ಯೋಗಾನಂದರು ತಮ್ಮ ಜೀವಿತದ ಕಾರ್ಯವನ್ನು, 1917 ರಲ್ಲಿ ಬಾಲಕರಿಗಾಗಿ, “ಬದುಕುವುದು-ಹೇಗೆ” ಶಾಲೆಯ ಸ್ಥಾಪನೆಯೊಂದಿಗೆ ಪ್ರಾರಂಭಿಸಿದರು, ಅಲ್ಲಿ ಆಧುನಿಕ ಶೈಕ್ಷಣಿಕ ವಿಧಾನಗಳೊಂದಿಗೆ ಯೋಗ ತರಬೇತಿಯನ್ನೂ ಮತ್ತು ಆಧ್ಯಾತ್ಮಿಕ ಆದರ್ಶಗಳ ಸಲಹೆಗಳನ್ನೂ ನೀಡಲಾಗುತ್ತಿತ್ತು. ಕಾಸಿಂಬಜಾರ್ನ ಮಹಾರಾಜರು ರಾಂಚಿಯಲ್ಲಿನ (ಕಲ್ಕತ್ತಾದಿಂದ ಸುಮಾರು 250 ಮೈಲುಗಳು) ತಮ್ಮ ಬೇಸಿಗೆ ಅರಮನೆಯನ್ನು ಶಾಲೆಗಾಗಿ ಬಿಟ್ಟುಕೊಟ್ಟರು. ಕೆಲವು ವರ್ಷಗಳ ನಂತರ ಶಾಲೆಗೆ ಭೇಟಿ ನೀಡಿದ ಮಹಾತ್ಮ ಗಾಂಧಿ ಹೀಗೆ ಬರೆದಿದ್ದಾರೆ: “ಈ ಸಂಸ್ಥೆಯು ನನ್ನ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದೆ.”
1920 ರಲ್ಲಿ ಒಂದು ದಿನ, ಯೋಗಾನಂದರು ರಾಂಚಿ ಶಾಲೆಯಲ್ಲಿ ಧ್ಯಾನ ಮಾಡುತ್ತಿದ್ದಾಗ, ಪಶ್ಚಿಮದಲ್ಲಿ ತಮ್ಮ ಕಾರ್ಯವನ್ನು ಪ್ರಾರಂಭಿಸುವ ಸಮಯ ಈಗ ಬಂದಿದೆ ಎಂದು ತೋರಿಸುವ ಒಂದು ದಿವ್ಯ ದರ್ಶನವನ್ನು ಕಂಡರು. ತಕ್ಷಣವೇ ಅವರು ಕೊಲ್ಕತ್ತಾಗೆ ತೆರಳಿದರು, ಅಲ್ಲಿ ಅವರಿಗೆ ಮರುದಿನವೇ ಬೋಸ್ಟನ್ನಲ್ಲಿ ಆ ವರ್ಷದಲ್ಲಿ ಸಮಾವೇಶಗೊಳ್ಳಲಿರುವ ಧಾರ್ಮಿಕ ಮುಖಂಡರ ಅಂತರರಾಷ್ಟ್ರೀಯ ಕಾಂಗ್ರೆಸ್ಗೆ ಭಾರತದ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಆಹ್ವಾನ ಬಂದಿತು. ಶ್ರೀ ಯುಕ್ತೇಶ್ವರರು ಇದೇ ಸೂಕ್ತ ಸಮಯ ಎಂದು ಪುಷ್ಟೀಕರಿಸಿದರು ಮತ್ತು “ನಿನಗಾಗಿ ಎಲ್ಲ ಬಾಗಿಲುಗಳು ತೆರೆದಿವೆ. ಈಗ ಬಿಟ್ಟರೆ ಮುಂದೆಂದಿಗೂ ಆಗಲಾರದು.” ಎಂದರು.
ಅವರು ಹೊರಡುವ ಸ್ವಲ್ಪ ಮುನ್ನ, ಮಹಾವತಾರ ಬಾಬಾಜಿ ಯೋಗಾನಂದರಿಗೆ ದರ್ಶನವಿತ್ತರು, ಅವರು ಈ ಯುಗದಲ್ಲಿ ಕ್ರಿಯಾ ಯೋಗದ ಪ್ರಾಚೀನ ವಿಜ್ಞಾನವನ್ನು ಪುನರುಜ್ಜೀವನಗೊಳಿಸಿದ ಅವಿನಾಶಿ ಮಹಾತ್ಮರು. “ಪಶ್ಚಿಮದಲ್ಲಿ ಕ್ರಿಯಾಯೋಗದ ಸಂದೇಶವನ್ನು ಪ್ರಸಾರ ಮಾಡಲು ನಿನ್ನನ್ನೇ ನಾನು ಆಯ್ಕೆ ಮಾಡಿರುವುದು” ಎಂದು ಬಾಬಾಜಿ ಯೋಗಾನಂದರಿಗೆ ಹೇಳಿದರು. “ಬಹಳ ಹಿಂದೆಯೇ ಕುಂಭಮೇಳದಲ್ಲಿ ನಾನು ನಿನ್ನ ಗುರು ಯುಕ್ತೇಶ್ವರರನ್ನು ಭೇಟಿಯಾಗಿದ್ದೆ; ನಿನ್ನನ್ನು ಆತನ ಬಳಿಗೆ ಕಳಿಸುವೆನೆಂದು ಆಗ ನಾನು ಆತನಿಗೆ ಹೇಳಿದ್ದೆ. ದೈವಾನುಭೂತಿಯ ವೈಜ್ಞಾನಿಕ ತಂತ್ರವಾದ ಕ್ರಿಯಾಯೋಗವು ನಿರ್ಣಾಯಕವಾಗಿ ಎಲ್ಲ ದೇಶಗಳಿಗೂ ಹರಡಿ ಮಾನವನ ವೈಯಕ್ತಿಕ, ಅನಾದ್ಯನಂತ ಪರಮಾತ್ಮನ ಅತೀಂದ್ರಿಯಾನುಭೂತಿಯ ಮೂಲಕ ದೇಶ ದೇಶಗಳ ನಡುವೆ ಸೌಹಾರ್ದ ಬೆಳೆಯಲು ನೆರವಾಗುತ್ತದೆ.”
ಯುವ ಸ್ವಾಮಿ, ಸೆಪ್ಟೆಂಬರ್ 1920 ರಲ್ಲಿ ಬೋಸ್ಟನ್ಗೆ ಆಗಮಿಸಿದರು. ಧಾರ್ಮಿಕ ಉದಾರವಾದಿಗಳ ಅಂತರರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಮಾಡಿದ ಅವರ ಚೊಚ್ಚಲ ಉಪನ್ಯಾಸ, “ಧರ್ಮದ ವಿಜ್ಞಾನ” ಎಂಬ ವಿಷಯವನ್ನು ಕುರಿತಾಗಿತ್ತು ಮತ್ತು ಅದನ್ನು ಉತ್ಸಾಹದಿಂದ ಸ್ವೀಕರಿಸಲಾಯಿತು. ಅದೇ ವರ್ಷ ಅವರು ಭಾರತದ ಪ್ರಾಚೀನ ವಿಜ್ಞಾನ ಮತ್ತು ಯೋಗದ ತತ್ವಶಾಸ್ತ್ರ ಮತ್ತು ಅದರ ಬಹುಕಾಲದಿಂದಲೂ ಮಾನ್ಯತೆ ಪಡೆದ ಪದ್ಧತಿಯಾದ ಧ್ಯಾನದ ಕುರಿತ ತಮ್ಮ ಬೋಧನೆಗಳನ್ನು ವಿಶ್ವಾದ್ಯಂತ ಪ್ರಸಾರ ಮಾಡಲು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಸಂಸ್ಥೆಯನ್ನು ಸ್ಥಾಪಿಸಿದರು. ಮೊದಲ ಎಸ್ಆರ್ಎಫ್ ಧ್ಯಾನ ಕೇಂದ್ರವನ್ನು ಬೋಸ್ಟನ್ನಲ್ಲಿ ಡಾ. ಮತ್ತು ಶ್ರೀಮತಿ ಎಂ.ಡಬ್ಲ್ಯೂ. ಲೂಯಿಸ್ ಮತ್ತು ಶ್ರೀಮತಿ ಆಲಿಸ್ ಹ್ಯಾಸಿ (ಸೋದರಿ ಯೋಗಮಾತಾ) ಅವರ ಸಹಾಯದಿಂದ ಪ್ರಾರಂಭಿಸಲಾಯಿತು. ಮುಂದೆ ಅವರು ಜೀವಮಾನದ ಶಿಷ್ಯರಾಗುವವರಿದ್ದರು.
ಮುಂದಿನ ಹಲವಾರು ವರ್ಷಗಳವರೆಗೆ, ಅವರು ಪೂರ್ವ ಕರಾವಳಿಯಲ್ಲಿ ಉಪನ್ಯಾಸ ನೀಡಿದರು; ಮತ್ತು ಬೋಧಿಸಿದರು; ಮತ್ತು 1924 ರಲ್ಲಿ ಅಂತರ ಖಂಡದ ಪ್ರವಾಸವನ್ನು ಕೈಗೊಂಡು ಉಪನ್ಯಾಸಗಳನ್ನು ನೀಡಿದರು. 1925 ರ ಆರಂಭದಲ್ಲಿ ಲಾಸ್ ಏಂಜಲೀಸ್ ಅನ್ನು ತಲುಪಿದ ಅವರು, ಮೌಂಟ್ ವಾಷಿಂಗ್ಟನ್ನಲ್ಲಿ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಸಂಸ್ಥೆಗಾಗಿ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯನ್ನು ಸ್ಥಾಪಿಸಿದರು, ಅದು ಅವರ ಬೆಳೆಯುತ್ತಿರುವ ಕಾರ್ಯದ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಕೇಂದ್ರವಾಯಿತು.