ಭಯ, ಒತ್ತಡ ಮತ್ತು ಚಿಂತೆಯನ್ನು ಜಯಿಸುವುದು

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

Krishna and Arjuna blowing there conch shells

ಜೀವನದ ರಣರಂಗದಲ್ಲಿ ಪ್ರತಿಯೊಬ್ಬರನ್ನೂ, ಪ್ರತಿ ಸನ್ನಿವೇಶವನ್ನೂ ನಾಯಕನ ಧೈರ್ಯ ಮತ್ತು ವಿಜಯಶಾಲಿಯ ಮುಗುಳ್ನಗೆಯೊಂದಿಗೆ ಎದುರಿಸಿ.

ನೀವು ಭಗವಂತನ ಮಗು. ನಿಮಗೇತರ ಭಯ?

ಸೋಲು ಅಥವಾ ಅನಾರೋಗ್ಯದ ಭಯವು ಬೆಳೆದುಕೊಳ್ಳುವುದು, ಅಂತಹ ಯೋಚನೆಗಳು ಸುಪ್ತಪ್ರಜ್ಞೆ ಮತ್ತು ಅಂತಿಮವಾಗಿ ಅತೀತ ಪ್ರಜ್ಞೆಯಲ್ಲಿ ಬೇರೂರುವವರೆಗೆ ಜಾಗೃತ ಮನಸ್ಸಿನಲ್ಲಿ ಯೋಚಿಸುತ್ತಲೇ ಇರುವುದರಿಂದ. ಆಗ ಅತೀತ ಪ್ರಜ್ಞೆ ಹಾಗೂ ಸುಪ್ತಪ್ರಜ್ಞೆಯಲ್ಲಿ ಬೇರೂರಿದ ಭಯವು ಮೊಳಕೆಯೊಡೆದು ಜಾಗೃತ ಮನಸ್ಸನ್ನು ಭಯದ ಗಿಡಗಳಿಂದ ತುಂಬುತ್ತದೆ. ಮೂಲ ಯೋಚನೆಯಷ್ಟು ಸುಲಭವಾಗಿ ಇವುಗಳನ್ನು ನಾಶಗೊಳಿಸಲು ಸಾಧ್ಯವಾಗುವುದಿಲ್ಲ. ಕಾಲಕ್ರಮದಲ್ಲಿ ಇವು ವಿಷಪೂರಿತ ಹಾಗೂ ಪ್ರಾಣಾಂತಕ ಫಲಗಳನ್ನು ಕೊಡುತ್ತವೆ.

ಧೈರ್ಯವನ್ನು ಕುರಿತ ಸಬಲವಾದ ಏಕಾಗ್ರತೆಯ ಮೂಲಕ ಹಾಗೂ ಪ್ರಜ್ಞೆಯನ್ನು ಒಳಗಿರುವ ಭಗವಂತನ ಪರಿಪೂರ್ಣ ಶಾಂತಿಯೆಡೆಗೆ ಹರಿಸುವ ಮೂಲಕ, ಅವುಗಳನ್ನು ನಿಮ್ಮೊಳಗಿನಿಂದ ಬೇರು ಸಹಿತ ಕಿತ್ತು ಹಾಕಿ.

ನೀವು ಯಾವುದಕ್ಕೆ ಹೆದರುತ್ತಿರುವಿರೋ ಅದನ್ನು ನಿಮ್ಮ ಮನಸ್ಸಿನಿಂದ ದೂರ ಮಾಡಿ, ಭಗವಂತನಿಗೆ ಬಿಟ್ಟುಬಿಡಿ. ಅವನಲ್ಲಿ ವಿಶ್ವಾಸವಿಡಿ. ಚಿಂತೆಯೇ ಹೆಚ್ಚಿನ ಕಷ್ಟಗಳಿಗೆ ಕಾರಣ. ರೋಗ ಬರುವ ಮೊದಲೇ ನರಳುವುದೇಕೆ? ನಮ್ಮ ಹೆಚ್ಚಿನ ರೋಗಗಳು ಭಯದಿಂದಲೇ ಬರುವುವಾದ್ದರಿಂದ, ನೀವು ಭಯವನ್ನು ಬಿಟ್ಟರೆ ಒಡನೆಯೇ ಸ್ವತಂತ್ರರಾಗುವಿರಿ. ಉಪಶಮನವೂ ತತ್‌ಕ್ಷಣದಲ್ಲಿ. ಪ್ರತಿರಾತ್ರಿ ಮಲಗುವ ಮುನ್ನ, “ಭಗವಂತ ನನ್ನೊಂದಿಗಿದ್ದಾನೆ; ನಾನು ಸಂರಕ್ಷಿತ,” ಎಂದು ದೃಢವಾಗಿ ಹೇಳಿಕೊಳ್ಳಿ. ಮಾನಸಿಕವಾಗಿ ನಿಮ್ಮನ್ನು ಭಗವತ್ ಚೈತನ್ಯದಿಂದ ಆವರಿಸಿಕೊಳ್ಳಿ….ಆಗ ಅವನ ಅದ್ಭುತ ರಕ್ಷಣೆಯನ್ನು ಅನುಭವಿಸುವಿರಿ.

ಪ್ರಜ್ಞೆಯನ್ನು ಭಗವಂತನಲ್ಲಿಟ್ಟಾಗ, ನಿಮಗೆ ಯಾವ ಭಯವೂ ಇರುವುದಿಲ್ಲ; ಆಗ ಪ್ರತಿಯೊಂದು ವಿಘ್ನವನ್ನು ಧೈರ್ಯ ಮತ್ತು ವಿಶ್ವಾಸದಿಂದ ದಾಟಲು ಸಾಧ್ಯ.

ಭಯವು ಹೃದಯದಿಂದ ಬರುತ್ತದೆ. ನಿಮಗೆ ಎಂದಾದರೂ ಅನಾರೋಗ್ಯದ ಅಥವಾ ಅಪಘಾತದ ಭಯವುಂಟಾದರೆ, ಆಳವಾಗಿ, ನಿಧಾನವಾಗಿ, ಲಯಬದ್ಧವಾಗಿ ಹಲವಾರು ಬಾರಿ ಉಸಿರೆಳೆದುಕೊಂಡು, ಉಸಿರು ಬಿಡಿ. ಪ್ರತಿ ನಿಶ್ವಾಸದೊಂದಿಗೆ ಬಿಗುವನ್ನು ಸಡಿಲಿಸಿ. ಇದು ರಕ್ತಪರಿಚಲನೆಯು ಯಥಾಸ್ಥಿತಿಗೆ ಬರಲು ನೆರವಾಗುತ್ತದೆ. ನಿಮ್ಮ ಹೃದಯವು ನಿಜವಾಗಿಯೂ ಶಾಂತಿಯಲ್ಲಿದ್ದರೆ, ನೀವು ಭಯ ಪಡಲು ಸಾಧ್ಯವೇ ಇಲ್ಲ.

ದೇಹದ ಸಡಿಲಿಕೆಗಾಗಿ ತಂತ್ರ

ಇಚ್ಛಾಶಕ್ತಿಯೊಂದಿಗೆ ಬಿಗಿಗೊಳಿಸಿ (Tense): ಇಚ್ಛಾಶಕ್ತಿಯ ಆದೇಶದಿಂದ ಪ್ರಾಣಶಕ್ತಿಯು (ಬಿಗಿಗೊಳಿಸುವುದರ ಮೂಲಕ) ಇಡೀ ದೇಹದ ಯಾವುದೇ ಭಾಗವನ್ನು ತುಂಬಿಕೊಳ್ಳುವಂತೆ ನಿರ್ದೇಶಿಸಿ. ಅಲ್ಲಿ ಚೈತನ್ಯವುಶಕ್ತಿ ತುಂಬುತ್ತ, ಹೊಸ ಚೈತನ್ಯ ನೀಡುತ್ತ, ಅನುರಣಿಸುತ್ತಿರುವುದನ್ನು ಅನುಭವಿಸಿ. ದೇಹವನ್ನು ಸಡಿಲಿಸಿ, ಅನುಭವಿಸಿ: ಬಿಗಿತವನ್ನು ಸಡಿಲಿಸಿ, ಹಾಗೂ ನವ ಚೈತನ್ಯ ಮತ್ತು ಜೀವಶಕ್ತಿಯ ಹಿತವಾದ ಪುಳಕವನ್ನು ಪುನಶ್ಚೇತನಗೊಳಿಸಲ್ಪಟ್ಟ ಭಾಗದಲ್ಲಿ ಅನುಭವಿಸಿ. ನೀವು ಶರೀರವಲ್ಲ ಎಂಬುದನ್ನು ಅರಿಯಿರಿ; ನೀವು, ಈ ಶರೀರಕ್ಕೆ ಆಧಾರವಾಗಿರುವಂತಹ ಚೈತನ್ಯವೇ ಆಗಿರುವಿರಿ. ಈ ತಂತ್ರದ ಅಭ್ಯಾಸದಿಂದ ಉಂಟಾದ ನಿಶ್ಚಲತೆಯಿಂದ ಬರುವ ಶಾಂತಿಯನ್ನು, ಸ್ವಾತಂತ್ರ್ಯವನ್ನು ಹಾಗೂ ಹೆಚ್ಚಾದ ಅರಿವನ್ನು ಅನುಭವಿಸಿ.

ಜನರು ನನ್ನ ಬಳಿ ಬಂದು ಅವರ ಚಿಂತೆಗಳ ಬಗ್ಗೆ ಮಾತನಾಡುತ್ತಾರೆ. ನಾನವರಿಗೆ ಶಾಂತವಾಗಿ ಕುಳಿತು ಕೊಳ್ಳುವಂತೆ, ಧ್ಯಾನಿಸುವಂತೆ ಮತ್ತು ಪ್ರಾರ್ಥಿಸುವಂತೆ ಒತ್ತಾಯಿಸುತ್ತೇನೆ; ಆಂತರಿಕ ಶಾಂತತೆಯ ಭಾವವನ್ನು ಅನುಭವಿಸಿದಾಗ, ಸಮಸ್ಯೆಯ ಪರ್ಯಾಯ ಮಾರ್ಗಗಳನ್ನು ಯೋಚಿಸಿದಾಗ, ಆ ಸಮಸ್ಯೆಯ ಪರಿಹಾರ ಅಥವಾ ನಿವಾರಣೆಯು ದೊರಕುತ್ತದೆ. ಭಗವಂತನಲ್ಲಿ ಮನಸ್ಸು ಶಾಂತವಾಗಿದ್ದಾಗ, ಭಗವಂತನಲ್ಲಿ ಶ್ರದ್ಧೆ ದೃಢವಾಗಿದ್ದಾಗ, ಅವರು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಕೇವಲ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಅಥವಾ ಅವುಗಳನ್ನು ಚಿಂತಿಸುತ್ತಿದ್ದರೆ ಪರಿಹಾರ ದೊರಕಲಾರದು. ನೀವು ಶಾಂತವಾಗುವವರೆಗೂ ಧ್ಯಾನ ಮಾಡಿ; ನಂತರ ನಿಮ್ಮ ಮನಸ್ಸನ್ನು ಸಮಸ್ಯೆಯ ಮೇಲಿಟ್ಟು, ಭಗವಂತನ ಸಹಾಯಕ್ಕಾಗಿ ಆಳವಾಗಿ ಪ್ರಾರ್ಥಿಸಿ. ಸಮಸ್ಯೆಯ ಮೇಲೆ ನಿಮ್ಮ ಗಮನವಿರಲಿ, ಚಿಂತೆಯ ಕಷ್ಟಕರ ಉದ್ವೇಗಕ್ಕೆ ಒಳಗಾಗದೇ, ನೀವು ಪರಿಹಾರವನ್ನು ಕಂಡುಕೊಳ್ಳುವಿರಿ.

ನಿಮ್ಮ ಮನಸ್ಸು ಅಸಂಖ್ಯಾತ ಕಾರಣಗಳನ್ನು ಕೊಟ್ಟ ನಂತರವೂ, ನಿಮ್ಮೊಳಗೆ ಶಾಂತಿಯ ಅನುಭವವಾಗುವವರೆಗೂ ನೀವು ಕುಳಿತು ಭಗವಂತನ ಧ್ಯಾನವನ್ನು, ಮಾಡಬೇಕೆಂದು ನೆನಪಿಡಿ. ನಂತರ ಭಗವಂತನಿಗೆ ಹೇಳಿ, “ನಾನು ಕೋಟ್ಯಾಂತರ ರೀತಿಯಲ್ಲಿ ಯೋಚಿಸಿದರೂ, ನನ್ನ ಸಮಸ್ಯೆಯನ್ನು ನಾನೊಬ್ಬನೇ ಪರಿಹರಿಸಿಕೊಳ್ಳಲಾರೆ. ಆದರೆ ಅದನ್ನು ನಿನ್ನ ಕೈಗಳಲ್ಲಿ ಇರಿಸಿದಾಗಲೇ ನಾನು ಪರಿಹರಿಸಿಕೊಳ್ಳಲು ಸಾಧ್ಯ, ಮೊದಲು ನಿನ್ನ ಮಾರ್ಗದರ್ಶನವನ್ನು ಕೋರಿ, ನಂತರ, ಸಾಧ್ಯವಿರಬಹುದಾದ ಪರಿಹಾರಕ್ಕಾಗಿ ಎಲ್ಲ ದೃಷ್ಟಿಕೋನಗಳಿಂದ ಯೋಚಿಸುವುದರ ಮೂಲಕ.” ಸ್ವಸಹಾಯ ಮಾಡಿಕೊಳ್ಳುವವರಿಗೆ ದೇವರು ಸಹಾಯ ಮಾಡೇ ಮಾಡುತ್ತಾನೆ. ಧ್ಯಾನದಲ್ಲಿ ನೀವು ದೇವರನ್ನು ಪ್ರಾರ್ಥಿಸಿದ ನಂತರ ನಿಮ್ಮ ಮನವು ಶಾಂತಿ ಮತ್ತು ವಿಶ್ವಾಸದಿಂದ ತುಂಬಿದಾಗ, ನೀವು ನಿಮ್ಮ ಸಮಸ್ಯೆಗಳಿಗೆ ವಿವಿಧ ಪರಿಹಾರಗಳನ್ನು ಕಾಣುತ್ತೀರಿ; ನಿಮ್ಮ ಮನಸ್ಸು ಶಾಂತವಾಗಿರುವುದರಿಂದ ನೀವು ಅದರಲ್ಲಿ ಉತ್ತಮವಾದುದನ್ನು ಆಯ್ಕೆಮಾಡಿಕೊಳ್ಳಲು ಸಮರ್ಥರಾಗುತ್ತೀರಿ. ಈ ಪರಿಹಾರ ಮಾರ್ಗವನ್ನು ಅನುಸರಿಸಿ, ಆಗ ನೀವು ಯಶಸ್ಸನ್ನು ಕಂಡುಕೊಳ್ಳುವಿರಿ. ಇದು ನಿಮ್ಮ ದೈನಂದಿನ ಜೀವನದಲ್ಲಿ ಧರ್ಮದ ವಿಜ್ಞಾನವನ್ನು ಅನ್ವಯಿಸುವ ಬಗೆಯಾಗಿದೆ.

ನಾವು ಎಷ್ಟೇ ಕಾರ್ಯ ನಿರತರಾಗಿದ್ದರೂ ಆಗಿಂದಾಗ್ಗೆ ನಮ್ಮ ಮನಸ್ಸನ್ನು ಚಿಂತೆಗಳಿಂದ ಮತ್ತು ಎಲ್ಲ ಕರ್ತವ್ಯಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಮರೆಯಬಾರದು….ಅದರಲ್ಲೂ ವಿಶೇಷವಾಗಿ, ಚಿಂತಿತ- ರಾಗಿದ್ದಾಗ ಸತತವಾಗಿ ಒಂದು ನಿಮಿಷದವರೆಗೆ ನಕಾರಾತ್ಮಕವಾಗಿ ಚಿಂತಿಸದೆ, ಮನಸ್ಸನ್ನು ಅಂತರಂಗದ ಶಾಂತಿಯಲ್ಲಿ ನೆಲೆಗೊಳಿಸಿ. ನಂತರ ನಾವು ಹಲವು ನಿಮಿಷಗಳವರೆಗೆ ಶಾಂತವಾದ ಮನಸ್ಸಿನಿಂದ ಇರಲು ಪ್ರಯತ್ನಿಸಬೇಕು. ಅದಾದ ನಂತರ ಒಂದು ಒಳ್ಳೆಯ ಘಟನೆಯನ್ನು ನೆನಪಿಸಿಕೊಳ್ಳಿ; ಅದನ್ನೇ ಕುರಿತು ಯೋಚಿಸಿ ಮತ್ತು ಅದನ್ನು ಕಣ್ಣ ಮುಂದೆ ತಂದುಕೊಳ್ಳಿ; ಚಿಂತೆಗಳನ್ನು ಸಂಪೂರ್ಣವಾಗಿ ಮರೆಯುವವರೆಗೆ ಒಂದು ಸಂತೋಷಕರವಾದ ಅನುಭವವನ್ನು ಮಾನಸಿಕವಾಗಿ ಮತ್ತೆ ಮತ್ತೆ ಅನುಭವಿಸಿ.

ಯೋಚನೆ ಮಾಡುವ, ಮಾತನಾಡುವ, ಅನುಭವಿಸುವ ಮತ್ತು ವ್ಯವಹರಿಸುವ ಎಲ್ಲಾ ಶಕ್ತಿಗಳು ಭಗವಂತನಿಂದ ಬರುತ್ತವೆ ಹಾಗೂ ಅವನು ಸದಾ ನಮ್ಮೊಂದಿಗಿದ್ದು ನಮ್ಮನ್ನು ಪ್ರೋತ್ಸಾಹಿಸುತ್ತ ಮಾರ್ಗದರ್ಶಿಸುತ್ತಿದ್ದಾನೆ ಎಂಬ ಅರಿವು, ಆ ಕೂಡಲೇ ನರೋದ್ರೇಕದಿಂದ ಮುಕ್ತಿ ನೀಡುತ್ತದೆ. ಈ ಅರಿವಿನೊಂದಿಗೆ ದಿವ್ಯಾನಂದದ ಸ್ಪುರಣಗಳು ಕಾಣಿಸಿಕೊಳ್ಳುತ್ತವೆ; ಕೆಲವೊಮ್ಮೆ ಒಂದು ಆಳವಾದ ಜ್ಞಾನೋದಯ ನಮ್ಮನ್ನು ಆವರಿಸುತ್ತದೆ, ಅದು ಭಯದ ಪರಿಕಲ್ಪನೆಯನ್ನೇ ತೊಡೆದುಹಾಕುತ್ತದೆ. ಭಗವಂತನ ಶಕ್ತಿಯು ಸಾಗರದಂತೆ ಒಳಹರಿದು, ಸ್ವಚ್ಛಗೊಳಿಸುವ ಪ್ರವಾಹದಂತೆ ಹೃದಯದ ಮೂಲಕ ಉಕ್ಕಿ ಹರಿಯುತ್ತ ಭ್ರಮಾಲೋಕದ ಎಲ್ಲ ಸಂದೇಹ, ನರೋದ್ರೇಕ ಮತ್ತು ಭಯಗಳನ್ನು ಅಳಿಸಿಹಾಕುತ್ತದೆ. ಭೌತ ವಿಷಯಗಳ ಭ್ರಾಂತಿಯಾದ, ಕೇವಲ ತಾನೊಂದು ನಶ್ವರ ದೇಹವೆಂಬ ಪ್ರಜ್ಞೆಯನ್ನು ಭಗವಂತನ ಮಧುರವಾದ ಪ್ರಶಾಂತತೆಯ ಸಂಪರ್ಕ ಹೊಂದುವ ಮೂಲಕ ಮೀರಿಹೋಗಬಹುದು, ಅದು ದೈನಂದಿನ ಧ್ಯಾನದಿಂದ ಮಾತ್ರ ಸಾಧ್ಯ. ಆಗ ನಮಗೆ, ಭಗವಂತನ ವಿಶ್ವ ಸಾಗರದಲ್ಲಿ ದೇಹವು ಚೈತನ್ಯದ ಒಂದು ಸಣ್ಣ ನೀರ್ಗುಳ್ಳೆ ಎಂಬ ಅರಿವಾಗುತ್ತದೆ.

ಭಗವಂತನನ್ನು ಪಡೆಯಲು ಅತ್ಯುನ್ನತ ಪ್ರಯತ್ನ ಮಾಡಿ. ಪ್ರಾಯೋಗಿಕವಾದ ಸತ್ಯವನ್ನೇ ನಾನು ನಿಮಗೆ ವ್ಯವಹಾರಿಕವಾಗಿ ಹೇಳುತ್ತಿದ್ದೇನೆ; ಹಾಗೂ ನಿಮ್ಮ ಪ್ರಜ್ಞೆಯಲ್ಲಿರುವ ಎಲ್ಲ ನೋವನ್ನು ನಿವಾರಿಸುವ ಆ ತತ್ವವನ್ನೇ ನೀಡುತ್ತಿರುವೆ. ಯಾವುದಕ್ಕೂ ಹೆದರದಿರಿ….ಆಳವಾಗಿ ಶ್ರದ್ಧೆಯಿಂದ ಧ್ಯಾನ ಮಾಡಿ. ಆಗ ಒಂದು ದಿನ ಭಗವಂತನೊಂದಿಗೆ ಆನಂದದಲ್ಲಿ ಎಚ್ಚರಗೊಂಡು ಜನರು ತಾವು ಕಷ್ಟಪಡುತ್ತಿದ್ದೇವೆ ಎಂದು ಕೊಳ್ಳುವುದು ಎಂತಹ ಮೂರ್ಖತನ ಎನ್ನುವುದು ಅರಿವಾಗುತ್ತದೆ. ನೀವೂ, ನಾನು ಮತ್ತು ಅವರೆಲ್ಲರೂ ಪರಿಶುದ್ಧ ಚೈತನ್ಯರು.

ದೃಢೀಕರಣ

ದೃಢೀಕರಣದ ಸಿದ್ಧಾಂತ ಮತ್ತು ಸಲಹೆಗಳು

“ನಾನು ವಿರಮಿಸುತ್ತ ನನ್ನೆಲ್ಲ ಮಾನಸಿಕ ಹೊರೆಗಳನ್ನು ಬದಿಗಿರಿಸಿ, ನನ್ನ ಮೂಲಕ ಭಗವಂತನು ತನ್ನ ಪರಿಪೂರ್ಣ ಪ್ರೇಮ, ಶಾಂತಿ ಮತ್ತು ಜ್ಞಾನವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತೇನೆ.”

“ಓ ಸರ್ವವ್ಯಾಪಿ ಸಂರಕ್ಷಕನೇ! ಯುದ್ಧದ ಕಾರ್ಮೋಡವು ಅನಿಲ ಹಾಗು ಅಗ್ನಿಯ ಮಳೆಗಳೆರೆದಾಗ, ನೀನು ನನ್ನ ಸಿಡಿಗುಂಡಿನ ರಕ್ಷಾಕವಚನಾಗಿರು.”

“ಬದುಕಿನಲ್ಲಿ, ಸಾವಿನಲ್ಲಿ, ಅನಾರೋಗ್ಯದಲ್ಲಿ, ಬರಗಾಲದಲ್ಲಿ, ಮಾರಕ ಬೇನೆಯಲ್ಲಿ ಅಥವಾ ಬಡತನದಲ್ಲಿ ನಾನು ಸದಾ ನಿನ್ನನ್ನೇ ನಂಬಿರುವಂತೆ ಮಾಡು. ನಾನು ಬಾಲ್ಯ, ಯೌವ್ವನ, ವೃದ್ಧಾಪ್ಯ ಹಾಗೂ ಪ್ರಾಪಂಚಿಕ ವಿಪ್ಲವಗಳಿಂದ ಪ್ರಭಾವಿತವಾಗದ ಅಮರ ಆತ್ಮವೆಂದು ಅರಿಯಲು ನೆರವಾಗು.”

ಹೆಚ್ಚಿನ ಪರಿಶೋಧನೆಗಾಗಿ

ಇದನ್ನು ಹಂಚಿಕೊಳ್ಳಿ