ನೂ ವ್ಯಾಪಿಸಿದೆ. ನಾನು ಆ ಬೆಳಕಿನಲ್ಲಿ ಬದುಕುತ್ತಿದ್ದೇನೆ. ಆ ದಿವ್ಯ ಚೇತನವು ನನ್ನ ಒಳಗೂ ಹೊರಗೂ ತುಂಬಿದೆ.”

“ಭಗವಂತ, ನನ್ನೊಳಗೆ ಮತ್ತು ನನ್ನ ಸುತ್ತಮುತ್ತಲಿದ್ದಾನೆ, ನನ್ನನ್ನು ರಕ್ಷಿಸುತ್ತಿದ್ದಾನೆ; ಆದ್ದರಿಂದ ಅವನ ಮಾರ್ಗದರ್ಶಿತ ಬೆಳಕನ್ನು ಅಡ್ಡಿಪಡಿಸುವ ನನ್ನ ಭಯವನ್ನು ದೂರಮಾಡುತ್ತೇನೆ.”

“ಪರಿಪೂರ್ಣ ಪಿತನೇ, ನಿನ್ನ ಪ್ರಕಾಶವು ಕ್ರಿಸ್ತನ ಮೂಲಕ, ಎಲ್ಲ ಧರ್ಮಗಳ ಸಂತರ ಮೂಲಕ, ಭಾರತದ ಗುರುಗಳ ಮೂಲಕ, ಹಾಗೂ ನನ್ನ ಮೂಲಕ ಪ್ರವಹಿಸುತ್ತಿದೆ. ಈ ದಿವ್ಯ ಜ್ಯೋತಿಯು ನನ್ನ ಶರೀರದ ಎಲ್ಲ ಭಾಗಗಳಲ್ಲೂ ನೆಲೆಸಿದೆ. ನಾನು ಆರೋಗ್ಯದಿಂದಿದ್ದೇನೆ.”

“ಭಗವಂತನ ಸಾಮರ್ಥ್ಯವು ಅಸೀಮವಾದುದು ಎಂದು ನಾನು ಅರಿತಿದ್ದೇನೆ; ಹಾಗೂ ನಾನು ಅವನ ಪ್ರತಿರೂಪವಾಗಿರುವುದರಿಂದ ನನ್ನಲ್ಲೂ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸುವ ಸಾಮರ್ಥ್ಯವಿದೆ.”

“ನಾನು ವಿರಮಿಸುತ್ತ ನನ್ನೆಲ್ಲ ಮಾನಸಿಕ ಹೊರೆಗಳನ್ನು ಬದಿಗಿರಿಸಿ, ನನ್ನ ಮೂಲಕ ಭಗವಂತನು ತನ್ನ ಪರಿಪೂರ್ಣ ಪ್ರೇಮ, ಶಾಂತಿ ಮತ್ತು ಜ್ಞಾನವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತೇನೆ.”

“ಹುಟ್ಟಿನಲ್ಲಿ, ದುಃಖದಲ್ಲಿ, ಆನಂದದಲ್ಲಿ, ಚಟುವಟಿಕೆಯಲ್ಲಿ, ಧ್ಯಾನದಲ್ಲಿ, ಅಜ್ಞಾನದಲ್ಲಿ, ಕಷ್ಟದಲ್ಲಿ, ಸಾವಿನಲ್ಲಿ, ಅಂತಿಮ ಮುಕ್ತಿಯಲ್ಲಿ ಸರ್ವದಾ ನಿನ್ನ ಸರ್ವ-ರಕ್ಷಕ ಸರ್ವವ್ಯಾಪಿತ್ವದ ಪ್ರಭಾವಳಿಯಿಂದ ಆವರಿಸಲ್ಪಟ್ಟಿರುವೆನೆಂಬ ಭಾವನೆ ನನಗೆ ಬರುವಂತೆ ಮಾಡು.”

“ನಿನ್ನ ಸದ್ಗುಣದ ಬೆಳಕು ಮತ್ತು ನಿನ್ನ ರಕ್ಷಣಾತ್ಮಕ ಶಕ್ತಿಗಳು ನನ್ನ ಮೂಲಕ ಸದಾ ಪ್ರಕಾಶಿಸುತ್ತಿವೆ. ನಾನು ಅವುಗಳನ್ನು ನೋಡಲಿಲ್ಲ, ಏಕೆಂದರೆ ನನ್ನ ಜ್ಞಾನಚಕ್ಷುಗಳು ಮುಚ್ಚಿಕೊಂಡಿದ್ದವು. ಈಗ ನಿನ್ನ ಶಾಂತಿಯ ಸ್ಪರ್ಶವು ನನ್ನ ಕಣ್ಣುಗಳನ್ನು ತೆರೆದಿದೆ; ನಿನ್ನ ಸದ್ಗುಣ ಮತ್ತು ನಿರಂತರ ರಕ್ಷಣೆಗಳು ನನ್ನ ಮೂಲಕ ಪ್ರವಹಿಸುತ್ತಿವೆ.”

“ನನ್ನ ದೇವರೇ ಪ್ರೇಮ, ನಾನು ಅವನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇನೆ. ನಾನು ಪ್ರೇಮದ ಬ್ರಹ್ಮಾಂಡೀಯ ಗೋಳ, ಅದರಲ್ಲಿ ಎಲ್ಲ ಗ್ರಹಗಳು, ಎಲ್ಲ ನಕ್ಷತ್ರಗಳು, ಎಲ್ಲ ಜೀವಿಗಳು, ಎಲ್ಲ ಸೃಷ್ಟಿಯೂ ಮಿನುಗುತ್ತಿವೆ. ಸಂಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಪ್ರೇಮವೇ ನಾನು.”

“ಕಷ್ಟವಾದರೂ ನಾನು ನಗುತ್ತ, ಅಳುತ್ತಿರುವವರಿಗೆ ನಗಲು ನಾನು ಸಹಾಯ ಮಾಡುತ್ತೇನೆ.”

“ಇತರರೆಡೆಗೆ ಪ್ರೀತಿ ಮತ್ತು ಸದ್ಭಾವನೆಗಳನ್ನು ಹೊರಸೂಸುತ್ತಾ ಭಗವಂತನ ಪ್ರೀತಿಯು ನನ್ನೆಡೆಗೆ ಬರುವ ಕಾಲುವೆಯನ್ನು ತೆರೆಯುತ್ತೇನೆ.”

ಇಲ್ಲಿ ಕಾಣಿಸಿಕೊಂಡಿರುವ ಆಯ್ದ ಭಾಗಗಳನ್ನು ಪರಮಹಂಸ ಯೋಗಾನಂದರ ಸೈಂಟಿಫಿಕ್‌ ಹೀಲಿಂಗ್‌ ಅಫರ್ಮೇಷನ್ಸ್ ಮತ್ತು ಮೆಟಾಫಿಸಿಕಲ್‌ ಮೆಡಿಟೇಷನ್ಸ್‌ ಪುಸ್ತಕಗಳಿಂದ ಆಯ್ದುಕೊಳ್ಳಲಾಗಿದೆ.

ಇದನ್ನು ಹಂಚಿಕೊಳ್ಳಿ