ಮರಣವನ್ನು ಮತ್ತು ನಷ್ಟವನ್ನು ಅರ್ಥಮಾಡಿಕೊಳ್ಳುವುದು

ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

Soul leaving body at death.ಸಾಮಾನ್ಯ ಮನುಷ್ಯ ಸಾವನ್ನು ಭಯ ಮತ್ತು ದುಃಖದಿಂದ ನೋಡುತ್ತಾನಾದರೂ ಈ ಹಿಂದೆ ಸಂದು ಹೋದವರು ಅದು ಶಾಂತಿ ಮತ್ತು ಸ್ವಾತಂತ್ರ್ಯದ ಒಂದು ಅದ್ಭುತ ಅನುಭವ ಎಂಬುದನ್ನು ಅರಿತಿದ್ದಾರೆ.

ಸಾವಿನಲ್ಲಿ ನೀವು ಭೌತ ಶರೀರದ ಎಲ್ಲ ಇತಿಮಿತಿಗಳನ್ನೂ ಮರೆಯುವಿರಿ ಹಾಗೂ ಎಷ್ಟು ಮುಕ್ತರಾಗಿದ್ದೀರಿ ಎನ್ನುವುದನ್ನು ಅರಿಯುವಿರಿ. ಮೊದಲ ಕೆಲವು ಕ್ಷಣಗಳಲ್ಲಿ ಭಯದ ಸಂವೇದನೆಯಿರುತ್ತದೆ — ಅಜ್ಞಾತದ ಭಯ, ಪ್ರಜ್ಞೆಗೆ ಪರಿಚಿತವಿಲ್ಲದ ಯಾವುದೋ ಒಂದರ ಭಯ. ಆದರೆ ಅದರ ನಂತರ ಒಂದು ಅದ್ಭುತ ಅರಿವು ಮೂಡುತ್ತದೆ: ಆತ್ಮವು ನೆಮ್ಮದಿ ಮತ್ತು ಬಿಡುಗಡೆಯ ಆನಂದದ ಸಂವೇದನೆಯನ್ನು ಅನುಭವಿಸುತ್ತದೆ. ಆಗ ನೀವು ಈ ಮರ್ತ್ಯ ಶರೀರದ ಹೊರತಾಗಿಯೂ ಅಸ್ತಿತ್ವದಲ್ಲಿರುವಿರಿ ಎಂಬುದನ್ನು ಅರಿಯುವಿರಿ.

ನಾವೆಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು, ಆದ್ದರಿಂದ ಸಾವಿಗೆ ಅಂಜುವುದರಿಂದ ಏನೂ ಪ್ರಯೋಜನವಿಲ್ಲ. ನಿದ್ದೆಯಲ್ಲಿ ನಿಮ್ಮ ಶರೀರದ ಮೇಲಿನ ಪ್ರಜ್ಞೆಯನ್ನು ಕಳೆದುಕೊಳ್ಳುವ ಅರಿವಿದ್ದರೂ ನೀವು ದುಃಖ ಪಡುವುದಿಲ್ಲ; ನಿದ್ದೆಯನ್ನು, ಎದುರು ನೋಡಬೇಕಾದಂತಹ ಬಿಡುಗಡೆಯ ಸ್ಥಿತಿ ಎಂದು ನೀವು ಸ್ಟೀಕರಿಸುವಿರಿ. ಹಾಗೆಯೇ ಸಾವೂ ಕೂಡ; ಅದು ಒಂದು ವಿಶ್ರಾಂತಿಯ ಸ್ಥಿತಿ, ಜೀವನದಿಂದ ದೊರೆತ ವಿಶ್ರಾಂತಿ ವೇತನ. ಇದರಲ್ಲಿ ಭಯಪಡುವಂಥದ್ದೇನೂ ಇಲ್ಲ. ಸಾವು ಬಂದಾಗ ಅದನ್ನು ಗೇಲಿ ಮಾಡಿ. ನೀವು ಸಾಯಲು ಸಾಧ್ಯವಿಲ್ಲ ಎಂಬ ಒಂದು ದೊಡ್ಡ ಪಾಠ ಕಲಿಯಲೆಂದು ಇರುವ ಒಂದು ಅನುಭವವೇ ಸಾವು.

ನಮ್ಮ ನಿಜವಾದ ಅಸ್ತಿತ್ವವಾದ ಆತ್ಮವು ಅಮರ. ಸಾವು ಎಂದು ಕರೆಯಲ್ಪಡುವ ಆ ಸ್ಥಿತ್ಯಂತರದಲ್ಲಿ ನಾವು ಸ್ವಲ್ಪ ಹೊತ್ತು ನಿದ್ರಿಸಬಹುದು, ಆದರೆ ನಮ್ಮನ್ನೆಂದಿಗೂ ನಾಶಪಡಿಸಲು ಸಾಧ್ಯವಿಲ್ಲ. ನಮಗೆ ಅಸ್ತಿತ್ವವಿದೆ, ಆ ಅಸ್ತಿತ್ವ ಶಾಶ್ವತ. ಅಲೆ ದಡಕ್ಕೆ ಅಪ್ಪಳಿಸುತ್ತದೆ ನಂತರ ಸಾಗರಕ್ಕೆ ಹಿಂದಿರುಗುತ್ತದೆ; ಅದು ಕಳೆದುಹೋಗುವುದಿಲ್ಲ. ಅದು ಸಾಗರದೊಂದಿಗೆ ಒಂದಾಗುತ್ತದೆ ಅಥವಾ ಇನ್ನೊಂದು ಅಲೆಯ ರೂಪದಲ್ಲಿ ಹಿಂದಿರುಗಿ ಬರುತ್ತದೆ. ಈ ದೇಹವು ಅಸ್ತಿತ್ವಕ್ಕೆ ಬಂದಿದೆ, ನಂತರ ಅದು ಇಲ್ಲವಾಗುತ್ತದೆ; ಆದರೆ ಅದರೊಳಗಿರುವ ಆತ್ಮಸತ್ವ ಎಂದೆಂದಿಗೂ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಆ ಚಿರಂತನ ಪ್ರಜ್ಞೆಯನ್ನು ಯಾವುದರಿಂದಲೂ ಕೊನೆಗಾಣಿಸಲಾಗುವುದಿಲ್ಲ.

ವಿಜ್ಞಾನ ಸಾಧಿಸಿ ತೋರಿಸಿದಂತೆ ಭೌತವಸ್ತುವಿನ ಒಂದೇ ಒಂದು ಕಣವನ್ನೂ ಅಥವಾ ಶಕ್ತಿಯ ಒಂದೇ ಒಂದು ತರಂಗವನ್ನೂ ನಾಶಪಡಿಸಲಾಗುವುದಿಲ್ಲ; ಮನುಷ್ಯನ ಆತ್ಮ ಅಥವಾ ದಿವ್ಯಸತ್ವವೂ ಅವಿನಾಶಿ. ವಸ್ತು ಬದಲಾವಣೆಗೊಳಗಾಗುತ್ತದೆ; ಆತ್ಮವು ಬದಲಾಗುವ ಅನುಭವಗಳಿಗೊಳಗಾಗುತ್ತದೆ. ತೀವ್ರ ರೂಪದ ಬದಲಾವಣೆಗಳನ್ನು ಸಾವು ಎನ್ನುತ್ತಾರೆ, ಆದರೆ ಸಾವು ಅಥವಾ ಸ್ವರೂಪದ ಬದಲಾವಣೆಯು ದಿವ್ಯಸತ್ವವನ್ನು ಬದಲಾಯಿಸುವುದಿಲ್ಲ ಅಥವಾ ನಾಶಪಡಿಸುವುದಿಲ್ಲ.

ಶರೀರ ಕೇವಲ ಒಂದು ಉಡುಪು. ನಿಮ್ಮ ಜೀವನದಲ್ಲಿ ಅದೆಷ್ಟು ಬಾರಿ ನಿಮ್ಮ ಉಡುಪನ್ನು ಬದಲಾಯಿಸಿದ್ದೀರಿ, ಆದರೂ ಅದರಿಂದಾಗಿ ನೀವು ಬದಲಾಗಿದ್ದೀರಿ ಎಂದು ನೀವು ಹೇಳುವುದಿಲ್ಲ. ಹಾಗೆಯೇ, ನೀವು ನಿಮ್ಮ ಸಾವಿನಲ್ಲಿ ಮಾಂಸಲ ಶರೀರವೆಂಬ ಉಡುಪನ್ನು ಕಳಚಿದಾಗ ನೀವು ಬದಲಾಗುವುದಿಲ್ಲ. ನೀವು ಅದೇ ಅಮರ ಆತ್ಮ, ದೇವರ ಮಗು.

“ಸಾವು” ಎಂಬ ಶಬ್ದವೇ ಒಂದು ದೊಡ್ಡ ಅಪಪ್ರಯೋಗ. ಏಕೆಂದರೆ, ಸಾವು ಎನ್ನುವುದೇ ಇಲ್ಲ. ನಿಮಗೆ ಬದುಕು ಸಾಕೆನಿಸಿದಾಗ ನಿಮ್ಮ ಶರೀರವೆಂಬ ಓವರ್‌ಕೋಟನ್ನು (ಮೆಲುವಂಗಿ) ಕಳಚಿ ಸೂಕ್ಷ್ಮ ಪ್ರಪಂಚಕ್ಕೆ ಹಿಂತಿರುಗಿ ಹೋಗುತ್ತೀರಿ ಅಷ್ಟೆ.

ಭಗವದ್ಗೀತೆಯು ಆತ್ಮದ ಅಮರತ್ವದ ಬಗ್ಗೆ ಬಹು ಸುಂದರವಾಗಿ ಮತ್ತು ಸಾಂತ್ವನ ಭರಿತವಾಗಿ ಹೇಳುತ್ತದೆ:

ಆತ್ಮವು ಎಂದೂ ಹುಟ್ಟಲಿಲ್ಲ; ಆತ್ಮವು ಎಂದಿಗೂ ಅಳಿಯುವುದಿಲ್ಲ;
ಆತ್ಮವು ಇರದಿದ್ದ ಸಮಯವೇ ಇಲ್ಲ; ಆದ್ಯಂತಗಳು ಕೇವಲ ಕನಸುಗಳು!
ಹುಟ್ಟು, ಸಾವು ಮತ್ತು ಬದಲಾವಣೆಗಳಿಲ್ಲದೆ ಆತ್ಮವು ಎಂದೆಂದಿಗೂ ಚಿರಂತನವಾಗಿರುತ್ತದೆ;
ಸಾವು ಆತ್ಮವನ್ನು ಎಂದಿಗೂ ಸ್ಪರ್ಶಿಸಿಲ್ಲ, ಅದರ ನಿವಾಸ ಅಳಿದಂತೆ ಕಂಡರೂ!

ಸಾವೇ ಅಂತಿಮವಲ್ಲ. ನಿಮ್ಮ ಈಗಿನ ಶರೀರ ಮತ್ತು ಪರಿಸರಗಳು ತಮ್ಮ ಉದ್ದೇಶವನ್ನು ಮುಗಿಸಿವೆ ಎಂದು ಕರ್ಮ ಅಥವಾ ವಿಧಿನಿಯಮವು ತೀರ್ಮಾನಿಸಿದಾಗ, ಅಥವಾ ನೀವು ಕ್ಲೇಶಗಳಿಂದ ಭೌತಿಕ ಅಸ್ತಿತ್ವದ ಭಾರವನ್ನು ಹೊರಲು ಅತ್ಯಂತ ಅಶಕ್ತರಾದಾಗ ಅಥವಾ ಬಸವಳಿದಾಗ ನಿಮಗೆ ನೀಡಲಾಗುವ ತಾತ್ಕಾಲಿಕ ಬಿಡುಗಡೆಯೇ ಸಾವು. ಯಾತನೆ ಪಡುತ್ತಿರುವವರಿಗೆ ಸಾವೆಂದರೆ ಮೂಳೆಮಾಂಸಗಳ ಯಾತನಾಮಯ ಹಿಂಸೆಯಿಂದ ಶಾಂತಿ ಮತ್ತು ಸಮಾಧಾನದ ಸ್ಥಿತಿಯ ಪುನರುತ್ಥಾನವಾದಂತೆ. ಹಿರಿಯರಿಗೆ ಇದು ಜೀವನದ ಹಲವಾರು ವರ್ಷಗಳ ಹೆಣಗಾಟಕ್ಕೆ ದೊರೆತ ನಿವೃತ್ತಿವೇತನ. ಎಲ್ಲರಿಗೂ ಇದು ಸ್ವಾಗತಾರ್ಹ ವಿಶ್ರಾಂತಿ.

ಈ ಜಗತ್ತು ಸಾವಿನಿಂದ ತುಂಬಿದೆ ಮತ್ತು ನೀವು ಕೂಡ ನಿಮ್ಮ ಶರೀರವನ್ನು ತೊರೆಯಬೇಕಾಗುವುದು ಎನ್ನುವುದರ ಬಗ್ಗೆ ನೀವು ಚಿಂತನೆ ನಡೆಸಿದಾಗ ದೇವರ ಯೋಜನೆ ಬಹಳ ಕ್ರೂರ ಎಂದೆನಿಸುತ್ತದೆ. ಅವನು ದಯಾಮಯ ಎನ್ನುವುದನ್ನು ನೀವು ಊಹಿಸಲು ಸಾಧ್ಯವೇ ಇಲ್ಲ.

ಆದರೆ ಸಾವಿನ ಪ್ರಕ್ರಿಯೆಯನ್ನು ನಿಮ್ಮ ಜ್ಞಾನದೃಷ್ಟಿಯಿಂದ ವೀಕ್ಷಿಸಿದಾಗ, ಭಗವಂತನ ಯೋಚನೆಯೊಂದು ಬದಲಾವಣೆಯೆಂಬ ದುಃಸ್ವಪ್ನದ ಮೂಲಕ ಹಾದುಹೋಗಿ ಅವನಲ್ಲಿ ಪುನಃ ಆನಂದಮಯ ಮುಕ್ತಿಗೆ ಮರಳುತ್ತಿದೆಯಷ್ಟೆ ಎಂದು ನೀವು ಅರಿಯುವಿರಿ. ಅವರವರ ಅರ್ಹತೆಗಳಿಗನುಗುಣವಾಗಿ ಸಂತ ಮತ್ತು ಪಾಪಿಗಳಿಬ್ಬರಿಗೂ ಸಾವಿನಲ್ಲಿ ಹೆಚ್ಚು ಅಥವಾ ಕಡಿಮೆ ಪ್ರಮಾಣದ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಸಾವಿನ ನಂತರ ಆತ್ಮಗಳು ಹೋಗುವ ಸ್ಥಳವಾದ ದೇವರ ಕನಸಿನ ಸೂಕ್ಷ್ಮಲೋಕದಲ್ಲಿ ಅವರು ಭೂಮಿಯ ಮೇಲಿನ ತಮ್ಮ ಜೀವನದಲ್ಲಿ ಎಂದೂ ಕಾಣದಿದ್ದಂತಹ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ.

ಆದ್ದರಿಂದ ಸಾವೆಂಬ ಭ್ರಮೆಯನ್ನು ಹಾದುಹೋಗುತ್ತಿರುವ ವ್ಯಕ್ತಿಯ ಬಗ್ಗೆ ಮರುಗಬೇಡಿ, ಏಕೆಂದರೆ, ಸ್ವಲ್ಪ ಸಮಯದಲ್ಲಿ ಅವನು ಸ್ವತಂತ್ರನಾಗುತ್ತಾನೆ. ಒಂದು ಬಾರಿ ಅವನು ಆ ಭ್ರಮೆಯನ್ನು ದಾಟಿ ಹೋದಲ್ಲಿ, ಸಾವು ಅಷ್ಟೇನೂ ಕೆಟ್ಟದ್ದಲ್ಲ ಎಂದು ಅವನಿಗೆ ತಿಳಿಯುತ್ತದೆ. ತನ್ನ ಮರ್ತ್ಯ ಸ್ಥಿತಿಯು ಕೇವಲ ಒಂದು ಕನಸು ಎನ್ನುವುದನ್ನು ಅವನು ಅರಿಯುತ್ತಾನೆ ಹಾಗೂ ತನ್ನನ್ನು ಈಗ ಯಾವ ಅಗ್ನಿಯೂ ಸುಡಲಾರದು, ಯಾವ ನೀರೂ ಮುಳುಗಿಸಲಾರದು ಎಂದು ಆನಂದಿಸುತ್ತಾನೆ; ಅವನು ಸ್ವತಂತ್ರ ಮತ್ತು ಸುರಕ್ಷಿತ.

ಸಾಯುತ್ತಿರುವ ವ್ಯಕ್ತಿಯ ಪ್ರಜ್ಞೆಯು ದೇಹದ ತೂಕ, ಉಸಿರಾಟದ ಅಗತ್ಯತೆ ಮತ್ತು ದೇಹದ ಯಾವುದೇ ನೋವುಗಳಿಂದ ಥಟ್ಟನೆ ಮುಕ್ತ ವಾಗುವುದನ್ನು ಗಮನಿಸುತ್ತದೆ. ಆತ್ಮಕ್ಕೆ ಬಹಳ ಶಾಂತಿಯುತ, ಮಸುಕಾದ, ಮಂದವಾದ ಬೆಳಕಿನ ಸುರಂಗದ ಮೂಲಕ ಹಾದುಹೋಗುತ್ತಿರುವ ಅನುಭವವಾಗುತ್ತದೆ. ನಂತರ ಆತ್ಮವು ಮೈಮರೆಸುವಂತಹ ಗಾಢ ನಿದ್ರಾವಸ್ಥೆಗೆ ಜಾರುತ್ತದೆ; ಅಂದರೆ, ಶರೀರವು ಅತ್ಯಂತ ಗಾಢ ನಿದ್ರೆಯಲ್ಲಿ ಅನುಭವಿಸುವ ಆನಂದಕ್ಕಿಂತ ಕೋಟಿಪಾಲು ಹೆಚ್ಚಿನ ಆನಂದ ಹಾಗೂ ಗಾಢತೆ…

ಮರಣದ ನಂತರದ ಸ್ಥಿತಿಯನ್ನು ವಿವಿಧ ವ್ಯಕ್ತಿಗಳು ಅವರು ಭೂಮಿಯ ಮೇಲೆ ಇದ್ದಾಗ ಜೀವನ ನಡೆಸಿದ ರೀತಿಗನುಗುಣವಾಗಿ ವಿಧವಿಧವಾಗಿ ಅನುಭವಿಸುತ್ತಾರೆ. ಹೇಗೆ ಬೇರೆ ಬೇರೆ ವ್ಯಕ್ತಿಗಳಲ್ಲಿ ಅವರ ನಿದ್ರಿಸುವ ಕಾಲಾವಧಿ ಮತ್ತು ಗಾಢತೆಯಲ್ಲಿ ವ್ಯತ್ಯಾಸಗಳಿರುತ್ತವೆಯೋ ಹಾಗೆ ಅವರ ಮರಣದ ನಂತರದ ಅನುಭವಗಳಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಜೀವನದ ಕಾರ್ಖಾನೆಯಲ್ಲಿ ಶ್ರಮಪಟ್ಟು ಕೆಲಸ ಮಾಡಿದಂತಹ ಒಬ್ಬ ಒಳ್ಳೆಯ ಮನುಷ್ಯ ಅಲ್ಪ ಸಮಯದವರೆಗೆ ಗಾಢವಾದ, ಅರಿವಿಲ್ಲದ, ವಿಶ್ರಾಂತಿಪೂರ್ಣ ನಿದ್ರೆಗೆ ಜಾರುತ್ತಾನೆ. ನಂತರ ಅವನು ಸೂಕ್ಷ್ಮಲೋಕದ ಅಸ್ತಿತ್ವದ ಯಾವುದೋ ಒಂದು ವಲಯದಲ್ಲಿ ಎಚ್ಚರಗೊಳ್ಳುತ್ತಾನೆ: “ನನ್ನ ತಂದೆಯ ಮನೆಯಲ್ಲಿ ಹಲವಾರು ಸೌಧಗಳಿವೆ.”

ಸೂಕ್ಷ್ಮಲೋಕದ ಆತ್ಮಗಳು ನವಿರಾದ ಬೆಳಕಿನ ಉಡುಪು ಧರಿಸಿರುತ್ತವೆ. ಅವು ತಮ್ಮನ್ನು ತಾವು ಮೂಳೆ-ಮಾಂಸಗಳ ತಡಿಕೆಗಳಿಂದ ಆವರಿಸಿಕೊಳ್ಳುವುದಿಲ್ಲ. ಅವು ಇತರ ಒರಟಾದ ಘನವಸ್ತುಗಳಿಗೆ ತಾಗಿದಾಗ ಒಡೆಯಬಹುದಾದಂತಹ ದುರ್ಬಲವಾದ ಭಾರೀ ಗಾತ್ರದ ಅಂಗರಚನೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಸೂಕ್ಷ್ಮಲೋಕದಲ್ಲಿ ಮಾನವನ ಶರೀರ ಹಾಗೂ ಘನವಸ್ತುಗಳು, ಸಾಗರಗಳು, ಮಿಂಚು ಮತ್ತು ಅನಾರೋಗ್ಯದ ನಡುವೆ ಯಾವುದೇ ಸಮರವಿರುವುದಿಲ್ಲ. ಅಲ್ಲಿ ಅಪಘಾತಗಳೂ ಇರುವುದಿಲ್ಲ, ಏಕೆಂದರೆ ಎಲ್ಲವೂ ವೈಷಮ್ಯದ ಬದಲಿಗೆ ಪರಸ್ಪರ ಸಹಕಾರದೊಂದಿಗೆ ಸಹಜೀವನ ನಡೆಸುತ್ತವೆ. ಸ್ಪಂದನಗಳ ಎಲ್ಲ ಸ್ವರೂಪಗಳೂ ಪರಸ್ಪರ ಸಮರಸದಿಂದ ಕಾರ್ಯ ನಿರ್ವಹಿಸುತ್ತವೆ. ಎಲ್ಲ ಶಕ್ತಿಗಳೂ ಶಾಂತಿ ಮತ್ತು ಪ್ರಜ್ಞಾಪೂರ್ವಕ ಸಹಕಾರದಿಂದ ಜೀವಿಸುತ್ತವೆ. ಆತ್ಮಗಳು, ಕಿರಣಗಳು (ಅವುಗಳ ಮೇಲೆ ಆತ್ಮಗಳು ನಡೆದಾಡುತ್ತವೆ) ಹಾಗೂ ಆತ್ಮಗಳು ಕುಡಿಯುವ ಮತ್ತು ತಿನ್ನುವ ಕಿತ್ತಳೆ ವರ್ಣದ ಕಿರಣಗಳೆಲ್ಲವೂ ಕೂಡ ಜೀವಂತ ಬೆಳಕಿನಿಂದಾಗಿವೆ. ಆತ್ಮಗಳು ಆಮ್ಲಜನಕವನ್ನು ಸೇವಿಸದೆ ಚೈತನ್ಯದ ಆನಂದವನ್ನು ಸೇವಿಸುತ್ತ ಪರಸ್ಪರ ಅರಿವು ಮತ್ತು ಸಹಕಾರದಿಂದ ಜೀವಿಸುತ್ತವೆ.

“ಹಿಂದಿನ ಜೀವನದ ಸ್ನೇಹಿತರು ಸೂಕ್ಷ್ಮಲೋಕದಲ್ಲಿ ಒಬ್ಬರನ್ನೊಬ್ಬರು ಸುಲಭವಾಗಿ ಗುರುತಿಸುತ್ತಾರೆ,” [ಶ್ರೀ ಯುಕ್ತೇಶ್ವರರು ಹೇಳಿದರು]. “ಅವರು ಅಮರಸ್ನೇಹದ ಆನಂದವನ್ನು ಸವಿಯುತ್ತ, ಲೌಕಿಕ ಜೀವನದ ದುಃಖಕರ, ಭ್ರಾಮಕ ಅಗಲಿಕೆಗಳ ಸಮಯದಲ್ಲಿ ಸಂದೇಹಿಸಿದಂತಹ ಪ್ರೇಮವನ್ನು ಅದು ಅವಿನಾಶಿ ಎನ್ನುವುದನ್ನು ಅರಿತುಕೊಳ್ಳುತ್ತಾರೆ.”

ಸಾವಿನ ನಂತರದ ಬದುಕು ಎಷ್ಟು ಅದ್ಭುತವಾದದ್ದು! ನೀವು ಈ ಮೂಳೆ ಮಾಂಸದ ಹಳೆಯ ಸರಕನ್ನು ಅದರ ಎಲ್ಲ ಸಮಸ್ಯೆಗಳೊಂದಿಗೆ ಇನ್ನು ಪ್ರಯಾಸದಿಂದ ಎಳೆದುಕೊಂಡು ಹೋಗಬೇಕಾಗಿಲ್ಲ. ಭೌತಿಕ ಪರಿಮಿತಿಗಳ ಅಡಚಣೆಗೊಳಗಾಗದೆ ನೀವು ಸೂಕ್ಷ್ಮಲೋಕದ ಸ್ಪರ್ಗದಲ್ಲಿ ಸ್ವತಂತ್ರರಾಗಿರುತ್ತೀರಿ.

ಪ್ರೀತಿಪಾತ್ರರೊಬ್ಬರು ಸತ್ತಾಗ ವಿವೇಚನೆಯಿಲ್ಲದೆ ದುಃಖಿಸುವ ಬದಲು ದೇವರ ಇಚ್ಛೆಯಂತೆ ಅವನು ಉನ್ನತ ಲೋಕಕ್ಕೆ ಹೋಗಿದ್ದಾನೆ ಮತ್ತು ಅವನಿಗೆ ಯಾವುದು ಒಳ್ಳೆಯದು ಎನ್ನುವುದು ದೇವರಿಗೆ ತಿಳಿದಿದೆ ಎನ್ನುವುದನ್ನು ಅರಿಯಿರಿ. ಅವನು ಮುಕ್ತನಾಗಿರುವುದಕ್ಕೆ ಸಂಭ್ರಮಿಸಿ. ಅವನ ಮುಂದಿನ ದಾರಿಯಲ್ಲಿ ನಿಮ್ಮ ಪ್ರೇಮ ಮತ್ತು ಶುಭಾಕಾಂಕ್ಷೆಗಳು ದಾರಿದೀಪವಾಗಲಿ ಎಂದು ಪ್ರಾರ್ಥಿಸಿ. ಈ ಮನೋಭಾವವು ಹೆಚ್ಚು ಉಪಯುಕ್ತವಾದುದು. ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಭಾವನೆ ಇಲ್ಲದೆ ಹೋದರೆ ನಾವು ನಿಸ್ಸಂದೇಹವಾಗಿ ಮನುಷ್ಯರೇ ಅಲ್ಲ; ಆದರೆ, ಅವರಿಲ್ಲದ ಒಂಟಿತನವನ್ನು ಅನುಭವಿಸುತ್ತ ಅವರನ್ನು ನಮ್ಮ ಸ್ವಾರ್ಥದಿಂದಾಗಿ ಭೂಮಿಯಲ್ಲಿ ಹಿಡಿದಿಡುವುದೂ ನಮಗೆ ಬೇಕಿಲ್ಲ. ತೀವ್ರವಾದ ಶೋಕ ಅಗಲಿದ ಆತ್ಮಕ್ಕೆ ಹೆಚ್ಚಿನ ಶಾಂತಿ ಮತ್ತು ಸ್ವಾತಂತ್ರ್ಯದೆಡೆಗೆ ಹೋಗಲು ಅಡ್ಡಿಪಡಿಸುತ್ತದೆ.

ಅಗಲಿದ ಪ್ರೀತಿಪಾತ್ರರಿಗೆ ನಿಮ್ಮ ಸಂದೇಶಗಳನ್ನು ಕಳುಹಿಸಬೇಕಾದರೆ, ನಿಮ್ಮ ಕೋಣೆಯಲ್ಲಿ ಶಾಂತವಾಗಿ ಕುಳಿತು ಭಗವಂತನನ್ನು ಧ್ಯಾನಿಸಿ. ನಿಮ್ಮಲ್ಲಿ ಆತನ ಶಾಂತಿಯ ಅನುಭವವಾದಾಗ ಕೂಟಸ್ಥ, ಅಂದರೆ ಭ್ರೂ ಮಧ್ಯದಲ್ಲಿರುವ ಇಚ್ಛಾಶಕ್ತಿಯ ಕೇಂದ್ರದ ಮೇಲೆ ನಿಮ್ಮ ಮನಸ್ಸನ್ನು ಆಳವಾಗಿ ಕೇಂದ್ರೀಕರಿಸಿ, ಹಾಗೂ ಅಗಲಿದ ಪ್ರೀತಿಪಾತ್ರರಿಗೆ ನಿಮ್ಮ ಪ್ರೀತಿಯನ್ನು ಪ್ರಸಾರ ಮಾಡಿ.

ನೀವು ಸಂಪರ್ಕಿಸಬೇಕಾದ ವ್ಯಕ್ತಿಯನ್ನು ಕೂಟಸ್ಥದಲ್ಲಿ ಚಿತ್ರಿಸಿಕೊಳ್ಳಿ. ಆ ಆತ್ಮಕ್ಕೆ ನಿಮ್ಮ ಪ್ರೇಮದ, ಶಕ್ತಿಯ ಮತ್ತು ಧೈರ್ಯದ ಸ್ಪಂದನಗಳನ್ನು ಕಳುಹಿಸಿ.

ನೀವು ಇದನ್ನು ಸತತವಾಗಿ ಮಾಡಿದರೆ ಮತ್ತು ಆ ಪ್ರೀತಿಪಾತ್ರರಲ್ಲಿ ನಿಮ್ಮ ಆಸಕ್ತಿಯನ್ನು ಕಳೆದುಕೊಳ್ಳದಿದ್ದರೆ ಆ ಆತ್ಮವು ಖಂಡಿತವಾಗಿ ನಿಮ್ಮ ಸ್ಪಂದನಗಳನ್ನು ಗ್ರಹಿಸುತ್ತದೆ. ಇಂತಹ ಯೋಚನೆಗಳು ನಿಮ್ಮ ಪ್ರೀತಿಪಾತ್ರರಲ್ಲಿ ಸೌಖ್ಯತೆಯ ಭಾವನೆ, ಪ್ರೀತಿಸಲ್ಪಡುತ್ತಿದ್ದೇವೆಂಬ ಭಾವನೆಯನ್ನು ತರುತ್ತವೆ. ನೀವು ಹೇಗೆ ಅವರನ್ನು ಮರೆತಿಲ್ಲವೋ ಹಾಗೆಯೇ ಅವರೂ ನಿಮ್ಮನ್ನು ಮರೆತಿಲ್ಲ.

ಪ್ರೀತಿ ಮತ್ತು ಸದ್ಭಾವನೆಗಳ ಸಂದೇಶವನ್ನು ನಿಮ್ಮ ಪ್ರೀತಿಪಾತ್ರರಿಗೆ ನಿಮಗೆ ಬೇಕೆನಿಸಿದಷ್ಟು ಬಾರಿ, ಕನಿಷ್ಠ ಪಕ್ಷ ವರ್ಷಕ್ಕೊಮ್ಮೆ ಯಾದರೂ — ಬಹುಶಃ ವಿಶೇಷ ವಾರ್ಷಿಕೋತ್ಸವದಂದು, ಕಳುಹಿಸಿ. “ನಾವು ಪುನಃ ಎಂದಾದರೂ ಭೇಟಿಯಾಗೋಣ ಮತ್ತು ನಮ್ಮ ದೈವೀ ಪ್ರೇಮ ಹಾಗೂ ಪರಸ್ಪರ ಸ್ನೇಹವನ್ನು ಮುಂದುವರೆಸಿ ಬೆಳೆಸೋಣ” ಎಂದು ಮನದಲ್ಲಿಯೇ ಅವರಿಗೆ ಹೇಳಿ. ನಿಮ್ಮ ಪ್ರೀತಿಯ ಸಂದೇಶಗಳನ್ನು ಈಗಿನಿಂದಲೇ ಸತತವಾಗಿ ಕಳಿಸುತ್ತಿದ್ದರೆ ಮುಂದೊಂದು ದಿನ ನೀವು ಖಂಡಿತವಾಗಿ ಅವರನ್ನು ಪುನಃ ಭೇಟಿಯಾಗುವಿರಿ. ಈ ಜೀವನವು ಕೊನೆಯಲ್ಲ, ಬದಲಿಗೆ ನಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧದ ಶಾಶ್ವತ ಸರಪಣಿಯ ಒಂದು ಕೊಂಡಿ ಮಾತ್ರ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

ದೃಢೀಕರಣ

ದೃಢೀಕರಣದ ಸಿದ್ಧಾಂತ ಮತ್ತು ಸೂಚನೆಗಳು

“ಚೈತನ್ಯದ ಮಹಾಸಾಗರವು ಸಣ್ಣ ನೀರ್ಗುಳ್ಳೆಯಾದ ನನ್ನ ಆತ್ಮವಾಗಿ ಪರಿವರ್ತಿತವಾಗಿದೆ. ವಿಶ್ವಪ್ರಜ್ಞೆಯ ಮಹಾಸಾಗರದೊಡನೆ ಒಂದಾಗಿರುವ ನಾನು ಈ ಜೀವನದ ನೀರ್ಗುಳ್ಳೆ. ನಾನು ಸಾಯಲು ಸಾಧ್ಯವಿಲ್ಲ. ಜನನದಲ್ಲಿ ತೇಲುತ್ತಿರಲಿ ಅಥವಾ ಮರಣದಲ್ಲಿ ಮರೆಯಾಗುತ್ತಿರಲಿ, ಚೈತನ್ಯದ ಅಮರತ್ವದ ವಕ್ಷಸ್ಥಳದಲ್ಲಿ ಸಂರಕ್ಷಿಸಲ್ಪಟ್ಟಿರುವ ನಾನು ಅವಿನಾಶೀ ಪ್ರಜ್ಞೆ.”

ಹೆಚ್ಚಿನ ಓದಿಗಾಗಿ

ಇದನ್ನು ಹಂಚಿಕೊಳ್ಳಿ