ನಿಜವಾದ ಯಶಸ್ಸು ಮತ್ತು ಅಭ್ಯುದಯವನ್ನು ಸಾಧಿಸುವುದು

ಶ್ರೀ ಶ್ರಿ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

ನಿಜವಾದ ಯಶಸ್ಸು

ಯಶಸ್ಸು ಒಂದು ಸರಳವಾದ ವಿಷಯವಲ್ಲ; ಅದನ್ನು ನಿಮ್ಮಲ್ಲಿರುವ ಧನದಿಂದ ಅಥವಾ ಪ್ರಾಪಂಚಿಕ ಸಿರಿ ಸಂಪತ್ತಿನಿಂದ ಮಾತ್ರ ಅಳೆಯಲಾಗದು. ಯಶಸ್ಸಿನ ಅರ್ಥ ಅದಕ್ಕಿಂತ ಎಷ್ಟೋ ಆಳವಾದುದು. ಎಲ್ಲಾ ಪರಿಸ್ಥಿತಿಗಳಲ್ಲಿ ನಿಮ್ಮ ಆಂತರಿಕ ಶಾಂತಿ ಮತ್ತು ಮನೋನಿಗ್ರಹಗಳು ನಿಮ್ಮನ್ನು ಎಷ್ಟರ ಮಟ್ಟಿಗೆ ಸಂತೋಷದಿಂದಿರುವಂತೆ ಮಾಡುತ್ತವೆ ಎಂಬುದರಿಂದ ಮಾತ್ರ ಅದನ್ನು ಅಳೆಯಬಹುದು. ಅದೇ ನಿಜವಾದ ಯಶಸ್ಸು.

ಯಶಸ್ಸು ಹಾಗೂ ಸಂತೋಷದ ರಹಸ್ಯ ನಿಮ್ಮೊಳಗೇ ಅಡಗಿದೆ. ನಿಮ್ಮ ಬಾಹ್ಯ ಜೀವನದಲ್ಲಿ ಯಶಸ್ವಿಯಾಗಿದ್ದು ಏಳಿಗೆಯನ್ನು ಕಂಡಿದ್ದರೂ, ಆಂತರಿಕವಾಗಿ ನೀವು ಸಂತೋಷವಾಗಿಲ್ಲವೆಂದಾದರೆ ಅದನ್ನು ನಿಜವಾದ ಯಶಸ್ಸು ಎಂದು ಹೇಳಲಾಗುವುದಿಲ್ಲ. ಒಬ್ಬ ಲಕ್ಷಾಧಿಪತಿಯಾಗಿದ್ದರೂ ಸಂತೋಷವಾಗಿಲ್ಲವೆಂದರೆ ಆತ ಯಶಸ್ವಿಯಾಗಿಲ್ಲವೆಂದೇ ಹೇಳಬಹುದು. ನಿಮ್ಮಲ್ಲಿ ಲಕ್ಷೋಪಲಕ್ಷ ಹಣವಿದ್ದರೂ, ನೀವು ಯಶಸ್ವಿಯಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ನೀವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ನಿಮ್ಮ ಜೀವನದಲ್ಲಿ ನೀವು ಸಂತೋಷವನ್ನು ಹೊಂದಿದ್ದರೆ, ನೀವು ನಿಜವಾಗಿಯೂ ಯಶಸ್ವಿಗಳು.

ಕ್ರಿಯಾಶೀಲ ಇಚ್ಛೆಯನ್ನು ಉಪಯೋಗಿಸುವುದು

ಸಾಧ್ಯವಿಲ್ಲವೆಂದು ನೀವು ಯೋಚಿಸದ ಹೊರತು ಯಾವುದೂ ಅಸಾಧ್ಯವಲ್ಲ.

ಕೈಲಾಸ ಪರ್ವತಮರ್ತ್ಯರಾಗಿ ನೀವು ಸೀಮಿತರು, ಆದರೆ ಭಗವಂತನ ಮಗುವಾಗಿ ನೀವು ಅಸೀಮರು….ನಿಮ್ಮ ಗಮನವನ್ನು ಭಗವಂತನ ಮೇಲೆ ಏಕಾಗ್ರಗೊಳಿಸಿ. ಆಗ ನೀವು ಬಯಸಿದ ಎಲ್ಲಾ ಶಕ್ತಿಯೂ ಯಾವುದೇ ರೀತಿಯಲ್ಲಿ ಬಳಸಲು ನಿಮ್ಮದಾಗುವುದು.

ಇಚ್ಛಾಶಕ್ತಿಯು ನಿಮ್ಮಲ್ಲಿರುವ ದೇವರ ಪ್ರತಿರೂಪದ ಸಾಧನ. ಇಚ್ಛಾಶಕ್ತಿಯಲ್ಲಿ ಎಲ್ಲಾ ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸುವ ಅವನ ಅಸೀಮ ಶಕ್ತಿಯಿದೆ. ನೀವು ದೇವರ ಪಡಿಯಚ್ಚಾಗಿರುವುದರಿಂದ, ನಿಮಗೆ ಬೇಕಾದುದೆಲ್ಲವೂ ಆಗುವಂತೆ ಮಾಡುವ ಶಕ್ತಿ ನಿಮ್ಮದಾಗುತ್ತದೆ.

ಒಳ್ಳೆಯದನ್ನು ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡಾಗ, ಅದನ್ನು ಈಡೇರಿಸಲು ನೀವು ಕ್ರಿಯಾಶೀಲ ಇಚ್ಛಾಶಕ್ತಿಯನ್ನು ಉಪಯೋಗಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಪರಿಸ್ಥಿತಿಗಳೇನೇ ಇರಲಿ, ನೀವು ಪ್ರಯತ್ನಿಸುತ್ತಲೇ ಇದ್ದರೆ, ನಿಮ್ಮ ಇಚ್ಛಾಶಕ್ತಿಯು ತನ್ನ ಸೂಕ್ತ ಪ್ರತಿಫಲವನ್ನು ಕಂಡುಕೊಳ್ಳುವಂತೆ ಭಗವಂತ ಮಾರ್ಗವನ್ನು ಸೃಷ್ಟಿಸುತ್ತಾನೆ: “ನಿಮಗೆ ಶ್ರದ್ಧೆಯಿದ್ದರೆ, ಅಂತೆ ಸಂದೇಹಿಸದಿದ್ದರೆ,…ನೀವು ಈ ಪರ್ವತಕ್ಕೆ ನೀನು ಇಲ್ಲಿಂದ ಜರುಗಿ ಸಮುದ್ರದೊಳಗೆ ಬೀಳು, ಎಂದು ಹೇಳಿದರೆ, ಅದು ಹಾಗೇ ಆಗುತ್ತದೆ” ಎಂದು ಏಸು ಹೇಳಿದಾಗ ಇದೇ ಸತ್ಯವನ್ನೇ ಅವನು ಸೂಚಿಸಿದ್ದು. ನೀವು ಸತತವಾಗಿ ನಿಮ್ಮ ಇಚ್ಛಾಶಕ್ತಿಯನ್ನು ಉಪಯೋಗಿಸಿದರೆ, ಏನೇ ಅಡೆತಡೆಗಳು ಬಂದರೂ, ಅದು ಯಶಸ್ಸನ್ನೂ, ಆರೋಗ್ಯವನ್ನೂ, ಜನಗಳಿಗೆ ನೆರವಾಗುವ ಶಕ್ತಿಯನ್ನೂ ಕೊಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಭಗವಂತನ ಸಾನ್ನಿಧ್ಯವನ್ನೂ ಕೊಡುತ್ತದೆ.
ಮರ್ತ್ಯ ಮಾನವನ ತಲೆಯಲ್ಲಿ “ಅಸಾಧ್ಯ” ಗಳೇ ತುಂಬಿವೆ. ಕೆಲವು ವೈಶಿಷ್ಟ್ಯಗಳು ಮತ್ತು ಅಭ್ಯಾಸಗಳಿರುವ ಕುಟುಂಬದಲ್ಲಿ ಜನಿಸಿರುವುದರಿಂದ, ಅವುಗಳ ಪ್ರಭಾವದಿಂದಾಗಿ ಅವನು ತನಗೆ ಕೆಲವು ಕೆಲಸಗಳನ್ನು ಮಾಡಲಾಗುವುದಿಲ್ಲ; ಹೆಚ್ಚು ನಡೆಯಲಾಗುವುದಿಲ್ಲ, ಇದನ್ನು ತಿನ್ನಲು ಸಾಧ್ಯವಿಲ್ಲ, ಅದನ್ನು ಕಂಡರೆ ಸಹಿಸುವುದಿಲ್ಲ ಎಂದು ಯೋಚಿಸುತ್ತಿರುತ್ತಾನೆ. ಈ “ಸಾಧ್ಯವಿಲ್ಲ” ವುಗಳನ್ನು ದಹಿಸಿಬಿಡಬೇಕು. ನಿಮಗೆ ಬೇಕಾದುದೆಲ್ಲವನ್ನೂ ಸಾಧಿಸುವ ಶಕ್ತಿ ನಿಮಗಿದೆ; ಇಚ್ಛಾಶಕ್ತಿಯಲ್ಲಿ ಆ ಶಕ್ತಿಯಿದೆ.
ಕ್ರಿಯಾತ್ಮಕ ಇಚ್ಛಾಶಕ್ತಿಯೊಡನೆ, ನೀವು ಒಂದು ನಿರ್ದಿಷ್ಟ ಸಂಕಲ್ಪಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದರೆ, ಕೊನೆಗೆ ಅದು ಒಂದು ಮೂರ್ತವಾದ ಬಾಹ್ಯ ರೂಪವನ್ನು ತಾಳುತ್ತದೆ.
ಕ್ರಿಯಾತ್ಮಕ ಇಚ್ಛಾಶಕ್ತಿಯಿಂದ ಒಂದು ಆಲೋಚನೆ ಹೊಂದಿರುವುದೆಂದರೆ, ಆ ಆಲೋಚನಾ ವಿನ್ಯಾಸವು ಕ್ರಿಯಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳುವವರೆಗೆ ಅದನ್ನು ಹಿಡಿದಿಟ್ಟಿರುವುದು. ಒಂದು ಆಲೋಚನೆಯನ್ನು ಇಚ್ಛಾಶಕ್ತಿಯಿಂದ ಕ್ರಿಯಾತ್ಮಕವಾಗಿಸಿದರೆ, ಅದು ನೀವು ಸೃಷ್ಟಿಸಿದ ಮಾನಸಿಕ ನೀಲನಕ್ಷೆಗೆ ಅನುಗುಣವಾಗಿ ವ್ಯಕ್ತವಾಗುತ್ತದೆ.
ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ? ನಿಮಗೆ ಸಾಧಿಸಲು ಸಾಧ್ಯವಿಲ್ಲ ಎಂದೆನಿಸಿದ ಒಂದು ವಿಷಯವನ್ನು ಆಯ್ದುಕೊಳ್ಳಿ, ನಂತರ ನಿಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಆ ಒಂದು ಕೆಲಸವನ್ನು ಮಾಡಲು ಪ್ರಯತ್ನಿಸಿ. ಅದರಲ್ಲಿ ಯಶಸ್ಸು ನಿಮ್ಮದಾದಾಗ, ಇನ್ನೂ ದೊಡ್ಡದಾದುದನ್ನು ಆಯ್ದುಕೊಳ್ಳಿ, ಹೀಗೆ ನಿಮ್ಮ ಇಚ್ಛಾಶಕ್ತಿಯನ್ನು ಪ್ರಯೋಗಿಸುತ್ತಲೇ ಇರಿ. ನಿಮ್ಮ ಕಷ್ಟವು ದೊಡ್ಡದಾಗಿದ್ದರೆ, ಆಳವಾಗಿ ಪ್ರಾರ್ಥಿಸಿ: “ಪ್ರಭುವೇ, ನನ್ನೆಲ್ಲ ಕಷ್ಟಗಳನ್ನು ಜಯಿಸುವ ಶಕ್ತಿಯನ್ನು ಕೊಡು.” ನೀವೇನೇ ಆಗಿರಲಿ, ಯಾರೇ ಆಗಿರಲಿ, ನಿಮ್ಮ ಇಚ್ಛಾಶಕ್ತಿಯನ್ನು ಪ್ರಯೋಗಿಸಲೇ ಬೇಕು. ನೀವು ನಿಮ್ಮ ಮನಸ್ಸನ್ನು ದೃಢವಾಗಿಸಿಕೊಳ್ಳಿ. ಈ ಇಚ್ಛಾಶಕ್ತಿಯನ್ನು ವ್ಯವಹಾರದಲ್ಲೂ ಹಾಗೆಯೇ ಧ್ಯಾನದಲ್ಲೂ ಬಳಸಿ.
ಜಯಾಪಜಯಗಳು ನಿಮ್ಮ ಮನಸ್ಸಿನಲ್ಲೇ ನಿರ್ಧಾರವಾಗುತ್ತವೆ. ಇಡೀ ಸಮಾಜದ ನಕಾರಾತ್ಮಕ ಅಭಿಪ್ರಾಯದ ವಿರುದ್ಧವಾಗಿಯೂ ನೀವು ನಿಮ್ಮ ಸರ್ವದಮನಕಾರಕ ಇಚ್ಛಾಶಕ್ತಿಯನ್ನು ಪ್ರಯೋಗಿಸಿ, ಕಷ್ಟದಲ್ಲಿ ನೀವು ಮುಳುಗೇ ಇರಲು ಸಾಧ್ಯವಿಲ್ಲ ಎಂಬ ಗಾಢನಂಬಿಕೆಯನ್ನು ವ್ಯಕ್ತಮಾಡಿದರೆ, ಗೂಢವಾದ ದಿವ್ಯಶಕ್ತಿಯೊಂದು ನಿಮ್ಮನ್ನು ಪ್ರವೇಶಿಸಿದ ಅನುಭವ ನಿಮಗಾಗುತ್ತದೆ; ಆ ಗಾಢನಂಬಿಕೆ ಮತ್ತು ಶಕ್ತಿಯ ಕಾಂತೀಯ ಸೆಳೆತವು ನಿಮಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತಿರುವುದನ್ನು ನೀವು ಕಾಣುವಿರಿ.

ವೈಫಲ್ಯತೆಯನ್ನು ರಚನಾತ್ಮಕವಾಗಿ ನಿಭಾಯಿಸುವುದು

Waterfall depicting how to move through rocks of difficulties and overcome failures.ವೈಫಲ್ಯತೆಯ ಋತುವು ಯಶಸ್ಸಿನ ಬೀಜಗಳನ್ನು ಬಿತ್ತುವುದಕ್ಕೆ ಅತಿ ಪ್ರಶಸ್ತ ಕಾಲ. ಪರಿಸ್ಥಿತಿಗಳೆಂಬ ದೊಣ್ಣೆಯ ಹೊಡೆತವು ನಿಮ್ಮನ್ನು ಘಾಸಿಗೊಳಿಸಬಹುದು, ಆದರೆ ತಲೆ ಎತ್ತಿ ನಡೆಯಿರಿ. ನೀವು ಎಷ್ಟೇ ಬಾರಿ ಸೋತರೂ ಸದಾ ಮತ್ತೊಮ್ಮೆ ಪ್ರಯತ್ನಿಸಿ. ಇನ್ನು ಹೋರಾಡಲು ಸಾಧ್ಯವಿಲ್ಲ ಎಂದೆನಿಸಿದ ಮೇಲೂ ಅಥವಾ ನಿಮಗೆ ಆಗುವುದನ್ನೆಲ್ಲಾ ಮಾಡಿಯಾಯಿತು ಎಂದು ಯೋಚಿಸಿದ ಮೇಲೂ ಅಥವಾ ಗೆಲುವು ನಿಮ್ಮ ಪ್ರಯತ್ನಗಳ ಮುಡಿಗೇರುವವರೆಗೆ ಹೋರಾಡಿ.

ಯಶಸ್ಸಿನ ಮನಃಶಾಸ್ತ್ರವನ್ನು ಹೇಗೆ ಬಳಸಬೇಕೆಂಬುದನ್ನು ಕಲಿತುಕೊಳ್ಳಿ. ಕೆಲವರು ಸಲಹೆ ನೀಡುತ್ತಾರೆ, “ವೈಫಲ್ಯತೆಯ ಬಗ್ಗೆ ಮಾತನಾಡಲೇ ಬೇಡ.” ಆದರೆ ಅದೊಂದೇ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ನಿಮ್ಮ ಸೋಲನ್ನು, ಅದರ ಕಾರಣಗಳನ್ನು ವಿಶ್ಲೇಷಿಸಿಕೊಳ್ಳಿ, ಅದರ ಅನುಭವದಿಂದ ಲಾಭ ಪಡೆದುಕೊಳ್ಳಿ. ನಂತರ ಅದರ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಡಿ. ಹಲವಾರು ಬಾರಿ ಸೋತರೂ, ಅಂತರಂಗದಲ್ಲಿ ಸೋಲೊಪ್ಪಿಕೊಳ್ಳದೆ ಮತ್ತೆ ಪ್ರಯತ್ನಿಸುವವನೇ ನಿಜವಾದ ಜಯಶಾಲಿ.

ಬದುಕಿನಲ್ಲಿ ಕತ್ತಲಾವರಿಸಬಹುದು, ಕಷ್ಟಗಳು ಬರಬಹುದು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಅವು ತಪ್ಪಿ ಹೋಗಬಹುದು, ಆದರೆ ನಿಮ್ಮೊಳಗೆ ನೀವು, “ನನ್ನ ಕಥೆ ಮುಗಿಯಿತು. ದೇವರು ನನ್ನ ಕೈ ಬಿಟ್ಟ,” ಎಂದು ಎಂದಿಗೂ ಅಂದುಕೊಳ್ಳಬೇಡಿ. ಅಂತಹ ವ್ಯಕ್ತಿಗೆ ಯಾರೇನು ಮಾಡಲು ಸಾಧ್ಯ? ನಿಮ್ಮ ಕುಟುಂಬ ನಿಮ್ಮನ್ನು ತೊರೆಯಬಹುದು; ಅದೃಷ್ಟ ಕೈಬಿಟ್ಟಂತೆ ಕಾಣಬಹುದು; ಮನುಷ್ಯ ಮತ್ತು ಪ್ರಕೃತಿಯ ಎಲ್ಲಾ ಶಕ್ತಿಗಳು ನಿಮ್ಮ ವಿರುದ್ಧ ವ್ಯೂಹ ರಚಿಸಬಹುದು; ಆದರೆ ನಿಮ್ಮೊಳಗಿರುವ ದಿವ್ಯ ಕರ್ತೃತ್ವ ಶಕ್ತಿಯ ಗುಣದಿಂದ, ನಿಮ್ಮ ಹಿಂದಿನ ದುರಾಚಾರಗಳಿಂದ ಸೃಷ್ಟಿಯಾದ ವಿಧಿಯ ಪ್ರತಿಯೊಂದು ಆಕ್ರಮಣವನ್ನು ಹಿಮ್ಮೆಟ್ಟಿಸಿ, ಜಯಶಾಲಿಯಾಗಿ ಸ್ವರ್ಗದೊಳಕ್ಕೆ ಕಾಲಿಡಬಹುದು.

ನೀವು ಎಷ್ಟೇ ಬಾರಿ ವಿಫಲರಾದರೂ ಪ್ರಯತ್ನಿಸುತ್ತಲೇ ಇರಿ. ಏನೇ ಆದರೂ, ನೀವು, “ಭೂಮಿಯೇ ನುಚ್ಚುನೂರಾಗಬಹುದು ಆದರೆ ನನಗಾಗುವುದನ್ನೆಲ್ಲಾ ಮಾಡುತ್ತಲೇ ಇರುತ್ತೇನೆ,” ಎಂದು ದೃಢವಾಗಿ ನಿಶ್ಚಯಿಸಿದ್ದರೆ, ನೀವು ಕ್ರಿಯಾತ್ಮಕ ಇಚ್ಛಾಶಕ್ತಿಯನ್ನು ಉಪಯೋಗಿಸುತ್ತಿರುವಿರಿ ಎಂದರ್ಥ, ಆಗ ನೀವು ಗೆಲ್ಲುವಿರಿ. ಆ ಕ್ರಿಯಾತ್ಮಕ ಇಚ್ಛಾಶಕ್ತಿಯೇ ಒಬ್ಬನನ್ನು ಸಿರಿವಂತನನ್ನಾಗಿಯೂ, ಮತ್ತೊಬ್ಬನನ್ನು ಶಕ್ತಿಶಾಲಿಯನ್ನಾಗಿಯೂ, ಮಗದೊಬ್ಬನನ್ನು ಸಂತನನ್ನಾಗಿಯೂ ಮಾಡುತ್ತದೆ.

ಏಕಾಗ್ರಚಿತ್ತತೆ — ಯಶಸ್ಸಿನ ಗುಟ್ಟು

ಜೀವನದಲ್ಲಿನ ಹಲವಾರು ಸೋಲುಗಳಿಗೆ ಮೂಲ ಕಾರಣ ಏಕಾಗ್ರತೆಯಿಲ್ಲದಿರುವುದು. ಗಮನವು ಒಂದು ಸರ್ಚ್ ಲೈಟ್ ಇದ್ದಂತೆ; ಅದರ ಕಿರಣಗಳು ವಿಶಾಲವಾದ ಪ್ರದೇಶದ ಮೇಲೆ ಬಿದ್ದಾಗ, ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಅದರ ಕೇಂದ್ರೀಕರಿಸುವ ಶಕ್ತಿಯು ಬಲಹೀನವಾಗುತ್ತದೆ, ಆದರೆ ಏಕಕಾಲಕ್ಕೆ ಒಂದೇ ವಸ್ತುವಿನ ಮೇಲೆ ಕೇಂದ್ರೀಕರಿಸಿದಾಗ ಅದು ಬಲಶಾಲಿಯಾಗುತ್ತದೆ. ಮಹಾನ್ ವ್ಯಕ್ತಿಗಳೆಲ್ಲ ಏಕಾಗ್ರಚಿತ್ತವುಳ್ಳವರಾಗಿರುತ್ತಾರೆ. ಅವರು ತಮ್ಮ ಇಡೀ ಮನಸ್ಸನ್ನು ಒಂದು ಸಮಯಕ್ಕೆ ಒಂದೇ ವಿಷಯದ ಮೇಲೆ ಇರಿಸುತ್ತಾರೆ.

ನಮಗೆ ಏಕಾಗ್ರತೆಯ ವೈಜ್ಞಾನಿಕ ವಿಧಾನ ತಿಳಿದಿರಬೇಕು (ಯೋಗದಾ ಸತ್ಸಂಗ ಪಾಠಮಾಲಿಕೆಯಲ್ಲಿ ಬೋಧಿಸಲಾಗುತ್ತದೆ) ಅದರಿಂದ ನಾವು ನಮ್ಮ ಗಮನವನ್ನು ಚಂಚಲಗೊಳಿಸುವ ವಸ್ತುಗಳಿಂದ ಪ್ರತ್ಯೇಕಿಸಿ ಒಂದು ಸಮಯಕ್ಕೆ ಒಂದೇ ವಸ್ತುವಿನ ಮೇಲಿರಿಸಬಹುದು. ಏಕಾಗ್ರತೆಯ ಶಕ್ತಿಯಿಂದ, ಮಾನವನು ತನಗೆ ಬೇಕಾದುದನ್ನು ಸಾಧಿಸಲು ಮನಸ್ಸಿನ ಅಗಣಿತ ಶಕ್ತಿಯನ್ನು ಉಪಯೋಗಿಸಬಹುದು, ಅಲ್ಲದೆ ವೈಫಲ್ಯವು ಪ್ರವೇಶಿಸಬಹುದಾದ ಎಲ್ಲಾ ದ್ವಾರಗಳನ್ನು ಅವನು ಎಚ್ಚರದಿಂದ ಕಾಯಬಹುದು.

ನಾವು ನಮ್ಮ ಸಂಭಾವ್ಯ ತೊಂದರೆಗಳು ಮತ್ತು ಕರ್ತವ್ಯಗಳನ್ನು ಏಕಾಗ್ರತಾ ಶಕ್ತಿಯಿಂದ ಎದುರಿಸಬೇಕು ಮತ್ತು ಅವುಗಳನ್ನು ಯಥೋಚಿತವಾಗಿ ಕಾರ್ಯಗತಗೊಳಿಸಬೇಕು. ಇದು ನಮ್ಮ ಜೀವನದ ಮೂಲಮಂತ್ರವಾಗಬೇಕು.

ಹೆಚ್ಚಿನ ಜನರು ಎಲ್ಲ ಕೆಲಸಗಳನ್ನು ಅರೆಮನಸ್ಸಿನಿಂದ ಮಾಡುತ್ತಾರೆ. ಅವರು ತಮ್ಮ ಗಮನದ ಸುಮಾರು ಹತ್ತನೇ ಒಂದರಷ್ಟು ಭಾಗವನ್ನು ಮಾತ್ರ ಉಪಯೋಗಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಜಯಶಾಲಿಯಾಗುವ ಶಕ್ತಿಯಿರುವುದಿಲ್ಲ….ಎಲ್ಲವನ್ನೂ ಗಮನ ಶಕ್ತಿ ಬಳಸಿ ಮಾಡಿ. ಆ ಶಕ್ತಿಯ ಸಂಪೂರ್ಣ ಸಾಮರ್ಥ್ಯವನ್ನು ಧ್ಯಾನದಿಂದ ಪಡೆಯಬಹುದು. ಭಗವಂತನ ಆ ಕೇಂದ್ರೀಕರಿಸುವ ಶಕ್ತಿಯನ್ನು ನೀವು ಉಪಯೋಗಿಸಿದಾಗ, ಅದನ್ನು ಯಾವುದರ ಮೇಲಿಟ್ಟರೂ ಜಯಶೀಲರಾಗುವಿರಿ.

ಸೃಜನಶೀಲತೆ

ದೇವರ ಸೃಜನಶಕ್ತಿಯೊಂದಿಗೆ ನಿಮ್ಮನ್ನು ಶ್ರುತಿಗೊಳಿಸಿಕೊಳ್ಳಿ. ಆಗ ನೀವು ನಿಮಗೆ ಮಾರ್ಗದರ್ಶನ ನೀಡಬಲ್ಲ ಮತ್ತು ನಿಮ್ಮ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬಲ್ಲ ಶಕ್ತಿಯ ಸಂಪರ್ಕದಲ್ಲಿಯೇ ಇರುತ್ತೀರಿ. ನಿಮ್ಮ ಅಸ್ತಿತ್ವದ ಕ್ರಿಯಾತ್ಮಕ ಶಕ್ತಿಯ ಮೂಲದಿಂದ, ಶಕ್ತಿಯು ಸತತವಾಗಿ ಹರಿಯುವುದು, ಇದರಿಂದ ನೀವು ಯಾವುದೇ ಕಾರ್ಯಕ್ಷೇತ್ರದಲ್ಲಾದರೂ ಸೃಜನಾತ್ಮಕತೆಯಿಂದ ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದುವಿರಿ.
ಈ ಪ್ರಶ್ನೆಯನ್ನು ನಿಮಗೆ ಕೇಳಿಕೊಳ್ಳಿ: “ಬೇರಾರೂ ಮಾಡಿರದ ಕೆಲಸವನ್ನು ನಾನು ಮಾಡಲು ಪ್ರಯತ್ನಿಸಿರುವೆನೆ?” ಕರ್ತೃತ್ವ ಶಕ್ತಿಯನ್ನು ಉಪಯೋಗಿಸುವಲ್ಲಿ ಅದು ಮೊದಲ ಹೆಜ್ಜೆ. ನೀವು ಅಷ್ಟು ದೂರ ಯೋಚಿಸಿಲ್ಲದಿದ್ದರೆ, ತಾವೇನು ಮಾಡುತ್ತಿರುವೆವೋ ಅದಕ್ಕಿಂತ ಬೇರೆಯಾಗಿ ಏನು ಮಾಡಲೂ ತಮಗೆ ಸಾಮರ್ಥ್ಯವಿಲ್ಲ ಎಂದು ತಪ್ಪು ತಿಳಿದುಕೊಂಡಿರುವ ಇತರ ನೂರಾರು ಜನರಲ್ಲಿ ನೀವು ಕೂಡ ಒಬ್ಬರಾಗುವಿರಿ. ಅವರು ನಿದ್ದೆಯಲ್ಲಿ ನಡೆದಾಡುವವರಂತೆ; ಅವರ ಸುಪ್ತ ಮನಸ್ಸಿನಿಂದ ಬರುತ್ತಿರುವ ಸಲಹೆಗಳು ಅವರಿಗೆ ಒಂದೇ ಹಾರ್ಸ್ ಪವರ್ (ಅಶ್ವಶಕ್ತಿ) ಜನರ ಪ್ರಜ್ಞೆಯನ್ನು ಕೊಟ್ಟಿದೆ.
ನೀವು ಜೀವನದಲ್ಲಿ ಹೀಗೆಯೇ ನಿದ್ರಾ ನಡಿಗೆಯಲ್ಲಿ ಬದುಕುತ್ತ ಬಂದಿದ್ದರೆ, ನೀವು ಹೀಗೆ ದೃಢವಾಗಿ ಹೇಳಿಕೊಳ್ಳುತ್ತಾ ನಿಮ್ಮನ್ನು ಎಚ್ಚರಿಸಿಕೊಳ್ಳಬೇಕಾಗುತ್ತದೆ: “ನನ್ನಲ್ಲಿ ಮಾನವನ ಅತ್ಯುತ್ತಮ ಗುಣವಾದ ಕರ್ತೃತ್ವ ಶಕ್ತಿಯಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಇದುವರೆಗೆ ಯಾರೂ ಸೃಷ್ಟಿಸಿರಲಾರದಂತಹ ಏನನ್ನಾದರೂ ಸೃಷ್ಟಿಸಬಲ್ಲ ಶಕ್ತಿಯ ಕಿಡಿಯಿದೆ. ಆದರೂ ನನ್ನನ್ನು ನಾನು ಸುತ್ತಲಿನ ಪರಿಸರದಿಂದ ಸಂಮೋಹನಗೊಳ್ಳಲು ಬಿಟ್ಟರೆ, ಜಗತ್ತನ್ನು ಆವರಿಸಿರುವ ಇತಿಮಿತಿಗಳ ಮರ್ತ್ಯ ಪ್ರಜ್ಞೆಯಿಂದ ನಾನು ಎಷ್ಟು ಸುಲಭವಾಗಿ ಮೋಸಹೋಗಬಲ್ಲೆ ಎಂಬುದನ್ನು ಕಾಣುತ್ತಿದ್ದೇನೆ!”
ಕರ್ತೃತ್ವಶಕ್ತಿ ಎಂದರೇನು? ಅದು ನಿಮ್ಮಲ್ಲಿರುವ ಕ್ರಿಯಾತ್ಮಕ ಸಾಮರ್ಥ್ಯ, ಅನಂತ ಸೃಷ್ಟಿಕರ್ತನ ಒಂದು ಕಿಡಿ. ಅದು ನಿಮಗೆ ಇದುವರೆಗೆ ಯಾರೂ ಸೃಷ್ಟಿಸಿರದಂತಹುದನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಕೊಡಬಹುದು. ಅದು ನಿಮಗೆ ಹೊಸ ವಿಧಾನಗಳಿಂದ ಕೆಲಸ ಮಾಡಲು ಪ್ರಚೋದಿಸುತ್ತದೆ. ಕರ್ತೃತ್ವಶಕ್ತಿಯುಳ್ಳ ವ್ಯಕ್ತಿಯ ಸಾಧನೆಗಳು ಉಲ್ಕೆಯಂತೆ ಅದ್ಭುತವಾಗಿರುತ್ತವೆ. ಶೂನ್ಯದಿಂದ ಏನನ್ನೋ ಸೃಷ್ಟಿಸುವಂತೆ ಕಾಣುವ ಅವನು, ಭಗವಂತನ ಶ್ರೇಷ್ಠ ಸೃಜನಶೀಲ ಶಕ್ತಿಯ ಬಳಕೆಯಿಂದ ಅಸಾಧ್ಯವೆಂದು ಕಂಡುದು ಸಾಧ್ಯವಾಗುತ್ತದೆ, ಎಂಬುದನ್ನು ತೋರಿಸಿಕೊಡುತ್ತಾನೆ.
ಸೃಷ್ಟಿಸುವವನು ಪರಿಸ್ಥಿತಿಗಳನ್ನು ದೂರುತ್ತ, ವಿಧಿಯನ್ನು, ದೇವತೆಗಳನ್ನು ಹಳಿಯುತ್ತ, ಅವಕಾಶಕ್ಕಾಗಿ ಕಾಯುತ್ತಿರುವುದಿಲ್ಲ. ಅವನು ಅಥವಾ ಅವಳು ಅವಕಾಶಗಳನ್ನು ಬಿಡದೆ ಬಳಸಿಕೊಳ್ಳುವರು, ಅಥವಾ ತಮ್ಮ ಇಚ್ಛಾಶಕ್ತಿ, ಪ್ರಯತ್ನ ಮತ್ತು ಅನ್ವೇಷಕ ವಿವೇಚನೆಗಳೆಂಬ ಮಾಂತ್ರಿಕ ದಂಡದಿಂದ ಅವುಗಳನ್ನು ಸೃಷ್ಟಿಸುವರು.
ಮುಖ್ಯವಾದ ಕೆಲಸಗಳನ್ನು ಕೈಗೊಳ್ಳುವ ಮೊದಲು, ಮೌನವಾಗಿ ಕುಳಿತು, ನಿಮ್ಮ ಇಂದ್ರಿಯಗಳನ್ನು ಮತ್ತು ಆಲೋಚನೆಗಳನ್ನು ಶಾಂತಗೊಳಿಸಿಕೊಳ್ಳಿ ಮತ್ತು ಆಳವಾಗಿ ಧ್ಯಾನ ಮಾಡಿ. ಆಗ ದೈವದ ಅಗಾಧ ರಚನಾತ್ಮಕ ಶಕ್ತಿಯು ನಿಮ್ಮನ್ನು ಮುನ್ನಡೆಸುತ್ತದೆ.
ನಿಮಗೆ ಏನನ್ನಾದರೂ ಉತ್ಪಾದಿಸಬೇಕೆಂದಿದ್ದಾಗ, ಬಾಹ್ಯ ಮೂಲಗಳನ್ನು ಅವಲಂಬಿಸಬೇಡಿ; ನಿಮ್ಮ ಆಳಕ್ಕೆ ಹೋಗಿ ಅನಂತ ಆಕರವನ್ನು ಅರಸಿ. ಉದ್ಯಮದ ಯಶಸ್ಸಿನ ಎಲ್ಲ ವಿಧಾನಗಳು, ಎಲ್ಲ ಆವಿಷ್ಕಾರಗಳು, ಸಂಗೀತದ ಎಲ್ಲ ಸ್ಪಂದನಗಳು ಹಾಗೂ ಎಲ್ಲ ಸ್ಫೂರ್ತಿದಾಯಕ ವಿಚಾರಗಳು ಮತ್ತು ಬರಹಗಳು ಭಗವಂತನ ದಾಖಲೆಗಳಲ್ಲಿ ಬರೆದಿಟ್ಟಿವೆ.

ಸರ್ವತೋಮುಖ ಯಶಸ್ಸನ್ನು ಸೃಷ್ಟಿಸುವುದು

ಯಾರು ಭಗವಂತನನ್ನು ಅನ್ವೇಷಿಸುವನೋ ಅವನೇ ಅತ್ಯಂತ ವಿವೇಕಿ. ಯಾರು ಭಗವಂತನನ್ನು ಪಡೆದಿರುವನೋ ಅವನೇ ಅತ್ಯಂತ ಯಶಸ್ವಿ.

Water fountain depicting success.

ಶ್ರೇಷ್ಠ ಬೋಧಕರು ನಿಮ್ಮನ್ನು ಎಂದೂ ನಿರ್ಲಕ್ಷ್ಯದಿಂದಿರಿ ಎಂದು ಹೇಳುವುದಿಲ್ಲ; ಅವರು ನಿಮಗೆ ಸಮತೋಲನದಿಂದಿರಿ ಎಂದು ಹೇಳುತ್ತಾರೆ. ನಿಮ್ಮ ಶರೀರದ ಪೋಷಣೆಗಾಗಿ ಮತ್ತು ಬಟ್ಟೆ ಬರೆಗಾಗಿ ನೀವು ದುಡಿಯಲೇಬೇಕಾಗುತ್ತದೆ, ಅದರ ಬಗ್ಗೆ ಸಂದೇಹವಿಲ್ಲ. ಆದರೆ ನೀವು ಒಂದು ಕರ್ತವ್ಯವು ಇನ್ನೊಂದು ಕರ್ತವ್ಯವನ್ನು ವಿರೋಧಿಸಲು ಬಿಟ್ಟರೆ ಅದು ನಿಜವಾದ ಕರ್ತವ್ಯವಾಗುವುದಿಲ್ಲ. ಸಾವಿರಾರು ಉದ್ಯಮಿಗಳು ಸಂಪತ್ತನ್ನು ಸಂಗ್ರಹಿಸುವುದರಲ್ಲಿ ಎಷ್ಟು ನಿರತರಾಗಿರುವರೆಂದರೆ, ಅವರು ಬಹಳಷ್ಟು ಹೃದ್ರೋಗವನ್ನೂ ಸೃಷ್ಟಿಸುತ್ತಿದ್ದಾರೆಂಬುದನ್ನು ಮರೆತುಬಿಡುತ್ತಾರೆ! ಸಿರಿತನಕ್ಕಾಗಿ ಮಾಡಬೇಕಾದ ಕರ್ತವ್ಯವು ನಿಮ್ಮ ಆರೋಗ್ಯದೆಡೆಗಿನ ಕರ್ತವ್ಯವನ್ನು ಮರೆಸುವುದೆಂದಾದರೆ ಅದು ಕರ್ತವ್ಯವಲ್ಲ. ನಾವು ಎಲ್ಲ ರೀತಿಯಲ್ಲಿ ಸರಿಸಮನಾಗಿ ಅಭಿವೃದ್ಧಿ ಹೊಂದಬೇಕು. ಅದ್ಭುತ ಶರೀರವನ್ನು ಬೆಳೆಸಿಕೊಳ್ಳುವುದಕ್ಕೆ ವಿಶೇಷ ಗಮನಕೊಟ್ಟು ಅದರಲ್ಲಿರುವ ಮೆದುಳು ಕಡಲೆಕಾಯಿ ಗಾತ್ರದ್ದಾದರೆ ಯಾವ ಪ್ರಯೋಜನವೂ ಇಲ್ಲ. ಮನಸ್ಸೂ ಬೆಳೆಯಬೇಕು. ಮತ್ತೆ ನಿಮಗೆ ಅತ್ಯುತ್ತಮ ಆರೋಗ್ಯ, ಸಂಪತ್ತು ಮತ್ತು ಬುದ್ಧಿಯಿದೆ, ಆದರೆ ನೀವು ಸುಖವಾಗಿಲ್ಲ ಎನ್ನುವುದಾದರೆ, ನೀವಿನ್ನೂ ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿಲ್ಲ ಎಂದರ್ಥ. ನೀವು ನಿಜವಾಗಿಯೂ, “ನಾನು ಸಂತೋಷವಾಗಿದ್ದೇನೆ, ನನ್ನ ಸಂತೋಷವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ,” ಎಂದು ಹೇಳಿದಾಗ ನೀವೊಬ್ಬ ರಾಜ ಇದ್ದಂತೆ — ನೀವು ನಿಮ್ಮಲ್ಲಿ ಭಗವಂತನ ಪ್ರತಿರೂಪವನ್ನು ಕಂಡುಕೊಂಡಿರುವಿರಿ.

ಯಶಸ್ಸಿಗೆ ಇನ್ನೊಂದು ಅರ್ಹತೆಯೆಂದರೆ ನಮಗೋಸ್ಕರ ಮಾತ್ರ ಸಮರಸದ ಹಾಗೂ ಅನುಕೂಲಕರ ಫಲಿತಾಂಶಗಳನ್ನು ತಂದುಕೊಳ್ಳುವುದಲ್ಲದೇ, ಆ ಲಾಭಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು.

ಜೀವನವು ಮುಖ್ಯವಾಗಿ ಸೇವೆಯಿಂದ ಕೂಡಿರಬೇಕು. ಆ ಆದರ್ಶವಿಲ್ಲದಿದ್ದರೆ ಭಗವಂತನು ನಿಮಗೆ ಕೊಟ್ಟ ಬುದ್ಧಿಶಕ್ತಿಯು ತನ್ನ ಗುರಿಯನ್ನು ತಲುಪುವುದಿಲ್ಲ. ಸೇವೆಯಲ್ಲಿ ತೊಡಗಿಕೊಂಡು ನಿಮ್ಮ ಅಲ್ಪವ್ಯಕ್ತಿತ್ವವನ್ನು ಮರೆತಾಗ, ಪರಮಾತ್ಮನ ಮಹಾನ್ ಆತ್ಮದ ಅನುಭವ ನಿಮಗಾಗುತ್ತದೆ. ಸೂರ್ಯನ ಜೀವಾಧಾರಕ ಕಿರಣಗಳು ಎಲ್ಲವನ್ನೂ ಪೋಷಿಸುವಂತೆ, ನೀವು ಬಡವರ ಮತ್ತು ಅನಾಥರ ಹೃದಯಗಳಲ್ಲಿ ಭರವಸೆಯ ಕಿರಣಗಳನ್ನು ಪಸರಿಸಬೇಕು, ಹತಾಶರಾದವರ ಹೃದಯಗಳಲ್ಲಿ ಧೈರ್ಯವನ್ನು ಬೆಳಗಿಸಬೇಕು, ಅಂತೆಯೇ ತಾವು ವಿಫಲರು ಎಂದು ತಿಳಿದವರ ಹೃದಯಗಳಲ್ಲಿ ಹೊಸಶಕ್ತಿಯ ಜ್ಯೋತಿಯನ್ನು ಹೊತ್ತಿಸಬೇಕು. ಜೀವನವು, ಕರ್ತವ್ಯದ ಆನಂದದಾಯಕ ಹೋರಾಟವೆಂದೂ ಮತ್ತು ಅದೇ ಕಾಲಕ್ಕೆ, ಅದೊಂದು ಹಾದುಹೋಗುವ ಸ್ವಪ್ನವೆಂದೂ ನೀವು ಅರಿತಾಗ ಹಾಗೂ ಇತರರಿಗೆ ದಯೆ ಮತ್ತು ಶಾಂತಿಯನ್ನು ನೀಡಿ, ಅವರನ್ನು ಸುಖಿಗಳನ್ನಾಗಿ ಮಾಡುವ ಆನಂದದಿಂದ ನೀವು ತುಂಬಿ ತುಳುಕುತ್ತಿರುವಾಗ, ಭಗವಂತನ ದೃಷ್ಟಿಯಲ್ಲಿ ನಿಮ್ಮದೊಂದು ಯಶಸ್ವೀ ಜೀವನ.

ಸಮೃದ್ಧಿ ಮತ್ತು ಶ್ರೀಮಂತಿಕೆ

Abundance of flowers.

ಕೇವಲ ತಮ್ಮ ಅಭ್ಯುದಯವನ್ನು ಮಾತ್ರ ಅರಸುವವರು ಕೊನೆಯಲ್ಲಿ ಬಡವರಾಗೇ ಆಗುತ್ತಾರೆ, ಅಥವಾ ಮಾನಸಿಕ ಅಸಾಮರಸ್ಯದಿಂದ ಬಳಲುತ್ತಾರೆ; ಆದರೆ ಇಡೀ ಜಗತ್ತೇ ತಮ್ಮದೆಂದು ಭಾವಿಸುವವರು, ನಿಜವಾದ ಕಳಕಳಿಯಿಂದ ಸಮೂಹದ ಅಥವಾ ಜಗತ್ತಿನ ಅಭ್ಯುದಯಕ್ಕಾಗಿ ಕೆಲಸ ಮಾಡುವವರು….ನ್ಯಾಯಸಮ್ಮತವಾದ ವೈಯಕ್ತಿಕ ಅಭ್ಯುದಯವನ್ನು ಕಂಡುಕೊಳ್ಳುತ್ತಾರೆ. ಇದೊಂದು ಖಚಿತ ಮತ್ತು ರಹಸ್ಯ ನಿಯಮ.

ಪ್ರತಿದಿನ ಇನ್ನೊಬ್ಬರಿಗೆ ನೆರವಾಗಲು, ಅದು ಪುಡಿಗಾಸಿನದೇ ಆಗಿದ್ದರೂ ಸಹ ಒಳ್ಳೆಯದನ್ನು ಮಾಡಿ. ನಿಮಗೆ ಭಗವಂತನನ್ನು ಪ್ರೀತಿಸಬೇಕೆಂದಿದ್ದರೆ ನೀವು ಜನರನ್ನು ಪ್ರೀತಿಸಲೇಬೇಕು. ಅವರು ಅವನ ಮಕ್ಕಳು. ಅವಶ್ಯಕತೆಯಿರುವವರಿಗೆ ನೀವು ಐಹಿಕ ವಸ್ತುಗಳನ್ನು ನೀಡುವುದರ ಮೂಲಕ, ದುಃಖಿತರಿಗೆ ಮನಸ್ಸಿಗೆ ಸಂಬಂಧಿಸಿದಂತೆ ನೆಮ್ಮದಿ ನೀಡುವ ಮೂಲಕ, ಅಂಜಿದವರಿಗೆ ಧೈರ್ಯ ಹೇಳುವ ಮೂಲಕ, ಅಶಕ್ತರಿಗೆ ದಿವ್ಯ ಸ್ನೇಹ ಮತ್ತು ನೈತಿಕ ಬೆಂಬಲ ನೀಡುವ ಮೂಲಕ ನೆರವಾಗಬಹುದು; ನೀವು ಇತರರಲ್ಲಿ ಭಗವಂತನ ಬಗ್ಗೆ ಆಸಕ್ತಿ ಹುಟ್ಟಿಸಿದಾಗ, ಅವರಲ್ಲಿ ಭಗವಂತನ ಬಗ್ಗೆ ಹೆಚ್ಚಿನ ಭಕ್ತಿಯನ್ನು ಬೆಳೆಸಿದಾಗ, ಗಾಢ ನಂಬಿಕೆಯನ್ನು ಬೆಳೆಸಿದಾಗ, ಒಳ್ಳೆಯತನದ ಬೀಜವನ್ನೂ ಬಿತ್ತುವಿರಿ. ನೀವು ಈ ಜಗತ್ತನ್ನು ತೊರೆದಾಗ, ಐಹಿಕ ಸಂಪತ್ತು ಹಿಂದೆ ಉಳಿಯುತ್ತದೆ; ಆದರೆ ನೀವು ಮಾಡಿದ ಪ್ರತಿಯೊಂದು ಒಳ್ಳೆಯ ಕಾರ್ಯವೂ ನಿಮ್ಮೊಂದಿಗೆ ಬರುತ್ತದೆ. ಜಿಪುಣತೆಯಿಂದ ಬದುಕುವ ಶ್ರೀಮಂತರು, ಇತರರಿಗೆ ಸಹಾಯ ಮಾಡದ ಸ್ವಾರ್ಥಿಗಳು, ತಮ್ಮ ಮುಂದಿನ ಜನ್ಮದಲ್ಲಿ ಶ್ರೀಮಂತಿಕೆಯನ್ನು ಆಕರ್ಷಿಸಲಾರರು. ಆದರೆ ನೀಡುವವರು ಮತ್ತು ಹಂಚುವವರು, ಶ್ರೀಮಂತರಿರಲಿ, ಬಡವರಿರಲಿ, ಅವರು ಶ್ರೀಮಂತಿಕೆಯನ್ನು ಆಕರ್ಷಿಸುತ್ತಾರೆ. ಅದು ಭಗವಂತನ ನಿಯಮ.

 

ದಿವ್ಯವಾದ ಸಮೃದ್ಧಿಯನ್ನು ಬಿರುಸಾದ ಉಲ್ಲಾಸಕರ ಮಳೆಯೆಂದು ಭಾವಿಸಿ; ನಿಮ್ಮ ಕೈಯಲ್ಲಿ ಯಾವ ಪಾತ್ರೆಯಿದೆಯೋ ಅದು ತುಂಬಿಕೊಳ್ಳುತ್ತದೆ. ನೀವು ಒಂದು ತಗಡಿನ ಲೋಟವನ್ನು ಹಿಡಿದರೆ, ನಿಮಗೆ ಅಷ್ಟೇ ದೊರೆಯುತ್ತದೆ. ಒಂದು ಬೋಗುಣಿಯನ್ನು ಹಿಡಿದರೆ ಅದು ತುಂಬಿಕೊಳ್ಳುತ್ತದೆ. ದಿವ್ಯ ಸಮೃದ್ಧಿಗೆ ನೀವು ಎಂತಹ ಪಾತ್ರೆಯನ್ನು ಹಿಡಿದಿರುವಿರಿ? ಬಹುಶಃ ನಿಮ್ಮ ಪಾತ್ರೆಯಲ್ಲಿ ದೋಷವಿರಬಹುದು; ಹಾಗಿದ್ದಲ್ಲಿ ಅದರಿಂದ ನೀವು ಎಲ್ಲ ಬಗೆಯ ಭಯ, ದ್ವೇಷ, ಸಂದೇಹ, ಮತ್ಸರಗಳನ್ನು ಹೊರಹಾಕುವ ಮೂಲಕ ಸರಿಪಡಿಸಿ, ಶಾಂತಿ, ನೆಮ್ಮದಿ, ಭಕ್ತಿ, ಮತ್ತು ಪ್ರೀತಿಯೆಂಬ ಶುದ್ಧಗೊಳಿಸುವ ನೀರಿನಿಂದ ತೊಳೆಯಬೇಕು. ದಿವ್ಯ ಸಮೃದ್ಧಿಯು ಸೇವೆ ಮತ್ತು ಔದಾರ್ಯದ ನಿಯಮವನ್ನು ಪಾಲಿಸುತ್ತದೆ. ನೀಡು, ನಂತರ ಸ್ವೀಕರಿಸು. ನಿಮ್ಮಲ್ಲಿರುವ ಅತ್ಯುತ್ತಮವಾದುದನ್ನು ಜಗತ್ತಿಗೆ ಕೊಡಿ, ಅಂತೆ ಅತ್ಯುತ್ತಮವಾದುದು ನಿಮಗೆ ವಾಪಸು ಬರುತ್ತದೆ.

ಯಶಸ್ಸಿಗಾಗಿ ದೃಢೀಕರಣಗಳು

ಸಕಾರಾತ್ಮಕ ದೃಢೀಕರಣಗಳ ಸಿದ್ಧಾಂತ ಮತ್ತು ಸೂಚನೆಗಳು

ಸರ್ವವ್ಯಾಪಿಯಾದ ಶ್ರೇಯಸ್ಕರ ಶಕ್ತಿಯು ನನಗೆ ಬೇಕಾದುದು ಬೇಕೆನಿಸಿದಾಗ ತಂದುಕೊಡುವುದೆಂಬ ಸಂಪೂರ್ಣ ಶ್ರದ್ಧೆಯಿಂದ ನಾನು ಮುಂದುವರಿಯುತ್ತೇನೆ.

ನನ್ನೊಳಗೆ ಅನಂತ ಸೃಜನಾತ್ಮಕ ಶಕ್ತಿಯಿದೆ. ನಾನು ಏನನ್ನಾದರೂ ಸಾಧಿಸದೆ ನನ್ನ ಸಮಾಧಿಯೆಡೆ ನಡೆಯಲಾರೆ. ನಾನೊಬ್ಬ ದೈವಾಂಶ ಸಂಭೂತ, ವಿವೇಚನಾಯುಕ್ತ ಜೀವಿ. ನಾನು ನನ್ನ ಚೇತನದ ಕ್ರಿಯಾತ್ಮಕ ಮೂಲವಾದ ಆ ಅನಂತ ಶಕ್ತಿಯ ಭಾಗ. ನಾನು ಈ ವ್ಯಾವಹಾರಿಕ ಪ್ರಪಂಚದಲ್ಲಿ, ಆಲೋಚನಾ ಪ್ರಪಂಚದಲ್ಲಿ, ಬುದ್ಧಿಮತ್ತೆಯ ಪ್ರಪಂಚದಲ್ಲಿ ದಿವ್ಯ ಕಾಂತಿಯನ್ನು ಸೃಜಿಸಬಲ್ಲೆ. ನಾನು ಮತ್ತು ನನ್ನ ತಂದೆಯೂ ಒಂದೇ. ನಾನು ನನ್ನ ಸೃಜನಾತ್ಮಕ ತಂದೆಯ ಹಾಗೆ ನಾನು ಇಚ್ಛೆಪಟ್ಟಿರುವುದನ್ನೆಲ್ಲ ಸೃಷ್ಟಿಸಿಕೊಳ್ಳಬಲ್ಲೆ.

ದಿವ್ಯ ಸಮೃದ್ಧಿಗೆ ದೃಢೀಕರಣಗಳು

ತಂದೆಯೇ, ನನಗೆ ಎಲ್ಲೆಯಿಲ್ಲದ ಸಮೃದ್ಧಿ, ಆರೋಗ್ಯ ಮತ್ತು ಜ್ಞಾನ ಬೇಕು, ಅವು ಪ್ರಾಪಂಚಿಕ ಮೂಲಗಳಿಂದಲ್ಲ, ನಿನ್ನ ಸರ್ವಸ್ವಾಮ್ಯ, ಸರ್ವಶಕ್ತ, ಸರ್ವಸಮೃದ್ಧ ಹಸ್ತಗಳಿಂದ. ನಾನು ಭಿಕ್ಷುಕನಂತೆ ಸೀಮಿತವಾದ ಪ್ರಾಪಂಚಿಕ ಸಮೃದ್ಧಿ, ಆರೋಗ್ಯ ಮತ್ತು ಜ್ಞಾನಕ್ಕಾಗಿ ಯಾಚಿಸುವುದಿಲ್ಲ. ನಾನು ನಿನ್ನ ಮಗು, ಅಂತೆಯೇ ನಾನು ನಿನ್ನ ಅಸೀಮ ಸಂಪತ್ತಿನಲ್ಲಿ ದಿವ್ಯ ಪುತ್ರನ ಪಾಲನ್ನು ಎಲ್ಲೆಯಿಲ್ಲದೆ ಕೇಳುತ್ತೇನೆ.
ದಿವ್ಯ ತಂದೆಯೇ, ಇದು ನನ್ನ ಪ್ರಾರ್ಥನೆ: ನಾನು ಶಾಶ್ವತವಾಗಿ ಏನನ್ನು ಹೊಂದುವೆನೋ ಅದರ ಬಗ್ಗೆ ನನಗೆ ಚಿಂತೆಯಿಲ್ಲ, ಆದರೆ ನನ್ನ ದೈನಂದಿನ ಅವಶ್ಯಕತೆಗಾಗಿ ಬೇಕಾದುದನ್ನು ಇಚ್ಛಾಪೂರ್ವಕವಾಗಿ ಪಡೆಯುವ ಶಕ್ತಿಯನ್ನು ನನಗೆ ನೀಡು.

ಮುಂದೆ ಓದಿ

ಇದನ್ನು ಹಂಚಿಕೊಳ್ಳಿ