ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಬಗ್ಗೆ

“ಆತ್ಮ-ಸಾಕ್ಷಾತ್ಕಾರವೆಂದರೆ ಶರೀರ, ಮನಸ್ಸು ಮತ್ತು ಆತ್ಮದಲ್ಲಿ ನಾವು ಭಗವಂತನ ಸರ್ವವ್ಯಾಪಿತ್ವದಲ್ಲಿ ಒಂದಾಗಿದ್ದೇವೆ ಎಂಬುದನ್ನು ಅರಿಯುವುದು…”

—ಪರಮಹಂಸ ಯೋಗಾನಂದ

Paramahansa yogananda standard photo

ಸಹಸ್ರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಉಗಮವಾದ ಪವಿತ್ರ ಆಧ್ಯಾತ್ಮಿಕ ವಿಜ್ಞಾನವಾದ ಕ್ರಿಯಾ ಯೋಗದ ಸಾರ್ವತ್ರಿಕ ಬೋಧನೆಗಳನ್ನು, ಭಾರತ ಹಾಗೂ ಇತರ ನೆರೆಯ ರಾಷ್ಟ್ರಗಳಲ್ಲಿ ಲಭ್ಯವಾಗುವಂತೆ ಮಾಡಲು, ಪರಮಹಂಸ ಯೋಗಾನಂದರು 1917ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವನ್ನು ಸ್ಥಾಪಿಸಿದರು. ಯಾವುದೇ ಪಂಥಕ್ಕೆ ಸೀಮಿತವಾಗದ ಈ ಬೋಧನೆಗಳು ಸರ್ವಾಂಗೀಣ ಯಶಸ್ಸು ಹಾಗೂ ಸ್ವಾಸ್ಥ್ಯವನ್ನು ಪಡೆದುಕೊಳ್ಳುವುದಕ್ಕೆ ಬೇಕಾದ ಸಮಗ್ರ ಸಿದ್ಧಾಂತ ಹಾಗೂ ಜೀವನದ ಮಾರ್ಗವನ್ನು ಒಳಗೊಂಡಿವೆ, ಅಷ್ಟೇ ಅಲ್ಲದೆ, ಜೀವನದ ಅಂತಿಮ ಗುರಿಯಾದ–ಪರಮಾತ್ಮನೊಂದಿಗೆ ಆತ್ಮದ ಐಕ್ಯತೆಯನ್ನು ಸಿದ್ಧಿಸಿಕೊಳ್ಳಲು ಬೇಕಾದ ಧ್ಯಾನದ ವಿಧಾನಗಳನ್ನು ಸಹ.

ಪರಮಹಂಸ ಯೋಗಾನಂದರು ರೂಪಿಸಿರುವ ಧ್ಯೇಯಗಳು ಮತ್ತು ಆದರ್ಶಗಳಲ್ಲಿ ವ್ಯಕ್ತಪಡಿಸಿರುವ ಹಾಗೆ, ವೈಎಸ್‌ಎಸ್‌, ವಿವಿಧ ಜನಾಂಗಗಳು ಹಾಗೂ ಧರ್ಮಗಳ ನಡುವೆ ಒಂದು ಹೆಚ್ಚಿನ ಅರಿವು ಹಾಗೂ ಸೌಹಾರ್ದತೆಯನ್ನು ಬೆಳೆಸಲು ಬಯಸುತ್ತದೆ. ಅದರ ಮುಖ್ಯ ಉದ್ದೇಶವೇನೆಂದರೆ, ಎಲ್ಲರೂ ಮಾನುಷ ಚೈತನ್ಯದ ಸೊಬಗು, ಉದಾತ್ತತೆ ಹಾಗೂ ದಿವ್ಯತೆಯನ್ನು ಅರಿತು ತಮ್ಮ ಜೀವನದಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸುವುದಕ್ಕೆ ಸಹಾಯ ಮಾಡುವುದೇ ಆಗಿದೆ.

ಭಾರತದ ಹೊರಗೆ ಹಾಗೂ ಸುತ್ತಮುತ್ತಲ ದೇಶಗಳಲ್ಲಿ, ಪರಮಹಂಸ ಯೋಗಾನಂದರ ಬೋಧನೆಗಳು, ಪರಮಹಂಸಜೀ 1920ರಲ್ಲಿ ಪಶ್ಚಿಮಕ್ಕೆ ಹೋದಾಗ ಸಂಸ್ಥಾಪಿಸಿದ ಸಂಸ್ಥೆಯಾದ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ (ಎಸ್‌ಆರ್‌ಎಫ್‌) ಮೂಲಕ ಇಡೀ ಜಗತ್ತಿಗೆ ಪ್ರಸಾರವಾಯಿತು.

ಇಂದಿಗೂ ಸಹ ಅವರು ಜೀವಿತ ಕಾಲದಲ್ಲಿದ್ದ ಹಾಗೆಯೇ, ಮುದ್ರಿತ ಯೋಗದಾ ಸತ್ಸಂಗ ಪಾಠಮಾಲಿಕೆಯ ಮೂಲಕ ಅವರ ಬೋಧನೆಗಳನ್ನು ವೈಎಸ್‌ಎಸ್‌ ನೀಡುತ್ತಿದೆ. ಈ ಸಮಗ್ರ ಗೃಹಾಧ್ಯಯನದ ಸರಣಿಯು ಕ್ರಿಯಾ ಯೋಗ ವಿಜ್ಞಾನದ ಎಲ್ಲ ಧ್ಯಾನ ತಂತ್ರಗಳಲ್ಲಿ ಹಾಗೂ ಯೋಗಾನಂದಜಿ ಕಲಿಸಿದ ಸಮತೋಲಿತ ಆಧ್ಯಾತ್ಮಿಕ ಜೀವನದ ಅನೇಕ ಇತರ ಅಂಶಗಳ ಬಗ್ಗೆ ಶಿಕ್ಷಣವನ್ನು ನೀಡುತ್ತದೆ.

Main Building of Ranchi Ashram

ರಾಂಚಿ, ದಕ್ಷಿಣೇಶ್ವರ್, ದ್ವಾರಾಹಟ್, ನೋಯ್ಡಾ ಹಾಗೂ ಚೆನ್ನೈನಲ್ಲಿ ವೈಎಸ್ಎಸ್ ಒಟ್ಟು ಐದು ಆಶ್ರಮಗಳನ್ನು ಹೊಂದಿದೆ. ಇಗತ್ ಪುರಿ, ಶಿಮ್ಲಾ, ಪುಣೆ, ದಿಹಿಕಾ, ಪುರಿ, ಸಿರಾಂಪುರ್, ತೆಲಾರಿ ಹಾಗೂ ಕೊಯಮತ್ತೂರಿನಲ್ಲಿ ಎಂಟು ಏಕಾಂತ ಧ್ಯಾನ ಸ್ಥಳಗಳನ್ನೂ ಹೊಂದಿದೆ. ಹಾಗೂ ಭಾರತ ಹಾಗೂ ನೇಪಾಳದಾದ್ಯಂತ 200ಕ್ಕೂ ಹೆಚ್ಚು ಕೇಂದ್ರಗಳನ್ನು ಹಾಗೂ ಮಂಡಲಿಗಳನ್ನೂ ಹೊಂದಿದೆ.

Swami Chidananda Giri- President of YSS/SRFಪರಮಹಂಸ ಯೋಗಾನಂದರ ಜೀವಿತ ಕಾಲದಲ್ಲಿಯ ಬಹಳ ಮುಂಚಿನ ಹಾಗೂ ಆಪ್ತ ಶಿಷ್ಯೆಯರಲ್ಲೊಬ್ಬರಾಗಿದ್ದ ಶ್ರೀ ಶ್ರೀ ದಯಾ ಮಾತಾ, 1955ರಿಂದ, 2010ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಹಾಗೂ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಆಧ್ಯಾತ್ಮಿಕ ಮುಖ್ಯಸ್ಥರು ಹಾಗೂ ಅಧ್ಯಕ್ಷರಾಗಿದ್ದರು. ನಂತರ ಯೋಗಾನಂದರ ಮತ್ತೊಬ್ಬ ಆಪ್ತ ಶಿಷ್ಯೆಯಾಗಿದ್ದ ಶ್ರೀ ಶ್ರೀ ಮೃಣಾಲಿನಿ ಮಾತಾ 2011ರಿಂದ 2017ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ಈ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದರು. ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಪ್ರಸ್ತುತ ಆಧ್ಯಾತ್ಮಿಕ ಮುಖ್ಯಸ್ಥರು ಹಾಗೂ ಅಧ್ಯಕ್ಷರಾಗಿದ್ದಾರೆ.

ವೈಎಸ್‌ಎಸ್‌ನ ಬಹಳಷ್ಟು ಭಕ್ತರು ಕೆಲಸಕಾರ್ಯ ಹಾಗೂ ಸಂಸಾರದ ಜವಾಬ್ದಾರಿಯುಳ್ಳ ಪುರುಷರು ಹಾಗೂ ಮಹಿಳೆಯರಾಗಿದ್ದಾರೆ. ಅವರು ಯೋಗದಾ ಸತ್ಸಂಗದ ಬೋಧನೆಗಳ ಮೂಲಕ ಧ್ಯಾನದೊಂದಿಗೆ ಅವರ ಕ್ರಿಯಾತ್ಮಕ ಬದುಕನ್ನು ಹೇಗೆ ಸಂತುಲನಗೊಳಿಸುವುದು ಎಂಬುದನ್ನು ಕಲಿಯುತ್ತಿದ್ದಾರೆ. ಯೋಗಾನಂದರ ಬೋಧನೆಗಳಲ್ಲಿ ಅವರು ತಮ್ಮ ವೈವಾಹಿಕ ಹಾಗೂ ಕುಟುಂಬ ಜೀವನವನ್ನು ಹೇಗೆ ಆಧ್ಯಾತ್ಮೀಕರಿಸುವುದು, ವ್ಯವಹಾರ ಹಾಗೂ ವೃತ್ತಿಸಂಬಂಧಿತ ಕಾರ್ಯಗಳಲ್ಲಿ ಹೇಗೆ ಸಫಲತೆ ಹಾಗೂ ಅಭ್ಯುದಯವನ್ನು ಕಾಣುವುದು ಮತ್ತು ಅವರ ಸಮುದಾಯ, ರಾಷ್ಟ್ರ ಹಾಗೂ ಮಾನವಸಮಷ್ಟಿಗೆ ಒಂದು ಅರ್ಥಪೂರ್ಣ ಹಾಗೂ ಸೇವಾಪೂರ್ಣ ಸಹಾಯ ಮಾಡುವುದು ಎಂಬುದೆಲ್ಲದರ ಬಗ್ಗೆ ಮಾರ್ಗದರ್ಶನವನ್ನು ಪಡೆಯುತ್ತಾರೆ.

ಪರಮಹಂಸರ ಬಯಕೆಯಂತೆ, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಅವರ ಕಾರ್ಯವು ಭಾರತದ ಪುರಾತನ ಸ್ವಾಮಿ ಪರಂಪರೆಯ ಹಾದಿಯಲ್ಲಿ ಹುಟ್ಟುಹಾಕಿದ ಸನ್ಯಾಸಿಗಳಿಂದ ಮಾರ್ಗದರ್ಶಿಸಲ್ಪಡುತ್ತಿದೆ. ವೈಎಸ್‌ಎಸ್‌ ಸನ್ಯಾಸಿಗಳು ಸನ್ಯಾಸದ ವಿಧ್ಯುಕ್ತ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಹಾಗೂ ಅವರು ಯೋಗದಾ ಸತ್ಸಂಗದ ಭಕ್ತರು ಹಾಗೂ ಸ್ನೇಹಿತರ ಆಧ್ಯಾತ್ಮಿಕ ಅವಶ್ಯತೆಗಳನ್ನು ಪೂರೈಸುವುದಕ್ಕೆ ಜವಾಬ್ದಾರಿಯುತರಾಗಿರುತ್ತಾರೆ.

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಭಾರತದ ಉಪಖಂಡದಲ್ಲಿನ ಅನೇಕ ಚಟುವಟಿಕೆಗಳು ಹಾಗೂ ಸೇವೆಗಳಲ್ಲಿ ಕೆಲವು ಹೀಗಿವೆ:

  • ಪರಮಹಂಸ ಯೋಗಾನಂದರು ಹಾಗೂ ಅವರ ಸನ್ಯಾಸಿ ಶಿಷ್ಯರ ಬರಹಗಳು, ಉಪನ್ಯಾಸಗಳು, ಹಾಗೂ ಮುದ್ರಿತ ಪ್ರವಚನಗಳನ್ನು ಮುದ್ರಿತ ರೂಪದಲ್ಲಿ ಹಾಗೂ ಇ-ಪುಸ್ತಕದ ರೂಪದಲ್ಲಿ ಪ್ರಕಟಿಸುವುದು.
  • ಎಲ್ಲ ಜೀವನೋಪಾಯದ ಜನರೂ ಒಂದು ಸಮುದಾಯದ ಹಾಗೂ ಸೌಹಾರ್ದಯುತ ಮನೋಭಾವನೆಯಿಂದ ಒಂದೆಡೆ ಸೇರಲು ವೈಎಸ್‌ಎಸ್‌ ಆನ್‌ಲೈನ್‌ ಧ್ಯಾನ ಕೇಂದ್ರವೂ ಸೇರಿದಂತೆ ಆಶ್ರಮಗಳನ್ನು, ಧ್ಯಾನ ಶಿಬಿರಗಳನ್ನು ಹಾಗೂ ಧ್ಯಾನ ಕೇಂದ್ರಗಳನ್ನು ನಡೆಸುವುದು.
  • ಪರಮಹಂಸ ಯೋಗಾನಂದರ ಸನ್ಯಾಸಿ ಶಿಷ್ಯರುಗಳ ವೀಡಿಯೋ ಪ್ರವಚನಗಳೂ ಸೇರಿದಂತೆ ಪರಮಹಂಸ ಯೋಗಾನಂದರ ಬೋಧನೆಗಳ ಪ್ರಸ್ತುತಿಗಾಗಿ ಮೀಸಲಾದ ಒಂದು ಜಾಲತಾಣ (ವೆಬ್‌ಸೈಟ್‌) ಹಾಗೂ ಯುಟ್ಯೂಬ್‌ ಚಾನೆಲ್‌ನ ನಿರ್ವಹಣೆ ಮಾಡುವುದು.
  • ಶರೀರ, ಮನಸ್ಸು ಹಾಗೂ ಆತ್ಮದ ಉಪಶಮನಕ್ಕೆ ಮೀಸಲಾದ ಒಂದು ಯೋಗದಾ ಸತ್ಸಂಗ ನಿಯತಕಾಲಿಕೆ.
  • ವೈಎಸ್‌ಎಸ್‌ ಸನ್ಯಾಸಿ ಸಮುದಾಯಗಳಲ್ಲಿ ಸನ್ಯಾಸಿಗಳ ಆಧ್ಯಾತ್ಮಿಕ ತರಬೇತಿ.
  • ವಿವಿಧ ಸ್ಥಳಗಳಲ್ಲಿ ಸಾಧನಾ ಸಂಗಮಗಳೂ ಸೇರಿದಂತೆ ನಿಯತ ಪ್ರವಚನದ ಪ್ರವಾಸಗಳನ್ನು ಹಾಗೂ ತರಗತಿಗಳನ್ನು ಏರ್ಪಡಿಸುವುದು. ಸಾಧನಾ ಸಂಗಮಗಳು ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಧ್ಯಾನದ ತಂತ್ರಗಳು ಹಾಗೂ ಬೋಧನೆಗಳಲ್ಲಿ ಆಳವಾಗಿ ಮುಳುಗುವಂಥ ಹಲವಾರು ದಿನಗಳ ಕಾಲ ಇರುವ ಆಧ್ಯಾತ್ಮಿಕ ಕಾರ್ಯಕ್ರಮಗಳು.
  • ಮಕ್ಕಳಿಗಾಗಿ ಧ್ಯಾನ ಹಾಗೂ ಆಧ್ಯಾತ್ಮಿಕ ಜೀವನದ ಬಗ್ಗೆ ತಿಳಿಸುವ ಕಾರ್ಯಕ್ರಮಗಳು.
  • ಪತ್ರ, ದೂರವಾಣಿ ಹಾಗೂ ಮುಖತಃ ವ್ಯಕ್ತಿಗತ ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀಡುವುದು.
  • ವಿವಿಧ ಧರ್ಮಾರ್ಥ ಪರಿಹಾರಗಳು ಹಾಗೂ ಸಮಾಜಕಲ್ಯಾಣ ಚಟುವಟಿಕೆಗಳನ್ನು ಬೆಂಬಲಿಸುವುದು.
  • ದೈಹಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಸಹಾಯದ ಅವಶ್ಯಕತೆಯಿರುವವರಿಗಾಗಿ ಪ್ರಾರ್ಥಿಸಲು ಮುಡುಪಾದ ತಂಡಗಳು ಹಾಗೂ ವ್ಯಕ್ತಿಗಳ ಒಂದು ಸಂಪರ್ಕಜಾಲವಾದ ವಿಶ್ವವ್ಯಾಪಿ ಪ್ರಾರ್ಥನಾ ಮಂಡಳಿಯ ಕೆಲಸವನ್ನು ಮಾರ್ಗದರ್ಶಿಸುವುದು.
Gurudeva and Ranchi Ashram

ಇದನ್ನು ಹಂಚಿಕೊಳ್ಳಿ