ಪರಮಹಂಸ ಯೋಗಾನಂದರ ನಿತ್ಯ ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಮೇರುಕೃತಿಯ ಸಮಗ್ರ ಅವಲೋಕನ.
2021-22ನೆಯ ಇಸವಿ, ಜಗತ್ತಿನ ಅತ್ಯಂತ ಮೆಚ್ಚುಗೆ ಪಡೆದ ಆಧ್ಯಾತ್ಮಿಕ ಮೇರುಕೃತಿಗಳಲ್ಲಿ ಒಂದಾದ ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ ಗೆ, 75ನೆಯ ವಾರ್ಷಿಕೋತ್ಸವ.
ಪರಮಹಂಸ ಯೋಗಾನಂದರ ಜೀವನ ಚರಿತ್ರೆಗೆ ಮೀಸಲಾದ ಪುಟಕ್ಕೆ ಸ್ವಾಗತ. ಈ ಪುಸ್ತಕವು ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸನ್ನು ತಟ್ಟಿದೆ. ಏಳು ದಶಕಗಳಿಗೂ ಮೀರಿ, ಈ ಪುಸ್ತಕವು ಅಸಂಖ್ಯಾತ ಓದುಗರನ್ನು ಭಾರತದ ಪ್ರಾಚೀನ ಯೋಗ ವಿಜ್ಞಾನಕ್ಕೆ ಮತ್ತು ಭಗವತ್ಸಾಕ್ಷಾತ್ಕಾರವನ್ನು ಹೊಂದಲು ಸಾಧ್ಯವಾಗಿಸುವ ವೈಜ್ಞಾನಿಕ ವಿಧಾನಗಳಿಗೆ ಪರಿಚಯಿಸಿದೆ, ಅವು ವಿಶ್ವ ನಾಗರಿಕತೆಗೆ ಭಾರತದ ಅನನ್ಯ ಮತ್ತು ಶಾಶ್ವತವಾದ ಕೊಡುಗೆಯಾಗಿವೆ.
1946 ರಲ್ಲಿ ಮೊದಲ ಬಾರಿಗೆ ಮುದ್ರಣವಾದಾಗಿನಿಂದ ಒಂದು ಮೇರುಕೃತಿ ಎಂದು ಪ್ರಶಂಸಿಸಲ್ಪಟ್ಟಂತಹ ಆತ್ಮಚರಿತ್ರೆ, ನಿರಂತರವಾಗಿ ಆಧ್ಯಾತ್ಮಿಕ ಜನಪ್ರಿಯ ಗ್ರಂಥಗಳ ಪಟ್ಟಿಗಳಲ್ಲಿದೆ ಮತ್ತು ವಿವಿಧ ಮಾರ್ಗಗಳ ಆಧ್ಯಾತ್ಮಿಕ ಆಕಾಂಕ್ಷಿಗಳಿಂದ ಓದಲ್ಪಟ್ಟಿದೆ. ಈ ಪುಸ್ತಕವನ್ನು 1999 ರಲ್ಲಿ “ಶತಮಾನದ 100 ಅತ್ಯುತ್ತಮ ಆಧ್ಯಾತ್ಮಿಕ ಪುಸ್ತಕ” ಗಳಲ್ಲಿ ಒಂದು ಎಂದು ಗೌರವಿಸಲಾಯಿತು.
ಮುಂದುವರಿದ ಮತ್ತು ವಿಸ್ತರಿಸುತ್ತಿರುವ ಆಸಕ್ತಿಯಿಂದಾಗಿ, ಪುಸ್ತಕವನ್ನು 15 ಪ್ರಮುಖ ಭಾರತೀಯ ಉಪಖಂಡದ ಭಾಷೆಗಳಿಗೆ ಮತ್ತು ಪ್ರಪಂಚದಾದ್ಯಂತ ಐವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ.
ಹಾರ್ಡ್ಬೌಂಡ್, ಪೇಪರ್ಬ್ಯಾಕ್, ಆಡಿಯೋ ಮತ್ತು ಇ-ಬುಕ್ ಫಾರ್ಮಾಟ್ಗಳಲ್ಲಿ ಲಭ್ಯವಿದೆ.
ಇ-ಬುಕ್ ಡೌನ್ಲೋಡ್ ಮಾಡಿ
ಈ ಇ-ಬುಕ್ ಉದ್ಯಮ-ಗುಣಮಟ್ಟದ (industry-standard) ಇಪಬ್ ಫಾರ್ಮ್ಯಾಟ್ನಲ್ಲಿದೆ ಮತ್ತು ಸೂಕ್ತವಾದ ಇ-ರೀಡಿಂಗ್ ಅಪ್ಲಿಕೇಶನ್ನೊಂದಿಗೆ ಬಹುತೇಕ ಸಾಧನಗಳಲ್ಲಿ (Devices) ಓದಬಹುದು.
ಇಂಗ್ಲಿಷ್ ಆಡಿಯೋ ಬುಕ್ ಸಿಡಿಯನ್ನು ಖರೀದಿಸಿ
ವಾಚಕರು: “ಗಾಂಧಿ” ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದ ಸರ್ ಬೆನ್ ಕಿಂಗ್ಸ್ಲಿ
ಪುಸ್ತಕದ ನಸುನೋಟ
ಅತ್ಯಂತ ಸ್ಫೂರ್ತಿದಾಯಕ ಉಧೃತ ಭಾಗ
ಒಬ್ಬ ವಿದ್ಯಾರ್ಥಿ ಪರಮಹಂಸರನ್ನು ಕೇಳಿದ: “ಸರ್, ಯೋಗಿಯ ಆತ್ಮಕಥೆಯಲ್ಲಿ ಯಾವ ಭಾಗವನ್ನು ನೀವು ಸಾಮಾನ್ಯ ಮನುಷ್ಯನಿಗೆ ಹೆಚ್ಚು ಸ್ಫೂರ್ತಿದಾಯಕವೆಂದು ಭಾವಿಸುತ್ತೀರಿ?” ಗುರುಗಳು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು: “ನನ್ನ ಗುರು ಶ್ರೀ ಯುಕ್ತೇಶ್ವರರ ಈ ಮಾತುಗಳು: “ಹಿಂದಿನದನ್ನು ಮರೆತುಬಿಡು. ಮಾನವನು ದೈವತ್ವದಲ್ಲಿ ದೃಢವಾಗಿ ನೆಲೆಗೊಳ್ಳುವವರೆಗೆ ಅವನ ನಡತೆ ಎಂದಿಗೂ ನಂಬಿಕೆಗೆ ಅರ್ಹವಲ್ಲದ್ದು. ನೀನು ಈಗಲೇ ಆಧ್ಯಾತ್ಮಿಕ ಸಾಧನೆಯನ್ನು ಕೈಗೊಂಡರೆ ಭವಿಷ್ಯತ್ತಿನಲ್ಲಿ ಎಲ್ಲವೂ ಸುಧಾರಿಸುವುದು.”
ಒಬ್ಬ ಅನನ್ಯ ಲೇಖಕ, ಒಂದು ಅನನ್ಯ ಪುಸ್ತಕ ಹಾಗೂ ಒಂದು ಅನನ್ಯ ಸಂದೇಶ
"ನಮ್ಮ ಕಾಲದ ಅತ್ಯಂತ ಮಹತ್ವದ ಪ್ರವೃತ್ತಿಯೆಂದರೆ ಪ್ರಜ್ಞೆ ಮತ್ತು ಭೌತವಸ್ತುವಿನ ನಡುವಣ ಸಂಬಂಧದ ವೈಜ್ಞಾನಿಕ ತಿಳುವಳಿಕೆಯ ಹಂತಹಂತವಾದ ಹೊರಹೊಮ್ಮುವಿಕೆ....ವೈದ್ಯರು ಮತ್ತು ಅವರ ರೋಗಿಗಳೂ ಈಗ ನಮ್ಮ ದಿನನಿತ್ಯದ ಸ್ವಾಸ್ಥ್ಯ ಮತ್ತು ಯೋಗಕ್ಷೇಮಗಳು ಎಷ್ಟರಮಟ್ಟಿಗೆ ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಕಾಣಲಾರಂಭಿಸಿದ್ದಾರೆ….ದೇಹ, ಮನಸ್ಸು ಮತ್ತು ಆತ್ಮದ ಪರಸ್ಪರ ಸಂಬಂಧವನ್ನು ಬಹಿರಂಗಪಡಿಸುವ ಈ ಸಂಶೋಧನೆಗಳು ದೀರ್ಘಕಾಲದ ನೋವಿನ ಚಿಕಿತ್ಸೆಯಲ್ಲಿ ಆಳವಾದ ಪ್ರಭಾವವನ್ನು ಬೀರಿವೆ, ಮತ್ತು ಅನೇಕ ವರ್ಷಗಳ ಹಿಂದೆ ಪರಮಹಂಸ ಯೋಗಾನಂದರು ಕಲಿಸಿದ “ಬದುಕುವುದು-ಹೇಗೆ” ತತ್ತ್ವಗಳ ಅಪಾರ ಮೌಲ್ಯವನ್ನು ತೋರಿಸಿಕೊಡುವ ನೋವಿನ ಅವಲೋಕನಕ್ಕೆ ಕಾರಣವಾಗಿವೆ.”
ನಾನು ಈ ಪುಸ್ತಕವನ್ನು ಪ್ರೀತಿಸುತ್ತೇನೆ. ತಮ್ಮ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಸವಾಲಿಗೊಡ್ಡಲು ಸಾಕಷ್ಟು ಧೈರ್ಯವಿರುವ ಎಲ್ಲರೂ ಇದನ್ನು ಓದಲೇಬೇಕು. ಈ ಪುಸ್ತಕದಲ್ಲಿನ ಜ್ಞಾನವನ್ನು ಅರ್ಥಮಾಡಿಕೊಳ್ಳುವುದರಿಂದ ಮತ್ತು ಅನುಷ್ಠಾನಿಸುವುದರಿಂದ ನಿಮ್ಮ ಸಂಪೂರ್ಣ ದೃಷ್ಟಿಕೋನ ಮತ್ತು ಜೀವನ ಬದಲಾಗುತ್ತದೆ. ದೈವತ್ವದಲ್ಲಿ ನಂಬಿಕೆಯಿಡಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುತ್ತಲೇ ಇರಿ. 😇#ಒಂದುಪ್ರೀತಿ #ಕೃತಜ್ಞತೆಯಿಂದಿರಿ #ಒಬ್ಬರಿಗೊಬ್ಬರುನೆರವಾಗಿ
“(ಪರಮಹಂಸ ಯೋಗಾನಂದರ) ಯೋಗಿಯ ಆತ್ಮಕಥೆಯು ಅನೇಕ ವರ್ಷಗಳಿಂದ ಮಹೋನ್ನತ ಜನಪ್ರಿಯ ಗ್ರಂಥವಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅವರ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಕೇಂದ್ರಗಳು ಪ್ರಾಮಾಣಿಕವಾಗಿ ಅನ್ವೇಷಿಸುವ ಆತ್ಮಗಳಿಗೆ ನೆಚ್ಚಿನ ಶಿಬಿರಗಳಾಗಿವೆ(Retreats)....1950 ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಾನು ಅವರನ್ನು [ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಕೇಂದ್ರ ಕಾರ್ಯಾಲಯದಲ್ಲಿ] ಭೇಟಿಯಾದಾಗ ಅವರು ನನ್ನ ಮೇಲೆ ಮಾಡಿದ ಪ್ರಭಾವ ನನಗೆ ನೆನಪಿದೆ.....ಅವರಲ್ಲಿ ಒಂದು ಅಲೌಕಿಕ ಶಾಂತಿಯ ಭಾವವಿತ್ತು ಮತ್ತು ನಮ್ಮ ದಿನನಿತ್ಯದ ಅನ್ವೇಷಣೆಯಲ್ಲಿ ನಾವು ಸಾಮಾನ್ಯವಾಗಿ ಹುಡುಕುವ ರೀತಿಯಾಚೆಗಿನ ಪ್ರಶಾಂತತೆ ಇತ್ತು. ಅವರ ಜನಪ್ರಿಯತೆಗೆ ಕಾರಣ ಸ್ಪಷ್ಟವಾಗಿತ್ತು....ಅವರ ಯಶಸ್ಸು ಬೆಡಗಿಗಿಂತ ಹೆಚ್ಚಾಗಿತ್ತು. ಅವರ ಬಳಿ ಒಂದು ರಹಸ್ಯವಿತ್ತು, ಕ್ರಿಯಾ ಯೋಗದ ರಹಸ್ಯ (ಸಾರ್ವತ್ರಿಕ ಕ್ರಿಯೆಯ ಯೋಗ…)"
“ಆಧುನಿಕ ಕಾಲದ ಹಿಂದೂ ಮಹಾತ್ಮರ ಅಸಾಧಾರಣ ಜೀವನ ಹಾಗೂ ಶಕ್ತಿಗಳನ್ನು ಪ್ರತ್ಯಕ್ಷವಾಗಿ ಕಂಡು ಹೇಳುವಂತಹ ಈ ಪುಸ್ತಕ ಯಥಾಕಾಲದ ಹಾಗೂ ಕಾಲಾತೀತವಾದ ಪ್ರಾಮುಖ್ಯವನ್ನು ಪಡೆದಿದೆ….ಅವರ ಅಸಾಮಾನ್ಯ ಜೀವನ ದಾಖಲೆ, ವಾಸ್ತವವಾಗಿ, ಪಶ್ಚಿಮದಲ್ಲಿ ಹಿಂದೆಂದೂ ಪ್ರಕಟವಾಗದ….ಭಾರತದ ಆಧ್ಯಾತ್ಮಿಕ ಸಂಪತ್ತನ್ನು ಬಹಳ ಗಂಭೀರವಾಗಿ ತಿಳಿಯಪಡಿಸುವ ಕಥನಗಳಲ್ಲೊಂದು.”
“ಅತ್ಯಂತ ರಂಜನೀಯ, ಸರಳ ಮತ್ತು ಕೇವಲ ಆತ್ಮಜ್ಞಾನವನ್ನು ಪ್ರಕಾಶಗೊಳಿಸುವ ಬಾಳಿನ ಕಥನಗಳಲ್ಲೊಂದು....ವಿದ್ಯೆಯ ವಾಸ್ತವಿಕ ನಿಧಿಯ ಗೃಹ....ಈ ಪುಟಗಳಲ್ಲಿ ಒಬ್ಬನು ಸಂಧಿಸುವ ಖ್ಯಾತ ಪುರುಷರು....ಸ್ಮೃತಿಗೆ ಹಿಂದಿರುಗುವ ವಿಪುಲ ಆಧ್ಯಾತ್ಮಿಕ ಜ್ಞಾನ ಸಂಪನ್ನರಾದ ಸ್ನೇಹಿತರಂತೆ. ಸ್ವತಃ ಗ್ರಂಥಕಾರರು ಇಂತಹ ಅತ್ಯಂತ ಮಹತ್ವರಾದವರಲ್ಲಿ ಒಬ್ಬರಾದ ಭಗವಂತನೋನ್ಮತ್ತರಾದವರು.”
“[ಯೋಗಾನಂದರ] ಸುಪ್ರಸಿದ್ಧ ಯೋಗಿಯ ಆತ್ಮಕಥೆಯಲ್ಲಿ, ಯೋಗದ ಸಾಧನೆಯಿಂದ ಉತ್ತಮ ಸ್ತರಗಳನ್ನು ಮುಟ್ಟಿದ ‘ವಿಶ್ವ ಪ್ರಜ್ಞೆಯ’ ಪ್ರಖರವಾದ ಮಾಹಿತಿಯನ್ನು ಮತ್ತು ಯೋಗದ ಮತ್ತು ವೇದಾಂತದ ದೃಷ್ಟಿಗಳಿಂದ ಮಾನವನ ಸಹಜ ಸ್ವಭಾವವನ್ನು ಕುರಿತ ಅನೇಕ ಆಕರ್ಷಣೀಯ ಯಥಾರ್ಥ ಚಿತ್ರಣಗಳನ್ನು ಅವರು ನೀಡಿರುತ್ತಾರೆ.”
ಆಪ್ತ ಶಿಷ್ಯಂದಿರ ವೃತ್ತಾಂತಗಳು
ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ)ಯ ಬರವಣಿಗೆಯ ಕಾರ್ಯವು ಸಂಪೂರ್ಣಗೊಳಿಸಲು ಪರಮಹಂಸ ಯೋಗಾನಂದರಿಗೆ ಅನೇಕ ವರ್ಷಗಳೇ ಬೇಕಾಯಿತು. ನಾನು 1931ರಲ್ಲಿ ಮೌಂಟ್ ವಾಷಿಂಗ್ಟನ್ಗೆ ಬಂದಾಗ ಪರಮಹಂಸಜೀ ಆ ಕೆಲಸವನ್ನು ಆಗಲೇ ಆರಂಭಿಸಿದ್ದರು. ಒಮ್ಮೆ ನಾನು ಅವರ ಅಧ್ಯಯನದ ಕೋಣೆಗೆ ಕಾರ್ಯದರ್ಶಿಯ ಕೆಲಸದ ನಿಮಿತ್ತವಾಗಿ ಹೋಗಿದ್ದಾಗ ನನಗೆ ಅವರು ಬರೆದ ಮೊದಲ ಅಧ್ಯಾಯಗಳಲ್ಲಿ ಒಂದಾದ “ಹುಲಿ ಸ್ವಾಮಿ”ಯನ್ನು ನೋಡುವ ಅವಕಾಶ ಒದಗಿಬಂತು. ಗುರುದೇವ, ನನಗೆ ಅದನ್ನು ಜೋಪಾನವಾಗಿ ಇಡಲು ಹೇಳಿ, ಅದು ತಾವು ಬರೆಯುತ್ತಿರುವ ಪುಸ್ತಕದ ಭಾಗವಾಗಲಿದೆ ಎಂದು ವಿವರಿಸಿದರು.
“ಓಹ್” ಮತ್ತು “ಆಹ್” ಗಳ ಮಧ್ಯದಲ್ಲಿ, ಭಾರತದ ಮಹಾನ್ ಸಂತರು ಮತ್ತು ಋಷಿಗಳ ನಡುವೆ ಅವರ ಜೀವನದ ಬಹುನಿರೀಕ್ಷಿತ ಕಥನವನ್ನು ನೋಡುವ ನಮ್ಮ ಸಂತೋಷವನ್ನು ನಾವು ವ್ಯಕ್ತಪಡಿಸಲು ಕಷ್ಟಸಾಧ್ಯವಾಯಿತು —ಅವರ ಜೊತೆಯಲ್ಲಿ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾಗ, ಅವುಗಳ ಬಗ್ಗೆ ಅವರು ನಮ್ಮನ್ನು ಆಗಾಗ್ಗೆ ಮುಗ್ಧಗೊಳಿಸುತ್ತಿದ್ದರು. ಅವರು ಮಹಾವತಾರ ಬಾಬಾಜಿಯವರ ಚಿತ್ರಣವನ್ನು ಕೊನೆಯದಾಗಿ ಉಳಿಸಿಕೊಂಡು, ಕೆಲವು ಪುಟಗಳನ್ನು ತೆರೆದರು. ಬಹುತೇಕ ಉಸಿರು ಬಿಗಿಹಿಡಿದುಕೊಂಡು ನಾವು ನಮ್ಮ ಗೌರವವನ್ನು ಅರ್ಪಿಸಿದೆವು ಮತ್ತು ನಮ್ಮ ಪರಮ-ಪರಮಗುರುಗಳ ಸಾದೃಶ್ಯವನ್ನು ನೋಡಿದವರಲ್ಲಿ ಮೊದಲಿಗರಾಗಿ ಅನುಭವಿಸಿದ ಅನುಗ್ರಹವನ್ನು ಅಂತರ್ಗತಮಾಡಿಕೊಂಡೆವು.
ಗುರೂಜಿ ಆ ಪುಸ್ತಕದ ಹೆಚ್ಚಿನ ಬರವಣಿಗೆಯನ್ನು ಆಶ್ರಮದ ತಮ್ಮ ಕೋಣೆಯಲ್ಲಿ ಮಾಡಿದರು. ಅವರು ರಾತ್ರಿಯಿಡೀ ನಿರ್ದೇಶಿಸುವ ಸಮಯಗಳು ಇದ್ದವು ಮತ್ತು ಇತರ ಸಂದರ್ಭಗಳಲ್ಲಿ ಅದು ಇಡೀ ದಿನ ಅಥವಾ ಇನ್ನೂ ಹೆಚ್ಚು ಕಾಲ ಮುಂದುವರಿಯುತ್ತಿತ್ತು ಎಂದು ನನಗೆ ನೆನಪಿದೆ. ದಯಾ ಮಾ ಮತ್ತು ಆನಂದ ಮಾ ಅವರಂತಹ ಕಾರ್ಯದರ್ಶಿಯ ಕರ್ತವ್ಯಗಳಲ್ಲಿ ನಾನು ಭಾಗಿಯಾಗಿರಲಿಲ್ಲ, ಅವರು ಕೆಲವೊಮ್ಮೆ ಗುರೂಜಿಯ ಪದಗಳನ್ನು ಸಂಕ್ಷಿಪ್ತವಾಗಿ ಮತ್ತು ಕೆಲವೊಮ್ಮೆ ಟೈಪ್ ರೈಟರ್ ಅನ್ನು ಬಳಸಿ ಬರೆದುಕೊಳ್ಳುತ್ತಿದ್ದರು. ಅವರೆಲ್ಲರು ಅವಿರತವಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ಅವರಿಗಾಗಿ ಅಡಿಗೆ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು!
ಪ್ರಪಂಚದಾದ್ಯಂತ ಐವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ
ಯೋಗಿಯ ಆತ್ಮಕಥೆಯ ರಚನೆ
ಈ ಕೃತಿಯ ಬರವಣಿಗೆಯ ಬಗ್ಗೆ ಬಹಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಆಧುನಿಕ ಕಾಲದಲ್ಲಿ ಯೋಗದ ಪುನರುಜ್ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ, ಹತ್ತೊಂಬತ್ತನೇ ಶತಮಾನದ ಪೂಜ್ಯ ಗುರುಗಳಾದ ಶ್ರೀ ಶ್ರೀ ಲಾಹಿರಿ ಮಹಾಶಯರು ಭವಿಷ್ಯ ನುಡಿದಿದ್ದರು: “ನಾನು ಹೊರಟುಹೋದ ಸುಮಾರು ಐವತ್ತು ವರ್ಷಗಳ ಮೇಲೆ, ಯೋಗದ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ, ತೀವ್ರವಾದ ಆಸಕ್ತಿಯುಂಟಾಗುವುದರಿಂದ, ನನ್ನ ಜೀವನದ ಪ್ರಸಂಗಗಳನ್ನು ಬರೆಯಲಾಗುತ್ತದೆ. ಯೋಗದ ಸಂದೇಶವು ಭೂಮಂಡಲವನ್ನೆಲ್ಲ ಆವರಿಸುತ್ತದೆ. ಮನುಷ್ಯರ ಭ್ರಾತೃತ್ವವನ್ನು ಸ್ಥಾಪಿಸುವುದಕ್ಕೆ, ಅದರಿಂದ ಸಹಾಯವಾಗುತ್ತದೆ: ಮಾನವರೆಲ್ಲ ಒಬ್ಬನೇ ತಂದೆಯ ಮಕ್ಕಳು ಎಂಬ ನೇರ ಅರಿವಿನಿಂದ ಮೂಡುವ ಒಗ್ಗಟ್ಟು ಅದು.”
ಅನೇಕ ವರ್ಷಗಳ ನಂತರ, ಲಾಹಿರಿ ಮಹಾಶಯರ ಘನತೆವೆತ್ತ ಶಿಷ್ಯರಾದ ಸ್ವಾಮಿ ಶ್ರೀ ಶ್ರೀ ಯುಕ್ತೇಶ್ವರರು ಈ ಭವಿಷ್ಯವಾಣಿಯನ್ನು ಶ್ರೀ ಶ್ರೀ ಯೋಗಾನಂದರಿಗೆ ತಿಳಿಸಿದರು.
ಒಂದು ಆಳವಾದ ಭರವಸೆ
ಪುಸ್ತಕದ ಕೊನೆಯ ಅಧ್ಯಾಯದಲ್ಲಿ, ಪರಮಹಂಸ ಯೋಗಾನಂದರು ಬರೆಯುತ್ತಾರೆ:
“ಪರಮಾತ್ಮ ಪ್ರೇಮಮಯೀ; ಆತನ ಸೃಷ್ಟಿಯ ಯೋಜನೆ ಪ್ರೇಮಮೂಲವಾದುದೇ ಆಗಿರಬೇಕು. ಪಾಂಡಿತ್ಯದ ವಿವೇಚನೆಗಿಂತ ಆ ಬಗೆಯ ಸರಳಭಾವನೆ ಮಾನವ ಹೃದಯಕ್ಕೆ ನೆಮ್ಮದಿಯನ್ನು ತರಲಾರದೇನು? ಸತ್ಯದ ಹೃದಯವನ್ನು ಭೇದಿಸಿದ ಪ್ರತಿಯೊಬ್ಬ ಸಂತನೂ ವಿಶ್ವಾದ್ಯಂತ ದೈವೀಯೋಜನೆ ಕೆಲಸ ಮಾಡುತ್ತಿದೆಯೆಂದೂ ಹಾಗೂ ಅದು ಅತ್ಯಂತ ಸುಂದರವೂ ಆನಂದಮಯವೂ ಆದುದೆಂದೂ ಪ್ರಮಾಣಪೂರ್ವಕವಾಗಿ ಕಂಡಿದ್ದಾನೆ.”
ನಿಮ್ಮ ಆತ್ಮವು ಭಾರತದ ಋಷಿಗಳ ಅತೀಂದ್ರಿಯ ಸತ್ಯದಲ್ಲಿ ಆಳವಾದ ನಂಬಿಕೆಗೆ ತೆರೆದುಕೊಳ್ಳುವುದನ್ನು ನೀವು ಕಾಣುವಿರಿ ಎಂಬುದು ನಮ್ಮ ಆಶಯವಾಗಿದೆ. ಮತ್ತು ಆ ನಂಬಿಕೆಯು ನಿಮ್ಮನ್ನು ಕಷ್ಟಗಳಲ್ಲಿ ಹಾಗೂ ನಿಜವಾದ ಸಂತೋಷ ಮತ್ತು ತೃಪ್ತಿಯ ಅನ್ವೇಷಣೆಯಲ್ಲಿ ಆಸರೆಯಾಗಿರುತ್ತದೆ.