ಗೋರಖ್ಪುರ, ಭಾರತದಲ್ಲಿ ಜನವರಿ 5, 1893 ರಂದು ಒಂದು ಶ್ರದ್ಧಾವಂತ ಹಾಗೂ ಸ್ಥಿತಿವಂತ ಬಂಗಾಳದ ಕುಟುಂಬದಲ್ಲಿ ಪರಮಹಂಸ ಯೋಗಾನಂದರು ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ಮುಕುಂದ ಲಾಲ್ ಘೋಷ್. ಅವರ ಬಾಲ್ಯದಿಂದಲೇ, ಅವರ ಸುತ್ತಮುತ್ತಲಿರುವವರಿಗೆ ಅವರ ಆಧ್ಯಾತ್ಮಿಕ ಅರಿವು ಮತ್ತು ಅನುಭವವು ಸಾಧಾರಣಕ್ಕಿಂತ ಅತೀತವಾದದ್ದು ಎಂಬುದು ಸ್ಪಷ್ಟವಾಗಿತ್ತು.
ಅವರ ತಂದೆ ತಾಯಿಗಳಿಬ್ಬರೂ ಕ್ರಿಯಾ ಯೋಗವನ್ನು ಆಧುನಿಕ ಭಾರತಕ್ಕೆ ಪುನಃಪರಿಚಯಿಸಲು ಕಾರಣೀಭೂತರಾದ ಪ್ರಖ್ಯಾತ ಗುರುಗಳಾದ ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು. ಯೋಗಾನಂದರು ತಮ್ಮ ತಾಯಿಯ ಮಡಿಲಲ್ಲಿ ಮಗುವಾಗಿದ್ದಾಗ, ಲಾಹಿರಿ ಮಹಾಶಯರು ಅವರನ್ನು ಆಶೀರ್ವದಿಸಿ ಭವಿಷ್ಯ ನುಡಿದರು: “ತಾಯಿ, ನಿನ್ನ ಮಗ ಯೋಗಿಯಾಗುತ್ತಾನೆ. ಆಧ್ಯಾತ್ಮಿಕ ಎಂಜಿನ್ ಆಗಿ ಅನೇಕ ಆತ್ಮಗಳನ್ನು ಭಗವಂತನ ಸಾಮ್ರಾಜ್ಯಕ್ಕೆ ಸೆಳೆದೊಯ್ಯುತ್ತಾನೆ.”
ತನ್ನ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ತನ್ನನ್ನು ಮಾರ್ಗದರ್ಶಿಸಲು ಒಬ್ಬ ಜ್ಞಾನೋದಯ ಹೊಂದಿದ ಗುರುವನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಮುಕುಂದನು ಯುವಕನಾಗಿದ್ದಾಗ, ಭಾರತದ ಅನೇಕ ಋಷಿಗಳು ಹಾಗೂ ಸಂತರನ್ನು ಹುಡುಕಿಕೊಂಡು ಹೋದನು. 1910ರಲ್ಲಿ ತನ್ನ ಹದಿನೇಳನೆಯ ವಯಸ್ಸಿನಲ್ಲಿ ಅವನು ಪೂಜ್ಯರಾದ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರನ್ನು (ಬಲಗಡೆ) ಭೇಟಿಯಾಗಿ ಅವರ ಶಿಷ್ಯನಾದನು. ಶ್ರೀ ಯುಕ್ತೇಶ್ವರರ ಶಿಸ್ತುಬದ್ಧ ಆದರೆ ಪ್ರೇಮಪೂರ್ವಕ ಆಧ್ಯಾತ್ಮಿಕ ಶಿಸ್ತನ್ನು ಪಡೆಯುತ್ತಾ, ಯೋಗದ ಈ ಮಹಾನ್ ಗುರುಗಳ ಆಶ್ರಮದಲ್ಲಿ ಮುಂದಿನ ಹತ್ತು ವರ್ಷಗಳ ಬಹುಕಾಲವನ್ನು ಕಳೆದನು.
ಅವರ ಮೊದಲನೆಯ ಭೇಟಿಯಲ್ಲೇ, ಮತ್ತು ಆನಂತರದ ಅನೇಕ ಸಂದರ್ಭಗಳಲ್ಲಿ, ಶ್ರೀ ಯುಕ್ತೇಶ್ವರರು ಯುವ ಶಿಷ್ಯನಿಗೆ, ಅಮೇರಿಕ ಮತ್ತು ಪ್ರಪಂಚದಾದ್ಯಂತ ಕ್ರಿಯಾ ಯೋಗದ ಪ್ರಾಚೀನ ವಿಜ್ಞಾನವನ್ನು ಪ್ರಸಾರ ಮಾಡಲು ಅವನನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
1915ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದ ಮೇಲೆ, ಮುಕುಂದನು ಭಾರತದ ಪೂಜನೀಯ ಸಂನ್ಯಾಸಿಯಾಗಿ ದೀಕ್ಷಾಪ್ರತಿಜ್ಞೆಯನ್ನು ತೆಗೆದುಕೊಂಡನು. ಆ ಸಮಯದಲ್ಲಿ ಅವನು ಯೋಗಾನಂದ (ಯೋಗದ ದಿವ್ಯ ಸಂಯೋಗದ ಮೂಲಕ ಪರಮಾನಂದ ಎಂಬುದನ್ನು ಸೂಚಿಸುತ್ತದೆ) ಎಂಬ ಸಂನ್ಯಾಸಾಶ್ರಮದ ಹೆಸರನ್ನು ಪಡೆದನು. ತನ್ನ ಜೀವನವನ್ನು ಪ್ರೇಮ ಹಾಗೂ ಭಗವಂತನಿಗೆ ಸಮರ್ಪಣೆ ಮಾಡುವ ಅವನ ತೀವ್ರ ಅಪೇಕ್ಷೆ ಹೀಗೆ ಸಾರ್ಥಕತೆಯನ್ನು ಕಂಡುಕೊಂಡಿತು.