- ಪರಮಾತ್ಮನ ನೇರವಾದ ವೈಯಕ್ತಿಕ ಅನುಭವವನ್ನು ಪ್ರಾಪ್ತಿಸಿಕೊಳ್ಳಲು ನಿಷ್ಕೃಷ್ಟವಾದ ವೈಜ್ಞಾನಿಕ ಪ್ರಯೋಗ ವಿಧಾನಗಳ ಜ್ಞಾನವನ್ನು ರಾಷ್ಟ್ರಗಳ ನಡುವೆ ಪ್ರಸಾರ ಮಾಡುವುದು.
- ಸ್ವಪ್ರಯತ್ನದಿಂದ ಮನುಷ್ಯನ ಪರಿಮಿತ ಮರ್ತ್ಯ ಪ್ರಜ್ಞೆಯನ್ನು ದೈವ ಪ್ರಜ್ಞೆಯಾಗುವಂತೆ ವಿಕಾಸಗೊಳಿಸುವುದೇ ಬಾಳಿನ ಉದ್ದೇಶವೆಂದು ಬೋಧಿಸುವುದು; ಮತ್ತು ಇದಕ್ಕೋಸ್ಕರ ದೈವ-ಸಾಕ್ಷಾತ್ಕಾರಕ್ಕಾಗಿ ಯೋಗದಾ ಸತ್ಸಂಗ ಮಂದಿರಗಳನ್ನು ಸ್ಥಾಪಿಸುವುದು ಮತ್ತು ಜನರು ತಮ್ಮ ಮನೆಗಳಲ್ಲಿ ಮತ್ತು ಮನಗಳಲ್ಲಿ ವೈಯಕ್ತಿಕ ದೇವಮಂದಿರಗಳನ್ನು ಸ್ಥಾಪಿಸಿಕೊಳ್ಳಲು ಪ್ರೋತ್ಸಾಹಿಸುವುದು.
- ಭಗವಾನ್ ಕೃಷ್ಣನಿಂದ ಉಪದಿಷ್ಟವಾದ ಆದಿಮ ಯೋಗವೂ ಹಾಗೂ ಏಸುಕ್ರಿಸ್ತನಿಂದ ಉಪದಿಷ್ಟವಾದ ಆದಿಮ ಕ್ರೈಸ್ತಧರ್ಮವೂ ಪೂರ್ಣ ಹೊಂದಾಣಿಕೆ ಉಳ್ಳಂಥವು ಮತ್ತು ಮೂಲತಃ ಒಂದೇ ಎಂದು ತಿಳಿಸಿಕೊಡುವುದು; ಮತ್ತು ಈ ಸತ್ಯದ ತತ್ತ್ವಗಳು ಎಲ್ಲ ನಿಜಧರ್ಮಗಳಿಗೂ ಸರ್ವ ಸಾಮಾನ್ಯವಾದ ವಿಜ್ಞಾನಾಧಾರಿತ ಅಸ್ತಿಭಾರವೆಂದು ತೋರಿಸುವುದು.
- ವಾಸ್ತವ ಧಾರ್ಮಿಕ ಶ್ರದ್ಧೆಯುಳ್ಳ ಎಲ್ಲಾ ಮಾರ್ಗಗಳೂ ಕೊನೆಗೆ ಯಾವ ಒಂದು ದಿವ್ಯ ಮಹಾಮಾರ್ಗಕ್ಕೆ ಒಯ್ಯುತ್ತವೋ, ಆ ಮಹಾಮಾರ್ಗವೇ ಪರಮಾತ್ಮನನ್ನು ಕುರಿತ ದಿನನಿತ್ಯದ ವೈಜ್ಞಾನಿಕ ಮತ್ತು ಭಕ್ತಿಯುತ ಧ್ಯಾನ ಎಂಬುದನ್ನು ನಿರ್ದೇಶಿಸುವುದು.
- ದೈಹಿಕ ವ್ಯಾಧಿ, ಮಾನಸಿಕ ಅಸಾಮರಸ್ಯ ಮತ್ತು ಆಧ್ಯಾತ್ಮಿಕ ಅಜ್ಞಾನ, ಈ ತಾಪತ್ರಯಗಳಿಂದ ಮನುಷ್ಯನನ್ನು ವಿಮೋಚನಗೊಳಿಸುವುದು.
- “ಸರಳ ಜೀವನ ಮತ್ತು ಉನ್ನತ ಚಿಂತನ”ವನ್ನು ಪ್ರೋತ್ಸಾಹಿಸುವುದು; ಮತ್ತು ಎಲ್ಲ ಜನಾಂಗಗಳ ಏಕತೆಯ ಶಾಶ್ವತ ಆಧಾರಭೂತವಾದ ಪರಮಾತ್ಮನೊಂದಿಗಿನ ಆತ್ಮೀಯ ಸಾಮ್ಯತೆಯನ್ನು ಬೋಧಿಸುವ ಮೂಲಕ ಅಂತಃಕರಣಪೂರ್ವಕ ಸೋದರ ಭಾವವನ್ನು ಹರಡುವುದು.
- ದೇಹಕ್ಕಿಂತ ಮನಸ್ಸು ಉತ್ಕೃಷ್ಟವಾದುದೆಂದೂ, ಮನಸ್ಸಿಗಿಂತ ಆತ್ಮವು ಉತ್ಕೃಷ್ಟವಾದುದೆಂದೂ ಪ್ರತಿಪಾದಿಸುವುದು.
- ಕೆಟ್ಟದ್ದನ್ನು ಒಳ್ಳೆಯದರಿಂದ, ದುಃಖವನ್ನು ಸಂತೋಷದಿಂದ, ಕ್ರೌರ್ಯವನ್ನು ಕರುಣೆಯಿಂದ, ಅಜ್ಞಾನವನ್ನು ಜ್ಞಾನದಿಂದ ನಿವಾರಿಸುವುದು.
- ವಿಜ್ಞಾನ ಮತ್ತು ಧರ್ಮಗಳಲ್ಲಿ ಅಂತರ್ಗತವಾಗಿರುವ ತತ್ತ್ವಗಳ ಏಕತೆಯನ್ನು ಕಂಡುಕೊಳ್ಳುವುದರ ಮೂಲಕ ವಿಜ್ಞಾನ ಮತ್ತು ಧರ್ಮಗಳನ್ನು ಸಮೀಕರಿಸುವುದು.
- ಪೌರ್ವಾತ್ಯರು ಮತ್ತು ಪಾಶ್ಚಾತ್ಯರಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ತಿಳುವಳಿಕೆಯನ್ನು ಮೂಡಿಸಿ ಅವರಲ್ಲಿರುವ ವಿಶಿಷ್ಟವಾದ ಹಾಗೂ ಅತಿ ಶ್ರೇಷ್ಠವಾದ ಅಂಶಗಳು ಪರಸ್ಪರ ವಿನಿಮಯವಾಗುವಂತೆ ಮಾಡುವುದು.
- ಸಮಸ್ತ ಮಾನವರನ್ನು ತನ್ನ ಬೃಹದಾತ್ಮವೇ ಎಂಬಂತೆ ಸೇವೆ ಸಲ್ಲಿಸುವುದು.