ನಿತ್ಯ ಸಂತೋಷದ ರಹಸ್ಯಗಳು

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

ಸಕಾರಾತ್ಮಕ ಮನೋಭಾವ

ಸಂತೋಷದಿಂದಿರುವ ಆಶಯವನ್ನು ನೀವು ಬಿಟ್ಟುಬಿಟ್ಟಿದ್ದರೆ, ಧೈರ್ಯ ತಂದುಕೊಳ್ಳಿ. ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ಸದಾ ಆನಂದದಿಂದಿರುವ ಅಮೂರ್ತಚೈತನ್ಯದ ಪ್ರತಿಬಿಂಬವಾದ ನಿಮ್ಮ ಆತ್ಮವು, ಮೂಲಭೂತವಾಗಿ, ಸಂತೋಷವೇ ಆಗಿದೆ.

ಸಂತೋಷವು ಸ್ವಲ್ಪಮಟ್ಟಿಗೆ ಬಾಹ್ಯ ಪರಿಸ್ಥಿತಿಗಳನ್ನು, ಆದರೆ ಮುಖ್ಯವಾಗಿ ಮಾನಸಿಕ ಮನೋಪ್ರವೃತ್ತಿಯನ್ನು ಅವಲಂಬಿಸಿರುತ್ತದೆ.

ಮೂಲಭೂತವಾಗಿ, ಪರಿಸ್ಥಿತಿಗಳು ಒಳ್ಳೆಯದು ಅಥವಾ ಕೆಟ್ಟದ್ದಾಗಿರುವುದಿಲ್ಲ; ಅವುಗಳಿಗೆ ಸಂಬಂಧಪಟ್ಟ ವ್ಯಕ್ತಿಯ ಮನಸ್ಸಿನಲ್ಲಿರಬಹುದಾದ ದುಃಖದ ಅಥವಾ ಖುಷಿಯ ಮನೋಪ್ರವೃತ್ತಿಯ ಕಾರಣದಿಂದಾಗಿ ಅವು ನಿರಾಶಾದಾಯಕ ಅಥವಾ ಉತ್ತೇಜಕವಾಗಿರುವಂತೆ ತೋರುತ್ತಿದ್ದರೂ ಅವು ಯಾವಾಗಲೂ ತಟಸ್ಥವಾಗಿರುತ್ತವೆ.

ನಿಮ್ಮ ಪರಿಸ್ಥಿತಿಗಳನ್ನು ಬದಲಿಸಬೇಕೆಂದಿದ್ದರೆ ನಿಮ್ಮ ಆಲೋಚನೆಗಳನ್ನು ಬದಲಿಸಿ. ನಿಮ್ಮ ಆಲೋಚನೆಗಳಿಗೆ ನೀವು ಮಾತ್ರ ಕಾರಣರಾಗಿರುವುದರಿಂದ, ನೀವು ಮಾತ್ರ ಅವುಗಳನ್ನು ಬದಲಿಸಲು ಸಾಧ್ಯ. ಪ್ರತಿ ಆಲೋಚನೆಯೂ ತನ್ನದೇ ಪ್ರವೃತ್ತಿಗನುಗುಣವಾಗಿ ಸೃಷ್ಟಿ ಮಾಡುತ್ತದೆ ಎಂದು ನಿಮಗೆ ಅರಿವಾದಾಗ ನೀವು ಅವುಗಳನ್ನು ಬದಲಿಸಲಿಚ್ಛಿಸುವಿರಿ. ನಿಯಮವು ಎಲ್ಲಾ ಕಾಲಕ್ಕೂ ಕೆಲಸ ಮಾಡುತ್ತದೆ ಹಾಗೂ ನೀವು ಸಾಮಾನ್ಯವಾಗಿ ಎಂತಹ ಆಲೋಚನೆಗಳನ್ನು ಪೋಷಿಸುವಿರೋ ಅದಕ್ಕನುಗುಣವಾಗಿ ವರ್ತಿಸುವಿರಿ ಎನ್ನುವುದು ನೆನಪಿರಲಿ. ಆದ್ದರಿಂದ, ಆರೋಗ್ಯ ಮತ್ತು ಸಂತೋಷ ತರುವಂತಹ ಆಲೋಚನೆಗಳನ್ನೇ ಹೊಂದಲು ಈಗಲೇ ಆರಂಭಿಸಿ.

ಮನಸ್ಸೆಂದರೆ ಮಿದುಳು, ಭಾವನೆ ಮತ್ತು ಎಲ್ಲ ಜೀವಕೋಶಗಳ ಗ್ರಹಣಶಕ್ತಿ ಆಗಿರುವುದರಿಂದ, ಅದು ಮಾನವನ ದೇಹವನ್ನು ಜಾಗರೂಕ ಸ್ಥಿತಿಯಲ್ಲಿಡಬಹುದು ಅಥವಾ ನಿರುತ್ಸಾಹದ ಸ್ಥಿತಿಯಲ್ಲಿಡಬಹುದು. ಮನಸ್ಸೇ ಮಹಾರಾಜ, ಅದರ ಪ್ರಜೆಗಳಾದ ಜೀವಕೊಶಗಳು ತಮ್ಮ ಮಹಾರಾಜನ ಮನಸ್ಥಿತಿಗೆ ತಕ್ಕಂತೆ ವರ್ತಿಸುತ್ತವೆ. ನಾವು ನಮ್ಮ ದೈನಂದಿನ ಆಹಾರದ ಪೌಷ್ಟಿಕ ಮೌಲ್ಯಗಳ ಬಗ್ಗೆ ಆಸ್ಥೆ ವಹಿಸುವಂತೆಯೇ, ಪ್ರತಿ ದಿನವೂ ನಮ್ಮ ಮನಸ್ಸಿಗೆ ಒದಗಿಸುವ ಆಹಾರದ ಪೌಷ್ಟಿಕತೆಯನ್ನೂ ಪರಿಗಣಿಸಬೇಕು.

Sun rays spread on the sky depicting happiness.ನೀವು ನಿರಂತರವಾಗಿ ದುಃಖವನ್ನು ದೃಢೀಕರಿಸುವ ಕಾರಣ, ನಿಮ್ಮೊಳಗೆ ದುಃಖವಿದೆ. ನಿಮ್ಮ ಮನಸ್ಸಿನೊಳಗೆ ಅದು ಇಲ್ಲವೆಂದುಕೊಳ್ಳಿ. ಆಗ ಮುಂದೆಂದೂ ಇರುವುದಿಲ್ಲ. ಈ ಸ್ವಯಂ ದೃಢೀಕರಣವನ್ನೇ ನಾನು ಮಾನವನೊಳಗಿರುವ ನಾಯಕನೆನ್ನುತ್ತೇನೆ. ಇದು ಅವನ ದಿವ್ಯ ಅಥವಾ ಅಗತ್ಯವಾದ ವಿಶಿಷ್ಟ ಪ್ರಕೃತಿಯಾಗಿದೆ. ವ್ಯಕ್ತಿಯು ದುಃಖದಿಂದ ಮುಕ್ತವಾಗಬೇಕಿದ್ದಲ್ಲಿ, ಅವನ ದೈನಂದಿನ ಎಲ್ಲಾ ಚಟುವಟಿಕೆಗಳಲ್ಲಿ ತನ್ನ ಉದಾತ್ಮ ಆತ್ಮವನ್ನು ಶಕ್ತಿಯುತವಾಗಿ ಮತ್ತು ಧನಾತ್ಮಕವಾಗಿ ಸಮರ್ಥಿಸಿಕೊಳ್ಳಬೇಕು.

ನೀವೇ ಸಂತೋಷವಾಗಿರಲು ಬಯಸದಿದ್ದಲ್ಲಿ ಯಾರೊಬ್ಬರೂ ನಿಮ್ಮನ್ನು ಸಂತೋಷದಿಂದಿರುವಂತೆ ಮಾಡಲಾರರು. ಅದಕ್ಕಾಗಿ ಭಗವಂತನನ್ನು ದೂಷಿಸಬೇಡಿ! ಹಾಗೂ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದರೆ ಯಾರೂ ನಿಮ್ಮನ್ನು ದುಃಖಿಗಳನ್ನಾಗಿ ಮಾಡಲಾರರು. ನಮ್ಮದೇ ಇಚ್ಛಾಶಕ್ತಿಯನ್ನು ನಾವು ಉಪಯೋಗಿಸಲು ನಮಗೆ ಅವನು ಸ್ವಾತಂತ್ರ್ಯ ಕೊಟ್ಟಿರದಿದ್ದರೆ, ನಾವು ದುಃಖಿತರಾದಾಗ ಅವನನ್ನು ಬೈಯಬಹುದಿತ್ತು, ಆದರೆ ಆ ಸ್ವಾತಂತ್ರ್ಯವನ್ನು ಅವನು ನಮಗೆ ಕೊಟ್ಟಿದ್ದಾನೆ. ನಮ್ಮ ಜೀವನವನ್ನು ಅದು ಹೇಗಿರಬೇಕೆಂದು ರೂಪಿಸುವವರು ನಾವೇ.

ಗಟ್ಟಿ ಸ್ವಭಾವದವರು ಸಾಮಾನ್ಯವಾಗಿ ಅತ್ಯಂತ ಸುಖಿಗಳು. ತಮಗೆ ಬಂದ ಕಷ್ಟಗಳು ಸಾಮಾನ್ಯವಾಗಿ ತಮ್ಮದೇ ವರ್ತನೆಗಳಿಂದ ಅಥವಾ ಅವಿವೇಕದಿಂದ ಉಂಟಾಗಿರುತ್ತವೆ ಎಂದು ಅರ್ಥಮಾಡಿಕೊಳ್ಳುವ ಅವರು, ತಮ್ಮ ಕಷ್ಟಗಳಿಗೆ ಬೇರೊಬ್ಬರನ್ನು ದೂರುವುದಿಲ್ಲ. ಇತರರ ಪ್ರತಿಕೂಲ ವಿಚಾರಗಳು ಅಥವಾ ಕೆಟ್ಟ ಕಾರ್ಯಗಳು ತಮ್ಮ ಮೇಲೆ ಪರಿಣಾಮ ಬೀರುವಷ್ಟು ತಾವು ದುರ್ಬಲರಾಗಿರದ ಹೊರತು ತಮ್ಮ ಸುಖಕ್ಕೆ ಇನ್ನಷ್ಟು ಸುಖವನ್ನು ಸೇರಿಸಲು, ಅಥವಾ ಇರುವ ಸುಖವನ್ನು ಕಡಿಮೆಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ.

ಸದಾ ಕಲಿಯುವ ಅಪೇಕ್ಷೆ ಹಾಗೂ ಉಚಿತ ರೀತಿಯ ವರ್ತನೆಯಲ್ಲಿ ನೆಲೆಸಿದೆ ನಿಮ್ಮ ಅತ್ಯುನ್ನತ ಆನಂದ. ನಿಮ್ಮನ್ನು ಉತ್ತಮ ಪಡಿಸಿಕೊಂಡಷ್ಟೂ ನಿಮ್ಮ ಸುತ್ತಲಿರುವ ಇತರರನ್ನು ನೀವು ಹೆಚ್ಚು ಹೆಚ್ಚು ಮೇಲೆತ್ತುವಿರಿ. ಸ್ವಸುಧಾರಣೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯು ಸದಾ ವರ್ಧಿಸುವ ಆನಂದದ ವ್ಯಕ್ತಿಯಾಗಿರುತ್ತಾನೆ. ನೀವು ಸಂತೋಷವಾಗಿದ್ದಷ್ಟೂ ನಿಮ್ಮ ಸುತ್ತಲಿನ ಜನ ಸಂತೋಷವಾಗಿರುತ್ತಾರೆ.

ಜೀವನದೆಡೆಗೆ ನಕಾರಾತ್ಮಕ ನಿಲುವನ್ನು ತ್ಯಜಿಸಿ. ನಮ್ಮ ಸುತ್ತಲೂ ಸೊಗಸು ತುಂಬಿರಲು ಗಟಾರಗಳತ್ತ ಏಕೆ ದಿಟ್ಟಿಸಬೇಕು? ಕಲೆ, ಸಂಗೀತ ಮತ್ತು ಸಾಹಿತ್ಯಗಳ ಮೇರುಕೃತಿಗಳಲ್ಲಿಯೂ ಸಹ, ಹಲವು ದೋಷಗಳನ್ನು ಯಾರಾದರೂ ಹುಡುಕಬಹುದು. ಆದರೆ ಅವುಗಳ ಮೋಹಕತೆ ಮತ್ತು ವೈಭವವನ್ನು ಆನಂದಿಸುವುದು ಉತ್ತಮವಲ್ಲವೆ?

“ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ.” ಎಂದು ಮೂರು ಸಣ್ಣ ಕೋತಿಗಳು ನಿರೂಪಿಸುವ ನೀತಿವಾಕ್ಯ ಹೆಚ್ಚೂ ಕಡಿಮೆ ಎಲ್ಲರಿಗೂ ತಿಳಿದಿದೆ. ನಾನು ಸಕಾರಾತ್ಮಕ ಧೋರಣೆಗೆ ಒತ್ತುಕೊಡುತ್ತೇನೆ: “ಒಳ್ಳೆಯದನ್ನೇ ನೋಡು, ಒಳ್ಳೆಯದನ್ನೇ ಕೇಳು, ಒಳ್ಳೆಯದನ್ನೇ ಹೇಳು.”

ನಕಾರಾತ್ಮಕ ಚಿತ್ತವೃತ್ತಿ (Moods) ಗಳಿಂದ ಬಿಡುಗಡೆ

ಆತ್ಮದ ಸಹಜ ಶಾಶ್ವತ ಲಕ್ಷಣವಾಗಿರುವ ನಿತ್ಯನೂತನ ಭಗವದಾನಂದವು ಅವಿನಾಶಿ. ಅಂತೆಯೇ, ಒಬ್ಬನಿಗೆ ಆನಂದವನ್ನು ಹಿಡಿದಿಡುವುದು ಹೇಗೆಂದು ತಿಳಿದಿದ್ದರೆ, ಹಾಗೂ ಬೇಕೆಂದೇ ತನ್ನ ಮನಸ್ಸನ್ನು ಬದಲಿಸಿಕೊಂಡು ಖಿನ್ನತೆಯನ್ನು ಪೋಷಿಸುತ್ತ ದುಃಖಿತನಾಗದೆ ಇದ್ದರೆ, ಮನಸ್ಸಿನ ಆನಂದದ ಅಭಿವ್ಯಕ್ತಿಯನ್ನು ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ.

Cat depicting ever new joy of God inherent in the soul.

ನೀವು ಭಗವಂತನ ಪ್ರತಿಬಿಂಬ. ನೀವು ಭಗವಂತನಂತೆ ವರ್ತಿಸಬೇಕು. ಆದರೆ ಏನಾಗುತ್ತದೆ? ಬೆಳಿಗ್ಗೆ ಬೆಳಿಗ್ಗೆಯೇ ನೀವು ಕೋಪಗೊಂಡು, “ನನ್ನ ಕಾಫಿ ತಣ್ಣಗಾಗಿದೆ!” ಎಂದು ದೂರುತ್ತೀರಿ. ಆದರೇನಂತೆ? ಅಂತಹ ಸಣ್ಣ ವಿಷಯಕ್ಕೆಲ್ಲ ಏಕೆ ನೆಮ್ಮದಿಗೆಡುವುದು? ಎಲ್ಲ ಕೋಪಗಳಿಂದ ಮುಕ್ತರಾಗಿ ನಿಮ್ಮಲ್ಲಿ ಪೂರ್ಣ ಶಾಂತಿಯಿಂದಿರುವಂತಹ ಸಮಚಿತ್ತತೆಯನ್ನು ಹೊಂದಿರಿ. ಅದೇ ನಿಮಗೆ ಬೇಕಾಗಿರುವುದು. ಯಾರಿಗೂ ನಿಮ್ಮ “ಶಾಂತಿಯನ್ನು ಕಸಿದುಕೊಳ್ಳಲು” ಬಿಡಬೇಡಿ. ಯಾವುದೂ ಅದನ್ನು ನಿಮ್ಮಿಂದ ದೂರಮಾಡದಿರಲಿ.

ನಿಮ್ಮನ್ನು ಕಾಡುವ ಕ್ಷುಲ್ಲಕ ವಿಷಯಗಳಿಂದ, ಜೀವನದ ಅಲ್ಪತನಗಳಿಂದ ಎಚ್ಚರಗೊಳ್ಳಿ.

ಯಾರಿಗೂ ದುಃಖ ಇಷ್ಟವಾಗುವುದಿಲ್ಲ. ಮುಂದಿನ ಬಾರಿ ನೀವು ಖಿನ್ನತೆಗೊಳಗಾದಾಗ ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಬಾರದೇಕೆ? ಆಗ ನೀವು ಇಚ್ಛಾಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ನಿಮ್ಮನ್ನು ನೀವು ತೀವ್ರ ದುಃಖಕ್ಕೀಡುಮಾಡುತ್ತಿದ್ದೀರಿ ಎನ್ನುವುದು ನಿಮಗೆ ತಿಳಿದುಬರುತ್ತದೆ. ನೀವು ಹಾಗಿದ್ದಾಗ ನಿಮ್ಮ ಸುತ್ತಲಿನವರಿಗೆ ನಿಮ್ಮ ಮನಸ್ಸಿನ ಅಸಂತೋಷದ ಅರಿವಾಗುತ್ತದೆ…ನಿಮ್ಮ ಮನಸ್ಸಿನ ಕನ್ನಡಿಯಿಂದ ನೀವು ಖಿನ್ನತೆಯನ್ನು ದೂರಮಾಡಬೇಕು.

ನಿಮ್ಮ ಚಿತ್ತವೃತ್ತಿಗಳು, ಅವು ಎಷ್ಟೇ ವಿಪರೀತವಾಗಿ ಕಂಡರೂ ಅವುಗಳನ್ನು ನೀವು ಗೆಲ್ಲಬಹುದು. ಇನ್ನೆಂದೂ ಚಿಂತಾಕುಲನಾಗುವುದಿಲ್ಲ ಎಂದು ಮನಸ್ಸನ್ನು ಗಟ್ಟಿಮಾಡಿಕೊಳ್ಳಿ; ಮನಸ್ಸು ಗಟ್ಟಿಮಾಡಿಕೊಂಡರೂ ಚಿಂತೆಯು ನಿಮ್ಮನ್ನು ಆವರಿಸಿದರೆ, ಅದು ಬಂದ ಕಾರಣವನ್ನು ವಿಶ್ಲೇಷಿಸಿ, ನಂತರ ಅದರ ಬಗ್ಗೆ ಕ್ರಿಯಾತ್ಮಕವಾಗಿ ಏನಾದರೂ ಮಾಡಿ.

ನೀವು ಅಸುಖಿಗಳಾದಾಗ ನೆನಪಿಡಿ, ಅದಕ್ಕೆ ಕಾರಣವೆಂದರೆ, ನೀವು ಜೀವನದಲ್ಲಿ ಸಾಧಿಸಲೇ ಬೇಕೆಂದಿರುವ ಮಹತ್ವದ ಕಾರ್ಯಗಳನ್ನು ಸಾಕಷ್ಟು ಪ್ರಬಲವಾಗಿ ಮನಸ್ಸಿನಲ್ಲಿ ದೃಶ್ಯೀಕರಿಸಿರುವುದಿಲ್ಲ. ಅಲ್ಲದೆ ನಿಮ್ಮ ಇಚ್ಛಾ ಶಕ್ತಿಯನ್ನಾಗಲೀ, ನಿಮ್ಮ ಸೃಜನಾತ್ಮಕ ಸಾಮರ್ಥ್ಯವನ್ನಾಗಲೀ ಮತ್ತು ನಿಮ್ಮ ತಾಳ್ಮೆಯನ್ನಾಗಲೀ ಸಾಕಷ್ಟು ಸುಸ್ಥಿರವಾಗಿ, ನಿಮ್ಮ ಕನಸುಗಳು ನನಸಾಗುವವರೆಗೂ, ನೀವು ಬಳಸಿಕೊಳ್ಳುತ್ತಿಲ್ಲ.

ನಿಮ್ಮ ಸ್ವಂತದ ಏಳಿಗೆಗಾಗಿ ಮತ್ತು ಇತರರ ಉಪಯೋಗಕ್ಕಾಗಿ ಕ್ರಿಯಾತ್ಮಕ ಕೆಲಸಗಳಲ್ಲಿ ನಿರತರಾಗಿರಿ, ಏಕೆಂದರೆ ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸಬೇಕೆನ್ನುವವರು ಪ್ರತಿದಿನ ಇತರರಿಗೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಬೇಕು. ಈ ಆದರ್ಶವನ್ನು ಅನುಸರಿಸಿದರೆ, ನೀವು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಮುಂದುವರಿಯುತ್ತಿರುವಿರೆಂಬ ಅರಿವಿನಲ್ಲಿ ಚಿಂತೆಗಳನ್ನು ದೂರಮಾಡುವಂತಹ ಆನಂದವನ್ನು ಅನುಭವಿಸುವಿರಿ.

ಇತರರಿಗಾಗಿ ಸೇವೆ

Swans of spiritual understanding.

ಇತರರನ್ನು ಸಂತೋಷಪಡಿಸುವುದರಲ್ಲಿ, ಸ್ವಹಿತವನ್ನು ತೊರೆದು ಇತರರಿಗೆ ಆನಂದ ಉಂಟು ಮಾಡುವುದರಲ್ಲಿ ಸಂತೋಷವಡಗಿದೆ.

ನಮ್ಮ ಸ್ವಂತ ಸುಖಕ್ಕಾಗಿ ಇತರರನ್ನು ಸಂತೋಷಪಡಿಸುವುದು ಅತ್ಯಂತ ಮುಖ್ಯ ಹಾಗೂ ಅತ್ಯಂತ ತೃಪ್ತಿಕರ ಅನುಭವವಾಗಿರುತ್ತದೆ. ಕೆಲವು ಜನರು ತಮ್ಮ ಕುಟುಂಬವನ್ನು ಕುರಿತು ಮಾತ್ರ ಯೋಚಿಸುತ್ತಾರೆ: “ನಾವು ನಾಲ್ಕು ಜನ, ಬೇರಾರೂ ಬೇಡ.” ಇನ್ನು ಕೆಲವರು ತಮ್ಮ ಸ್ವಂತದ ಬಗ್ಗೆ ಮಾತ್ರ ಯೋಚಿಸುತ್ತಾರೆ: “ನಾನು ಸಂತೋಷವಾಗಿರುವುದು ಹೇಗೆ?” ಆದರೆ ಇಂತಹ ವ್ಯಕ್ತಿಗಳೇ ಸಂತೋಷವಾಗಿಲ್ಲದಿರುವುದು!

ಸ್ವಂತಕ್ಕಾಗಿ ಬದುಕುವುದೇ ಎಲ್ಲ ದುಃಖಗಳ ಮೂಲ.

ಇತರರಿಗೆ ಆಧ್ಯಾತ್ಮಿಕ, ಮಾನಸಿಕ ಮತ್ತು ಐಹಿಕ ಸೇವೆಗಳನ್ನು ಸಲ್ಲಿಸುವ ಮೂಲಕ, ನಿಮ್ಮ ಸ್ವಂತ ಅಗತ್ಯಗಳು ಈಡೇರುವುದನ್ನು ಕಾಣುವಿರಿ. ಇತರರಿಗೆ ನೀವು ಮಾಡುವ ಸೇವೆಯಲ್ಲಿ ನಿಮ್ಮ ಸ್ವಾರ್ಥವನ್ನು ಮರೆತಾಗ, ನಿಮ್ಮ ಸಂತೋಷದ ಬಟ್ಟಲು ತಾನಾಗಿಯೇ ತುಂಬಿರುವುದನ್ನು ಕಾಣುವಿರಿ.

ನೀವು ಈ ಜಗತ್ತಿಗೆ ಬಂದಾಗ ನೀವು ಅತ್ತಿರಿ, ಬೇರೆಲ್ಲರೂ ನಕ್ಕರು. ನೀವು ಹೇಗೆ ಬದುಕಬೇಕೆಂದರೆ, ನೀವು ಇಲ್ಲಿಂದ ಹೊರಟಾಗ ಬೇರೆಲ್ಲರೂ ಅಳುತ್ತಿರಬೇಕು, ನೀವು ಮಾತ್ರ ನಗುತ್ತಿರಬೇಕು.

ಸಂತೋಷಕ್ಕೆ ಬೇಕಾದ ಆಂತರಿಕ ಸ್ಥಿತಿಗಳು

ನೀವು ಆಳವಾಗಿ ಧ್ಯಾನ ಮಾಡಿದಷ್ಟೂ, ಹೆಚ್ಚು ಇಷ್ಟಪಟ್ಟು ಸೇವೆ ಮಾಡಿದಷ್ಟೂ, ಹೆಚ್ಚು ಸುಖಿಗಳಾಗುವಿರಿ.

ಧ್ಯಾನದ ಮೂಲಕ ಹಾಗೂ ನಿಮ್ಮ ಪ್ರಜ್ಞೆಯನ್ನು ನಿತ್ಯ ಅಸ್ತಿತ್ವ, ನಿತ್ಯ ಪ್ರಜ್ಞ ಮತ್ತು ನಿತ್ಯ ನೂತನ ಆನಂದವಾದ ಭಗವಂತನಲ್ಲಿ ಶ್ರುತಿಗೊಳಿಸುವ ಮೂಲಕ ಸಂತೋಷದ ಎಲ್ಲ ಸ್ಥಿತಿಗಳನ್ನು ನಿಮ್ಮೊಳಗೆ ಹೊಂದಲು ಪ್ರಯತ್ನಿಸಿ. ನಿಮ್ಮ ಸಂತೋಷವು ಎಂದಿಗೂ ಹೊರಗಿನ ಪ್ರಭಾವಕ್ಕೆ ಒಳಗಾಗಬಾರದು. ನಿಮ್ಮ ಪರಿಸರ ಹೇಗೇ ಇರಲಿ, ಅದು ನಿಮ್ಮ ಶಾಂತಿಯನ್ನು ಕದಡಲು ಅವಕಾಶ ಕೊಡಬೇಡಿ.

ನಿಜವಾದ ಸಂತೋಷವು ಬಾಹ್ಯ ಅನುಭವಗಳ ಎಲ್ಲಾ ಸವಾಲುಗಳನ್ನು ಎದುರಿಸಬಲ್ಲುದು. ನಿಮ್ಮ ವಿರುದ್ಧ ಬೇರೆಯವರು ಮಾಡುವ ಹಿಂಸೆಗಳನ್ನು ಸಹಿಸಿಕೊಂಡೂ ಪ್ರೀತಿ ಮತ್ತು ಶಾಂತಿಯನ್ನು ಹಿಂದುರಿಗಿಸಬಲ್ಲಿರಾದರೆ; ಬಾಹ್ಯ ಪರಿಸ್ಥಿತಿಗಳ ಎಲ್ಲ ಯಾತನಾಮಯ ಒತ್ತಡಗಳ ಹೊರತಾಗಿಯೂ ನಿಮ್ಮ ದಿವ್ಯ ಆಂತರಿಕ ಶಾಂತಿಯನ್ನು ನೀವು ಕಾಪಾಡಿಕೊಂಡು ಬರಲು ಸಾಧ್ಯವಾದರೆ, ಆಗ ನಿಮಗೆ ಈ ಸಂತೋಷವೆಂದರೆ ಏನೆಂದು ಅರ್ಥವಾಗುತ್ತದೆ.

ಪ್ರತಿ ರಾತ್ರಿ ಮಲಗುವ ಮುನ್ನ ಹಾಗೂ ಪುನಃ ಬೆಳಿಗ್ಗೆ ದಿನದ ಚಟುವಟಿಕೆಗಳನ್ನು ಆರಂಭಿಸುವ ಮುನ್ನ, ಕನಿಷ್ಠ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ, ಮೌನ ಮತ್ತು ಶಾಂತಿಯಿಂದ [ಧ್ಯಾನದಲ್ಲಿ] ಇರಿ. ಇದು ನಿಮ್ಮಲ್ಲಿ ನಿರ್ಭೀತ ಮತ್ತು ಅಭೇದ್ಯವಾದ ಅಭ್ಯಾಸ ಬಲದ ಅಂತರಂಗದ ಸಂತೋಷವನ್ನುಂಟುಮಾಡಿ, ನಿಮಗೆ ಜೀವನದ ದೈನಂದಿನ ಹೋರಾಟದಲ್ಲಿ ಎಲ್ಲ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಅಂತರಂಗದಲ್ಲಿ ಅಂತಹ ಬದಲಾಗದ ಸಂತೋಷವನ್ನಿಟ್ಟುಕೊಂಡು, ನಿಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೊರಡಿ.

ಸಂತೋಷಕ್ಕಾಗಿ ಬಾಹ್ಯ ಪರಿಸ್ಥಿತಿಗಳನ್ನು ಅವಲಂಬಿಸಿದಷ್ಟೂ ನಿಮಗೆ ಸಂತೋಷದ ಅನುಭವವು ಕಡಿಮೆಯಾಗುತ್ತದೆ.

ಭಗವಂತನನ್ನು ಮರೆತು ಸಂತೋಷದಿಂದಿರಬಹುದು ಎಂದು ನೀವು ತಿಳಿದಿದ್ದರೆ, ಅದು ನಿಮ್ಮ ತಪ್ಪು ತಿಳುವಳಿಕೆ, ಏಕೆಂದರೆ ವಿಶ್ವದಲ್ಲಿ ಏಕೈಕ ವಾಸ್ತವವಾದ ಭಗವಂತನೇ ಸರ್ವಸ್ವ ಎಂದು ನಿಮಗೆ ಅರಿವಾಗುವವರೆಗೂ ನೀವು ಮತ್ತೆ ಮತ್ತೆ ಒಂಟಿತನದಲ್ಲಿ ಅಳುತ್ತಿರುತ್ತೀರಿ. ನೀವು ಅವನ ಪ್ರತಿಬಿಂಬದಂತೆಯೇ ಮಾಡಲ್ಪಟ್ಟಿದ್ದೀರಿ. ನಿಮಗೆ ಶಾಶ್ವತ ಸುಖ ಯಾವುದರಲ್ಲೂ ಸಿಗುವುದಿಲ್ಲ, ಏಕೆಂದರೆ ಭಗವಂತನಲ್ಲದೆ ಬೇರಾವುದೂ ಪರಿಪೂರ್ಣವಲ್ಲ.

ಪ್ರಭುವಿನ ಸಾನ್ನಿಧ್ಯದಲ್ಲಿ ನಾನು ಕಂಡುಕೊಳ್ಳುವ ಪರಿಶುದ್ಧ ಸಂತೋಷವನ್ನು ಯಾವ ಶಬ್ದಗಳೂ ವರ್ಣಿಸಲಾರವು. ಹಗಲೂ ರಾತ್ರಿ ನಾನು ಆನಂದದ ಸ್ಥಿತಿಯಲ್ಲಿರುತ್ತೇನೆ. ಆ ಆನಂದವೇ ಭಗವಂತ. ಅವನನ್ನು ಅರಿಯುವುದೆಂದರೆ ನಿಮ್ಮ ಎಲ್ಲ ದುಃಖಗಳ ಅಂತ್ಯಕ್ರಿಯೆ ಮಾಡಿದಂತೆ. ನೀವು ಭಾವರಹಿತವಾಗಿಯೂ ಮಂಕಾಗಿಯೂ ಇರಬೇಕೆಂದು ಅವನು ಬಯಸುವುದಿಲ್ಲ. ಇದು ಭಗವಂತನ ಬಗೆಗಿನ ಸರಿಯಾದ ಕಲ್ಪನೆಯಲ್ಲ, ಅವನನ್ನು ಸಂತೋಷಪಡಿಸುವ ಮಾರ್ಗವೂ ಅಲ್ಲ. ಸಂತೋಷದಿಂದಿರದಿದ್ದರೆ ನಿಮಗೆ ಭಗವಂತನನ್ನು ಕಂಡುಕೊಳ್ಳಲು ಸಾಮರ್ಥ್ಯವೂ ಇರುವುದಿಲ್ಲ…ನೀವು ಹೆಚ್ಚು ಸಂತೋಷಿಗಳಾದಷ್ಟೂ ಅವನೊಂದಿಗೆ ಹೆಚ್ಚು ಶ್ರುತಿಗೊಳ್ಳುವಿರಿ. ಅವನನ್ನು ಅರಿತವರು ಸದಾ ಸಂತೋಷದಿಂದಿರುತ್ತಾರೆ, ಏಕೆಂದರೆ ಭಗವಂತನು ಆನಂದವೇ ಆಗಿದ್ದಾನೆ.

ದೃಢೀಕರಣಗಳು

ದೃಢೀಕರಣ ಸಿದ್ಧಾಂತ ಮತ್ತು ಸೂಚನೆಗಳು

ಪ್ರಾತಃಕಾಲದಿಂದ ಆರಂಭಿಸಿ, ನಾನು ಈ ದಿನ ಸಂಧಿಸುವ ಎಲ್ಲರಿಗೂ ನನ್ನ ಉಲ್ಲಾಸವನ್ನು ಹೊರಸೂಸುತ್ತೇನೆ. ಈ ದಿನ ನನ್ನೆದುರು ಬಂದವರೆಲ್ಲರಿಗೂ ನಾನು ಮಾನಸಿಕ ಉಲ್ಲಾಸವಾಗುತ್ತೇನೆ.

ಎಲ್ಲೆಡೆ ಒಳ್ಳೆಯದನ್ನೇ ಕಾಣುವ ಮೂಲಕ ಹಾಗೂ ಎಲ್ಲವೂ ಭಗವಂತನ ಪರಿಪೂರ್ಣ ಕಲ್ಪನೆಯ ಸಾಕಾರ ರೂಪ ಎಂದು ಅರಿಯುವ ಮೂಲಕ ಹೊಸ ರೀತಿಯಲ್ಲಿ ಯೋಚಿಸುವ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತೇನೆ.

ನಾನು ಇಂದು ಎಲ್ಲಿರುವೆನೋ, ಅಲ್ಲಿಯೇ ಅಂತರಂಗದ ಸಂತೋಷವನ್ನು ಈಗಲೇ ಹೊಂದಲು ನಿರ್ಧರಿಸುತ್ತೇನೆ.

ಹೆಚ್ಚಿನ ಓದಿಗಾಗಿ

ಇದನ್ನು ಹಂಚಿಕೊಳ್ಳಿ