ಆಪ್ತ ಶಿಷ್ಯರ ಕಥನಗಳು

1996ರಲ್ಲಿ ಯೋಗಿಯ ಆತ್ಮಕಥೆಯ 50ನೇ ವರ್ಧಂತಿಯ ಸಂದರ್ಭದಲ್ಲಿ, ಆಗಲೂ ನಮ್ಮೊಡನಿದ್ದ ಪರಮಹಂಸ ಯೋಗಾನಂದರ ಅನೇಕ ಆಪ್ತ ಶಿಷ್ಯರು, ಪುಸ್ತಕ ಹೊರಬಂದ ದಿನ ಹಾಗೂ ಅದು ಅವರ ಬದುಕುಗಳ ಮೇಲೆ ಪ್ರಭಾವ ಬೀರಿದ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡರು. ಅವರು ಅದರ ಪುಟಗಳಿಂದ — ಅಂದಿನಿಂದ ಲಕ್ಷಾಂತರ ಜೀವನಗಳನ್ನೇ ಬದಲಾಯಿಸಿದ ಪುಟಗಳಿಂದ ಹೊರಹೊಮ್ಮುತ್ತಿರುವ ದಿವ್ಯ ಜ್ಞಾನ, ಪ್ರೇಮ, ಹಾಗೂ ರೂಪಾಂತರಗೊಳ್ಳುತ್ತಿರುವ ಜೀವನದ ನೋಟವನ್ನು ಅನುಭವಿಸಿದವರಲ್ಲಿ ಅವರು ಮೊದಲಿಗರು.

Mother of compassion — Daya Mata.
ಶ್ರೀ ಶ್ರೀ ದಯಾ ಮಾತಾ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/‌ ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನ ಮೂರನೆಯ ಅಧ್ಯಕ್ಷರು, 1955-2010

ಗುರುಗಳು ನಮಗೆ ಹೇಳಿದರು: “ನಾನು ಈ ಪ್ರಪಂಚವನ್ನು ತೊರೆದಾಗ, ಈ ಪುಸ್ತಕವು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುತ್ತದೆ. ನಾನು ಹೋದ ಮೇಲೆ ಅದು ನನ್ನ ಸಂದೇಶವಾಹಕವಾಗಿರುತ್ತದೆ.”

ಯೋಗಿಯ ಆತ್ಮಕಥೆಯ ಬರವಣಿಗೆಯ ಕೆಲಸವನ್ನು ಪೂರೈಸಲು ಪರಮಹಂಸಜಿಯವರಿಗೆ ಬಹಳ ವರ್ಷಗಳೇ ಬೇಕಾಯಿತು. ನಾನು 1931 ರಲ್ಲಿ ಮೌಂಟ್ವಾ ಷಿಂಗ್ಟನ್‌ಗೆ ಬಂದಾಗ, ಅವರು ಅದಾಗಲೇ ಅದರ ಕೆಲಸವನ್ನು ಪ್ರಾರಂಭಿಸಿದ್ದರು. ಒಮ್ಮೆ ನಾನು ಅವರ ಅಧ್ಯಯನದ ಕೋಣೆಗೆ ಕಾರ್ಯದರ್ಶಿಯ ಕೆಲಸದ ನಿಮಿತ್ತವಾಗಿ ಹೋಗಿದ್ದಾಗ ನನಗೆ ಅವರು ಬರೆದ ಮೊದಲ ಅಧ್ಯಾಯಗಳಲ್ಲಿ ಒಂದಾದ “ಹುಲಿ ಸ್ವಾಮಿ”ಯನ್ನು ನೋಡುವ ಅವಕಾಶ ಒದಗಿಬಂತು. ಅದು ತಾವು ಬರೆಯುತ್ತಿರುವ ಪುಸ್ತಕದ ಭಾಗವಾಗಲಿರುವುದರಿಂದ ಅದನ್ನು ಜೋಪಾನವಾಗಿ ಇಡಲು ಹೇಳಿದರು.

ಆದರೂ, ಅವರ ಆತ್ಮಚರಿತ್ರೆಯ ಹೆಚ್ಚಿನ ಭಾಗವನ್ನು 1937-45 ರ ಅವಧಿಯಲ್ಲಿ ಬರೆಯಲಾಯಿತು. ಪರಮಹಂಸಜಿಯವರಿಗೆ ಹಲವಾರು ಜವಾಬ್ದಾರಿಗಳು ಮತ್ತು ಕರ್ತವ್ಯಗಳಿದ್ದುದರಿಂದ, ಅವರಿಗೆ ಪ್ರತಿದಿನ ತಮ್ಮ ಪುಸ್ತಕದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ; ಆದರೆ ಸಾಮಾನ್ಯವಾಗಿ, ಅವರು ಸಾಯಂಕಾಲವನ್ನು ಅದಕ್ಕೆ ಮೀಸಲಿಡುತ್ತಿದ್ದರು, ಅಷ್ಟೇ ಅಲ್ಲದೆ ಅದರ ಮೇಲೆ ಮನಸ್ಸು ಇರಿಸಲು ಸಾಧ್ಯವಾಗುವಷ್ಟು ಬಿಡುವು ದೊರೆತಾಗಲೆಲ್ಲ ಅದರ ಕೆಲಸ ಮಾಡುತಿದ್ದರು.

ಶಿಷ್ಯರ ಸಣ್ಣ ಗುಂಪು ಅಂದರೆ — ಆನಂದ ಮಾತಾ (ಕೆಳಗೆ), ಶ್ರದ್ಧಾ ಮಾತಾ, ಹಾಗೂ ನಾನು —ಹೆಚ್ಚಿನ ಸಮಯ ಅವರೊಂದಿಗಿದ್ದು ಹಸ್ತಪ್ರತಿಯನ್ನು ಟೈಪ್‌ ಮಾಡಲು ನೆರವಾಗುತ್ತಿದ್ದೆವು. ಪ್ರತಿಯೊಂದು ಭಾಗವನ್ನು ಟೈಪ್ ಮಾಡಿದ ನಂತರ, ಗುರುದೇವರು ಅದನ್ನು ತಮಗೆ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ, ತಾರಾಮಾತಾರಿಗೆ ಕೊಡುತ್ತಿದ್ದರು.

ಒಂದು ದಿನ, ತಮ್ಮ ಆತ್ಮಚರಿತ್ರೆಯ ಕೆಲಸ ಮಾಡುತ್ತಿರುವಾಗ, ಗುರುಗಳು ನಮಗೆ ಹೇಳಿದರು: “ನಾನು ಈ ಪ್ರಪಂಚವನ್ನು ತೊರೆದಾಗ, ಈ ಪುಸ್ತಕವು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುತ್ತದೆ. ನಾನು ಹೋದ ಮೇಲೆ ಅದು ನನ್ನ ಸಂದೇಶವಾಹಕವಾಗಿರುತ್ತದೆ.”

ಹಸ್ತಪ್ರತಿ ಪೂರ್ಣವಾದ ಮೇಲೆ ಅದಕ್ಕಾಗಿ ಪ್ರಕಾಶಕರನ್ನು ಹುಡುಕಲು ತಾರಾ ಮಾತಾ ನ್ಯೂಯಾರ್ಕ್‌ಗೆ ಹೋದರು. ಆಕೆಯ ಜ್ಞಾನ ಮತ್ತು ಸಂಪಾದಕೀಯ ಸಾಮರ್ಥ್ಯಗಳಿಗಾಗಿ ಪರಮಹಂಸಜಿ ಆಕೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು ಮತ್ತು ಆಗಾಗ್ಗೆ ಆಕೆಯನ್ನು ಬಹಿರಂಗವಾಗಿ ಹೊಗಳುತ್ತಿದ್ದರು. ಅವರು ಹೇಳಿದರು: “[ಆಕೆ] ಈ ಪುಸ್ತಕಕ್ಕಾಗಿ ಏನು ಮಾಡಿದ್ದಾರೆಂದು ಹೇಳಲು ನನ್ನಿಂದ ಸಾಧ್ಯವಿಲ್ಲ. ಆಕೆ ನ್ಯೂಯಾರ್ಕ್‌ಗೆ ಹೋಗುವ ಮೊದಲು ತೀವ್ರ ಅನಾರೋಗ್ಯಕ್ಕೆ ಒಳಗಾದರು. ಅಂದರೂ ಹಾಗೇ ನ್ಯೂಯಾರ್ಕ್‌ಗೆ ಹೊರಟರು. ಆಕೆಯಿಲ್ಲದೆ ಪುಸ್ತಕವು ಎಂದಿಗೂ ಪ್ರಕಟವಾಗುತ್ತಿರಲಿಲ್ಲ.”

ಪುಸ್ತಕವನ್ನು ಪೂರ್ಣಗೊಳಿಸಿದ ಬಗ್ಗೆ ಗುರುದೇವರ ಪ್ರತಿಕ್ರಿಯೆಯು ಯಾವುದೇ ಪದಗಳಿಂದ ವ್ಯಕ್ತಪಡಿಸಲಾಗದಂತಹ ಆನಂದವಾಗಿತ್ತು. ಇಲ್ಲಿನ ಆಶ್ರಮಗಳಲ್ಲಿದ್ದ ಇತರ ಅನೇಕ ಭಕ್ತರಿಗೆ ಮಾಡಿದಂತೆ, ಅವರು ನನ್ನ ಪ್ರತಿಯಲ್ಲೂ ತಮ್ಮ ಹೆಸರನ್ನು ಬರೆದರು. ಹಸ್ತಪ್ರತಿಯನ್ನು ಟೈಪ್ ಮಾಡಲು ಸಹಾಯ ಮಾಡಿದ ನನಗೆ ಅದನ್ನು ಸ್ವೀಕರಿಸಿದಾಗ, ಇದೊಂದು ಅಮರ ಪುಸ್ತಕ ಎಂದು ನನಗೆ ತಿಳಿದಿತ್ತು — ಇದುವರೆಗೆ ಹಿಂದೆಂದೂ ಅಷ್ಟು ಸ್ಪಷ್ಟವಾಗಿ ಮತ್ತು ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಸ್ತುತ ಪಡಿಸದಿದ್ದ ಗುಪ್ತ ಸತ್ಯಗಳನ್ನು ಮೊದಲ ಬಾರಿಗೆ ತಿಳಿಯಪಡಿಸಿದ ಪುಸ್ತಕ ಅದು. ಪವಾಡಗಳು, ಪುನರ್ಜನ್ಮ, ಕರ್ಮ, ಮರಣಾನಂತರದ ಜೀವನ ಮತ್ತು ಅದರ ಪುಟಗಳಲ್ಲಿರುವ ಇತರ ಅದ್ಭುತ ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಗುರೂಜಿಯವರು ಕೊಟ್ಟಂತಹ ವಿವರಣೆಯಷ್ಟು ಹತ್ತಿರ ಬೇರೆ ಯಾವುದೇ ಲೇಖಕರು ಬಂದಿಲ್ಲ.

ಇಂದಿನ ಪುಸ್ತಕದ ಖ್ಯಾತಿಗೆ ಅವರ ಪ್ರತಿಕ್ರಿಯೆ ಏನಿರಬಹುದಿತ್ತು? ಯೋಗಿಯ ಆತ್ಮಕಥೆಯು ಭೂಮಿಯ ಮೂಲೆ ಮೂಲೆಗಳ ಪ್ರತಿಯೊಂದು ಸಂಸ್ಕೃತಿ, ಜನಾಂಗ, ಧರ್ಮ ಮತ್ತು ವಯಸ್ಸಿನ ಜನರಿಗೆ ತಲುಪಿದೆ ಮತ್ತು ಈ ಐವತ್ತು ವರ್ಷಗಳಲ್ಲಿ ಅದು ಅಪಾರ ಮೆಚ್ಚುಗೆ ಮತ್ತು ಉತ್ಸಾಹದಿಂದ ಸ್ವೀಕರಿಸಲ್ಪಟ್ಟಿದೆ ಎಂದು ಅವರು ನಮ್ರತೆಯಿಂದ ಮಿಡಿಯುತ್ತಿದ್ದರು. ಗುರೂಜಿ ತಮ್ಮ ಸ್ವಂತ ಪ್ರಾಮುಖ್ಯತೆಯ ಬಗ್ಗೆ ಎಂದಿಗೂ ಗಮನವಿಡದಿದ್ದರೂ, ತಾವು ಬರೆದದ್ದರ ಮಹತ್ತರವಾದ ಮೌಲ್ಯವನ್ನು ಅವರು ಖಂಡಿತವಾಗಿಯೂ ನಂಬಿದ್ದರು — ಏಕೆಂದರೆ ತಾನು ಸತ್ಯವನ್ನು ಬರೆಯುತ್ತಿದ್ದೇನೆಂದು ಅವರಿಗೆ ತಿಳಿದಿತ್ತು.

ತಾರಾ ಮಾತಾ (ಲಾರಿ ಪ್ರ್ಯಾಟ್) ಗಾಗಿ ಹೆಸರು ಬರೆದಿದ್ದ ಪುಸ್ತಕ. ಯೋಗಿಯ ಆತ್ಮಕಥೆಯಲ್ಲಿ ಲೇಖಕರ ಕೃತಜ್ಞತಾ ಪಟ್ಟಿಯಲ್ಲಿ ಬರೆದಿರುವ ಅಭಿನಂದನೆಯಲ್ಲಿ, ಪರಮಹಂಸಜಿ ತಮ್ಮ ಹಸ್ತಪ್ರತಿಯನ್ನು ಸಂಪಾದಿಸುವಲ್ಲಿ ತಾರಾ ಮಾತಾರ ಪಾತ್ರಕ್ಕಾಗಿ ತಮ್ಮ ಮೆಚ್ಚುಗೆಯನ್ನು ತಿಳಿಸುತ್ತಾರೆ. ಆಕೆಯ ಪುಸ್ತಕದ ಪ್ರತಿಯಲ್ಲಿರುವ ಲಿಖಿತವು ಈ ಮೌಲ್ಯಯುತ ಶಿಷ್ಯೆಯ ಸೇವೆಗಾಗಿ ಅವರು ಹೊಂದಿದ್ದ ಆಳವಾದ ಗೌರವದ ಒಳನೋಟವನ್ನು ನೀಡುತ್ತದೆ.

Tara Mata (Laurie Pratt) editor of Autobiography of Yogi
Appreciation letter to Tara Mata from Yogananda

ನಮ್ಮ ಲಾರಿ ಪ್ರ್ಯಾಟ್‌ಗೆ

“ಈ ಪುಸ್ತಕವನ್ನು ಹೊರತರುವಲ್ಲಿ ನಿಮ್ಮ ಸಾಹಸಪೂರ್ಣ ಮತ್ತು ಪ್ರೀತಿಯ ಪಾತ್ರಕ್ಕಾಗಿ ಭಗವಂತ ಮತ್ತು ಗುರುಗಳು ನಿಮ್ಮನ್ನು ಸದಾ ಆಶೀರ್ವದಿಸುತ್ತಾರೆ. ಪಿ. ವೈ.”

"ಕೊನೆಗೂ ಭಗವಂತನ, ನನ್ನ ಗುರುಗಳ ಮತ್ತು ಮಹಾತ್ಮರ ಪವಿತ್ರ ಕಂಪು ನನ್ನ ಆತ್ಮದ ರಹಸ್ಯ ಬಾಗಿಲುಗಳ ಮೂಲಕ ಹೊರಬಂದಿದೆ — ಲಾರಿ ಪ್ರ್ಯಾಟ್ ಮತ್ತು ಇತರ ಶಿಷ್ಯರ ಕೊನೆಯಿಲ್ಲದ ಕಂಟಕಗಳು ಮತ್ತು ನಿರಂತರ ಪ್ರಯತ್ನಗಳ ನಂತರ. ಎಲ್ಲಾ ಕಷ್ಟಗಳ ಹೊರೆಯು ನಿತ್ಯಾನಂದದ ಜ್ವಾಲೆಯಲ್ಲಿ ಉರಿಯುತ್ತಿವೆ.”

ಶ್ರೀ ಶ್ರೀ ಮೃಣಾಲಿನಿ ಮಾತಾ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/‌ ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನ ನಾಲ್ಕನೆಯ ಅಧ್ಯಕ್ಷರು 2011-2017

“ಯೋಗಿಯ ಆತ್ಮಕಥೆಯು ಅಂತಿಮವಾಗಿ ಗುರುವಿನ ಆಶೀರ್ವಾದ ಮತ್ತು ದೇವರ ಮೇಲಿನ ಪ್ರೀತಿಯನ್ನು ಲಕ್ಷಾಂತರ ಅನ್ವೇಷಿಸುವ ಆತ್ಮಗಳಿಗೆ ಕೊಂಡೊಯ್ಯುವಂತಹ ದಿವ್ಯ ನಿಯತಿಯ ಹಾದಿಯಲ್ಲಿತ್ತು.”

1946 ರ ಕೊನೆಯಲ್ಲಿ ಎನ್ಸಿನಿಟಾಸ್ ಆಶ್ರಮದಲ್ಲಿ ಒಂದು ಸಂಜೆ, ಗುರುದೇವರು ಬಾಗಿಲಿನಿಂದ ಬಂದಾಗ ನಾವು ಕಿರಿಯ ಭಕ್ತರು ನಮ್ಮ ಅಡಿಗೆ ಕೆಲಸಗಳಲ್ಲಿ ನಿರತರಾಗಿದ್ದೆವು. ಎಲ್ಲ ಚಟುವಟಿಕೆಗಳೂ ನಿಂತುಹೋದವು ಮತ್ತು ನಮ್ಮ ಗಮನವು ಅವರ ವಿಶಾಲವಾದ ನಗು ಮತ್ತು ಅವರ ಕಣ್ಣುಗಳಲ್ಲಿನ ಸಾಮಾನ್ಯಕ್ಕಿಂತ ಹೆಚ್ಚು ಸುಂದರವಾದ ಮಿನುಗಿನ ಮೇಲೆ ಕೇಂದ್ರೀಕೃತವಾಗಿತ್ತು. ಅವರ ಕೈ “ಏನನ್ನೋ” ಮರೆಮಾಡುತ್ತ ಅವರ ಬೆನ್ನಿನ ಹಿಂದೆ ಇತ್ತು. ನಂತರ ಅವರು ನಮ್ಮ ಮುಂದೆ ಗುಪ್ತ ನಿಧಿಯನ್ನು ಪ್ರದರ್ಶಿಸಿದರು — ಅವರ ಪುಸ್ತಕದ ಮುಂಗಡ ಪ್ರತಿ, ಯೋಗಿಯ ಆತ್ಮಕಥೆ (ಆಟೋಬಯಾಗ್ರಫಿ ಆಫ್ ಎ ಯೋಗಿ).

“ಓಹ್” ಮತ್ತು “ಆಹ್” ಗಳ ನಡುವೆ, ಭಾರತದ ಮಹಾನ್ ಸಂತರು ಮತ್ತು ಋಷಿಗಳ ನಡುವೆ ಅವರ ಜೀವನದ ಬಹು ನಿರೀಕ್ಷಿತ ಕಥನವನ್ನು ನೋಡುವ ನಮ್ಮ ಸಂತೋಷವನ್ನು ನಾವು ವ್ಯಕ್ತಪಡಿಸಲು ಕಷ್ಟಸಾಧ್ಯವಾಯಿತು — ಅವರ ಜೊತೆಯಲ್ಲಿ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾಗ, ಅವುಗಳ ಬಗ್ಗೆ ಅವರು ನಮ್ಮನ್ನು ಆಗಾಗ್ಗೆ ಮುಗ್ಧಗೊಳಿಸುತ್ತಿದ್ದರು. ಅವರು ಮಹಾವತಾರ ಬಾಬಾಜಿಯವರ ಚಿತ್ರಣವನ್ನು ಕೊನೆಯದಾಗಿ ಉಳಿಸಿಕೊಂಡು, ಕೆಲವು ಪುಟಗಳನ್ನು ತೆರೆದರು. ಬಹುತೇಕ ಉಸಿರು ಬಿಗಿಹಿಡಿದುಕೊಂಡು ನಾವು ನಮ್ಮ ಗೌರವವನ್ನು ಅರ್ಪಿಸಿದೆವು ಮತ್ತು ನಮ್ಮ ಪರಮ-ಪರಮ- ಪರಮಗುರುಗಳ ಸಾದೃಶ್ಯವನ್ನು ನೋಡಿದವರಲ್ಲಿ ಮೊದಲಿಗರಾಗಿ ಅನುಭವಿಸಿದ ಅನುಗ್ರಹವನ್ನು ಅಂತರ್ಗತ ಮಾಡಿಕೊಂಡೆವು.

ಡಿಸೆಂಬರ್ ಆರಂಭದಲ್ಲಿ, ಪ್ರಕಾಶಕರಿಂದ ಬಂದ ಪುಸ್ತಕಗಳ ಪಾರ್ಸೆಲ್‌ಗಳ ಆಗಮನದಲ್ಲಿ ಭಾಗವಹಿಸಲು ಮತ್ತು ಆಗಲೇ ಬಂದಿದ್ದ ನೂರಾರು ಆರ್ಡರ್‌ಗಳ ಪ್ರಕಾರ ಅನೇಕ ಉತ್ಸಾಹಿ ಭಕ್ತರಿಗೆ ಪೋಸ್ಟ್ ಮಾಡಲು ಅವುಗಳನ್ನು ಸಿದ್ಧಪಡಿಸಲು ನಮ್ಮನ್ನೆಲ್ಲ ಮೌಂಟ್ ವಾಷಿಂಗ್ಟನ್‌ಗೆ ಕರೆಸಲಾಯಿತು.‌ ವಾರಗಳಿಗೂ ಮೊದಲೇ ನಮ್ಮಲ್ಲಿ ಯಾರಿಗಾದರೂ ಬಿಡುವಿನ ಕ್ಷಣಗಳು ದೊರೆತಾಗ ನಾವು ನಮ್ಮ ಹಳೆಯ ಟೈಪ್‌ರೈಟರ್‌ಗಳಲ್ಲಿ ವಿಳಾಸಗಳನ್ನು ಟೈಪ್ ಮಾಡಲು ತೊಡಗುತ್ತಿದ್ದೆವು. ಪ್ರತಿಯೊಂದು ಪುಸ್ತಕವನ್ನು ಒಂದು ದೊಡ್ಡ ರೋಲ್‌ನಿಂದ ತೆಗೆದ ಕಂದು ಬಣ್ಣದ ಮೇಲಿಂಗ್ ಪೇಪರ್‌ನಲ್ಲಿ ಜೋಡಿಸಲೆಂದು ಕಛೇರಿಯಲ್ಲಿ ಬೃಹತ್ ಟೇಬಲ್‌ಗಳನ್ನು (ಮರದ ಕಾಲುಗಳ ಮೇಲೆ ಫ್ಲಾಟ್ ಬೋರ್ಡ್‌ಗಳು) ಸ್ಥಾಪಿಸಲಾಯಿತು, ಪೇಪರನ್ನು ಸರಿಯಾದ ಗಾತ್ರಕ್ಕೆ ಕತ್ತರಿಸಿ, ತೇವಗೊಳಿಸಿದ ಲೇಬಲ್‌ಗಳು ಮತ್ತು ಅಂಚೆ ಚೀಟಿಗಳನ್ನು ಅಂಟಿಸಲಾಗುತ್ತಿತ್ತು.

ಆ ದಿನಗಳಲ್ಲಿ ಸ್ವಯಂಚಾಲನ ತಂತ್ರ ಅಥವಾ ಪೋಸ್ಟ್‌ ಮಾಡುವ ಯಂತ್ರಗಳಿರಲಿಲ್ಲ! ಆದರೂ ಸೆಲ್ಫ್- ರಿಯಲೈಝೇಷನ್ ಫೆಲೋಶಿಪ್ ಇತಿಹಾಸದ ಈ ಮಹತ್ವದ ಘಟನೆಯಲ್ಲಿ ಭಾಗವಹಿಸುವುದೆಂದರೆ ಓಹ್‌ ಎಂತಹ ಆನಂದ. ಈ ಮಹೋನ್ನತ ರಾಯಭಾರಿಯ ಮೂಲಕ ಜಗತ್ತು ನಮ್ಮ ಪೂಜ್ಯ ಗುರುಗಳನ್ನು ಅರಿತುಕೊಳ್ಳುತ್ತದೆ.

ಮೂರನೇ ಮಹಡಿಯ ದಿವಾನಖಾನೆಯಲ್ಲಿ, ಗುರುದೇವರು ವಿರಾಮವಿಲ್ಲದೆ ಪ್ರತಿ ಪುಸ್ತಕಕ್ಕೂ ಹಸ್ತಾಕ್ಷರ ಹಾಕುತ್ತಾ ಗಂಟೆಗಟ್ಟಲೆ ಮೇಜಿನ ಬಳಿ ಕುಳಿತುಕೊಂಡಿದ್ದರು. ಪ್ರಕಾಶಕರು ರವಾನೆ ಮಾಡಿದ ರಟ್ಟಿನ ಪೆಟ್ಟಿಗೆಗಳಿಂದ ಪುಸ್ತಕಗಳನ್ನು ಹೊರಗೆ ತೆಗೆದು, ಅದನ್ನು ತೆರೆದು ಅವರ ಮುಂದೆ ಒಂದಾದ ಮೇಲೆ ಒಂದರಂತೆ ಇರಿಸಿದಾಗ, ಅವರು ಪ್ರತಿಯೊಂದಕ್ಕೂ ಸಹಿ ಹಾಕುತ್ತಿದ್ದರು — ಒಂದು ಫೌಂಟನ್ ಪೆನ್ ಅನ್ನು ಖಾಲಿ ಮಾಡುತ್ತಿದ್ದಂತೆ ಇನ್ನೊಂದನ್ನು ತುಂಬಿಸಲಾಗುತ್ತಿತ್ತು.

ಅವರು ನನ್ನನ್ನು ಮೇಲಿನ ಮಹಡಿಗೆ ಬರಲು ಕರೆದಾಗ ತಡರಾತ್ರಿಯಾಗಿತ್ತು. ಅವರು ಇನ್ನೂ ಪುಸ್ತಕಗಳಿಗೆ ಹಸ್ತಾಕ್ಷರ ಹಾಕುತ್ತಲೇ ಇದ್ದರು. ಹಿರಿಯ ಶಿಷ್ಯರು ಅವರನ್ನು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ಒತ್ತಾಯಿಸಿದರು, ಆದರೆ ಬಂದಿದ್ದ ಪ್ರತಿಯೊಂದು ಪುಸ್ತಕಕ್ಕೂ ತಮ್ಮ ಆಶೀರ್ವಾದದೊಂದಿಗೆ ಸಹಿ ಹಾಕುವವರೆಗೂ ಅವರು ಅದನ್ನು ಪರಿಗಣಿಸಲು ನಿರಾಕರಿಸಿದರು. ಆ ಮುದ್ರಿತ ಪುಟಗಳಲ್ಲಿ ತಮ್ಮದೇ ಒಂದು ನಿಜವಾದ ಭಾಗ ಮತ್ತು ಭಗವಂತನೆಡೆಗಿನ ತಮ್ಮ ಪ್ರೀತಿಯೇ ಪ್ರಪಂಚದಾದ್ಯಂತ ಹೋಗುತ್ತಿದೆಯೇನೋ ಹಾಗೂ ಅದನ್ನು ಒಂದು ಹೆಚ್ಚುವರಿ ಕ್ಷಣಕ್ಕೂ ತಡೆಹಿಡಿಯಬಾರದು ಎಂಬ ಭಾವದಿಂದ ಅವರು ತಮ್ಮ ಮುಖದ ಮೇಲೆ ಅತ್ಯಂತ ದಿವ್ಯಾನಂದಕರ ಅಭಿವ್ಯಕ್ತಿಯನ್ನು ಹೊಂದಿದ್ದರು.

ಬೆಳಗಿನ ಜಾವದಲ್ಲಿ ನಾವು ಹೇಳಲಾಗದಷ್ಟು ಆನಂದದಿಂದ ಧ್ಯಾನ ಮಾಡಲು ಅವರ ಪಾದದ ಬಳಿ ಕುಳಿತಿದ್ದೆವು. ಈ ನಿಧಿಯ ನಮ್ಮ ವೈಯಕ್ತಿಕ ಪ್ರತಿಯನ್ನು ಗುರುಗಳು ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೊಟ್ಟಿದ್ದರು, ಮತ್ತು ಇತರ ಎಲ್ಲಾ ಪ್ರತಿಗಳನ್ನು ಬೆಳಿಗ್ಗೆ ಮೇಲ್ ಮಾಡಲು ಸುತ್ತಿಡಲಾಗಿತ್ತು ಅಥವಾ ಹಾಲಿವುಡ್ ಮತ್ತು ಸ್ಯಾನ್ ಡಿಯಾಗೋದಲ್ಲಿನ ಅವರ ದೇವಾಲಯಗಳಿಗೆ ಕಳುಹಿಸಲು ಪ್ಯಾಕ್ ಮಾಡಲಾಗಿತ್ತು. ಯೋಗಿಯ ಆತ್ಮಕಥೆಯು ಅಂತಿಮವಾಗಿ ಗುರುವಿನ ಆಶೀರ್ವಾದ ಮತ್ತು ಭಗವತ್ಪ್ರೇಮವನ್ನು ಲಕ್ಷಾಂತರ ಅನ್ವೇಷಕ ಆತ್ಮಗಳಿಗೆ ಕೊಂಡೊಯ್ಯಲು ತನ್ನ ದಿವ್ಯ ನಿಯತಿಯತ್ತ ಸಾಗುತ್ತಿತ್ತು.

ಶೈಲಸುತಾ ಮಾತಾ

“ಅವರು ರಾತ್ರಿಯಿಡೀ ಹೇಳುತ್ತ ಬರೆಯಿಸುವ(dictate) ಸಮಯಗಳು ಇದ್ದವು ಮತ್ತು ಇತರ
ಸಂದರ್ಭಗಳಲ್ಲಿ ಅದು ಇಡೀ ದಿನ ಅಥವಾ ಇನ್ನೂ ಹೆಚ್ಚು ಕಾಲ ಮುಂದುವರಿಯುತ್ತಿತ್ತು ಎಂದು ನನಗೆ
ನೆನಪಿದೆ.”

ಪರಮಹಂಸಜಿಯವರು ಯೋಗಿಯ ಆತ್ಮಕಥೆಯನ್ನು ಬರೆಯುತ್ತಿದ್ದಾಗ ಎನ್ಸಿನಿಟಾಸ್ ಆಶ್ರಮದಲ್ಲಿ ನಾವು ಕೆಲವರು ಮಾತ್ರ ವಾಸಿಸುತ್ತಿದ್ದೆವು, ಅದನ್ನು ಪೂರ್ಣಗೊಳಿಸಲು ಅವರಿಗೆ ಹಲವಾರು ವರ್ಷಗಳೇ ಬೇಕಾಯಿತು. ನಾನು ಆ ಸಮಯದ ಸ್ವಲ್ಪ ಕಾಲ ಅಲ್ಲಿ ವಾಸಿಸುತ್ತಿದ್ದೆ.

ಗುರೂಜಿ ಆ ಪುಸ್ತಕದ ಹೆಚ್ಚಿನ ಬರವಣಿಗೆಯನ್ನು ಆಶ್ರಮದ ತಮ್ಮ ಕೋಣೆಯಲ್ಲಿ ಮಾಡಿದರು. ಅವರು ರಾತ್ರಿಯಿಡೀ ಹೇಳುತ್ತ ಬರೆಯಿಸುವ(dictate) ಸಮಯಗಳು ಇದ್ದವು ಮತ್ತು ಇತರ ಸಂದರ್ಭಗಳಲ್ಲಿ ಅದು ಇಡೀ ದಿನ ಅಥವಾ ಇನ್ನೂ ಹೆಚ್ಚು ಕಾಲ ಮುಂದುವರಿಯುತ್ತಿತ್ತು ಎಂದು ನನಗೆ ನೆನಪಿದೆ. ದಯಾ ಮಾ ಮತ್ತು ಆನಂದ ಮಾ ಅವರಂತಹ ಕಾರ್ಯದರ್ಶಿಯ ಕರ್ತವ್ಯಗಳಲ್ಲಿ ನಾನು ಭಾಗಿಯಾಗಿರಲಿಲ್ಲ, ಅವರು ಕೆಲವೊಮ್ಮೆ ಗುರೂಜಿಯ ಪದಗಳನ್ನು ಸಂಕ್ಷಿಪ್ತವಾಗಿ ಮತ್ತು ಕೆಲವೊಮ್ಮೆ ಟೈಪ್ ರೈಟರ್ ಅನ್ನು ಬಳಸಿ ಬರೆದುಕೊಳ್ಳುತ್ತಿದ್ದರು. ಅವರೆಲ್ಲರು ಅವಿರತವಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ಅವರಿಗಾಗಿ ಅಡಿಗೆ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು!

ಪ್ರಕಾಶಕರಿಂದ ಯೋಗಿಯ ಆತ್ಮಕಥೆ ಬಂದಾಗ, ದೊಡ್ಡ ಹರ್ಷೋದ್ಗಾರವಾಯಿತು. ಗುರೂಜಿಯವರು ತಮ್ಮ ಪುಸ್ತಕವನ್ನು ಮುಂಗಡವಾಗಿ ಆರ್ಡರ್ ಮಾಡಿದವರಿಗೆಲ್ಲ ಆಗಿಂದಾಗಲೇ ಕಳುಹಿಸಬೇಕೆಂದು ಬಯಸಿದರು! ಆದ್ದರಿಂದ ಆರಂಭಿಕ ಉತ್ಸವಾಚರಣೆಯ ನಂತರ, ಒಟ್ಟಾಗಿ ಉಳಿದಿದ್ದ ಹಳೆಯ ದೊಡ್ಡ ಆರ್ಡರ್‌ಗಳನ್ನು ಪೂರೈಸುವಲ್ಲಿ ನಾವು ನಿರತರಾಗಿದ್ದೆವು. ಸೋದರಿ ಶೀಲಾ ಮತ್ತು ನಾನು ಅನೇಕ ಪ್ರತಿಗಳನ್ನು ಸುತ್ತಿ, ಅವುಗಳಿಗೆ ಸ್ಟಾಂಪ್ ಹಾಕಿ ಎಲ್ಲವನ್ನೂ ಸಿದ್ಧಪಡಿಸಿದೆವು. ನಂತರ ನಾವು ಕಾರನ್ನು ತಂದು, ಅದರ ಎಲ್ಲಾ ಬಾಗಿಲುಗಳನ್ನು ತೆರೆದೆವು. ಕಾರು ಸಂಪೂರ್ಣವಾಗಿ ತುಂಬಿದ ನಂತರ, ನಾವು ಪುಸ್ತಕಗಳ ಪಾರ್ಸೆಲ್‌ಗಳನ್ನು ಲಾಸ್ ಏಂಜಲೀಸ್‌ನ ಮುಖ್ಯ ಅಂಚೆ ಕಚೇರಿಗೆ ತಲುಪಿಸಲು ಡ್ರೈವ್‌ ಮಾಡಿಕೊಂಡು ಹೋದೆವು. ಅಂತೂ ಕೊನೆಗೆ ಯೋಗಿಯ ಆತ್ಮಕಥೆಯು ಎಲ್ಲೆಡೆ ಇರುವ ಜನರಿಗೆ ಲಭ್ಯವಾಗಲಿದೆ! ಎಂದು ನಮಗೆ ಸಂತೋಷವಾಯಿತು.

ಸ್ವಾಮಿ ಆನಂದಮೊಯಿ

“ನಾನು ಬಯಸಿದ್ದನ್ನು ನಾನು ಕಂಡುಕೊಂಡಿದ್ದೇನೆ ಎಂದು ನನ್ನ ಹೃದಯದಲ್ಲಿ ನನಗೆ ತಿಳಿದಿತ್ತು
ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಅಧ್ಯಯನ ಮಾಡಲು ಮತ್ತು ಭಗವಂತನನ್ನು
ಕಂಡುಕೊಳ್ಳಲು ನಿರ್ಧರಿಸಿದೆ.”

ಸ್ವಿಟ್ಜರ್ಲೆಂಡ್‌ನ ದೊಡ್ಡ ನಗರಗಳಲ್ಲಿ ಒಂದಾದ ವಿಂಟರ್‌ಥೂರ್‌ನ ಉಪನಗರದಲ್ಲಿ ಚಿಕ್ಕಮ್ಮ ಮತ್ತು ಚಿಕ್ಕಪ್ಪನೊಂದಿಗೆ ಬೇಸಿಗೆ ರಜೆಯನ್ನು ಕಳೆಯುತ್ತಿದ್ದಾಗ ನಾನು ಹದಿಹರೆಯದ ಆದಿಯಲ್ಲಿದ್ದೆ. ನನ್ನ ಚಿಕ್ಕಪ್ಪ ಸಂಗೀತಗಾರರಾಗಿದ್ದರು, ಸಿಂಫನಿ ಆರ್ಕೆಸ್ಟ್ರಾದ ಸದಸ್ಯರಾಗಿದ್ದರು. ಅವರೂ ರಜೆಯಲ್ಲಿದ್ದರು, ಅದನ್ನು ಅವರು ತಮ್ಮ ದೊಡ್ಡ ತೋಟದಲ್ಲಿ ಕೆಲಸ ಮಾಡುತ್ತ ಕಳೆಯುತ್ತಿದ್ದರು. ನಾನು ಅವರಿಗೆ ನೆರವಾಗುತ್ತಿದ್ದೆ. ಅವರಿಗೆ ಮಕ್ಕಳಿಲ್ಲದ ಕಾರಣ, ನನ್ನ ಚಿಕ್ಕಪ್ಪ ನನ್ನಲ್ಲಿ ಹೆಚ್ಚಿನ ಆಸಕ್ತಿಯನ್ನು ತಳೆದಿದ್ದರು, ಮತ್ತು ತೋಟದ ಕೆಲಸದ ಸಮಯದಲ್ಲಿ ದೀರ್ಘವಾದ “ಮಾತನಾಡುವ ಅವಧಿಗಳು” ಇದ್ದವು. ನನ್ನ ಚಿಕ್ಕಪ್ಪ, ಪೌರಸ್ತ್ಯ ತತ್ತ್ವಶಾಸ್ತ್ರದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು ಮತ್ತು ಕರ್ಮ, ಪುನರ್ಜನ್ಮ, ಸೂಕ್ಷ್ಮ ಹಾಗೂ ಕಾರಣ ಲೋಕಗಳು ಹಾಗೂ ವಿಶೇಷವಾಗಿ ಸಾಕ್ಷಾತ್ಕಾರ ಹೊಂದಿರುವಂತಹ ಸಂತರು ಮತ್ತು ಮಹಾತ್ಮರ ಬಗೆಗಿನ ಅವರ ಪ್ರವಚನಗಳನ್ನು ನಾನು ತೀವ್ರ ಗಮನದಿಂದ ಆಲಿಸುತ್ತಿದ್ದೆ.

ಅವರು ಬುದ್ಧನ ಬಗ್ಗೆ ಮತ್ತು ಅವನು ಈ ದಿವ್ಯ ಸ್ಥಿತಿಯನ್ನು ಹೇಗೆ ತಲುಪಿದ ಎಂಬುದನ್ನು ಹೇಳಿದರು ಮತ್ತು ಇತರ ಸಂತರ ಬಗ್ಗೆಯೂ ಹೇಳಿದರು, ಇದು ಅವರ ಮಾದರಿಯನ್ನು ಅನುಸರಿಸಲು ನನ್ನಲ್ಲಿ ಆಳವಾದ ಬಯಕೆಯನ್ನು ಹುಟ್ಟುಹಾಕಿತು. ನಾನು ಮತ್ತೆ ಮತ್ತೆ ಆಂತರಿಕವಾಗಿ ಜ್ಞಾನೋದಯ, ಜ್ಞಾನೋದಯ ಎಂದು ಪುನರಾವರ್ತಿಸುತ್ತ ಹೇಗೆ ಅಡ್ಡಾಡುತ್ತಿದ್ದೆ ಎಂದು ನನಗೆ ನೆನಪಿದೆ. ಆ ಶಬ್ದದ ಸಂಪೂರ್ಣ ಅರ್ಥ ನನಗೆ ತಿಳಿದಿರದಿದ್ದರೂ, ಇದು ಸಾಮಾನ್ಯ ಮನುಷ್ಯನು ತನ್ನ ಐಹಿಕ ಅಥವಾ ಕಲಾತ್ಮಕ ವೃತ್ತಿಜೀವನದಲ್ಲಿ ಎಷ್ಟೇ ಸಾಧಿಸಿದ್ದರೂ ಅದಕ್ಕಿಂತ ಎಷ್ಟೋ ಹೆಚ್ಚಿನದಾಗಿದೆ ಎಂದು ನನಗೆ ತಿಳಿದಿತ್ತು. ಒಬ್ಬರು ಆ ಸ್ಥಿತಿಯನ್ನು ಹೇಗೆ ಸಾಧಿಸಬಹುದು ಎಂದು ನಾನು ನನ್ನ ಚಿಕ್ಕಪ್ಪನನ್ನು ಕೇಳಿದೆ, ಆದರೆ ಅವರು ಹೇಳಿದ ಒಂದೇ ವಿಷಯವೆಂದರೆ ಧ್ಯಾನ ಮಾಡಬೇಕು. ಆದರೆ ಹೇಗೆ, ಅವರಿಗೆ ತಿಳಿದಿರಲಿಲ್ಲ. ಎಲ್ಲವನ್ನೂ ಕಲಿಸಲು ಸಾಧ್ಯವಿರುವ ಗುರುವನ್ನು ಒಬ್ಬರು ಹೊಂದಿರಬೇಕು ಎಂದು ಅವರು ಹೇಳಿದರು. ನಾನು ಅಂತಹ ಒಬ್ಬರನ್ನು ಭೇಟಿಯಾಗಬೇಕೆಂಬ ನನ್ನ ಮಹಾನ್ ಆಸೆಯನ್ನು ವ್ಯಕ್ತಪಡಿಸಿದಾಗ, ಅವರು ತಲೆ ಅಲ್ಲಾಡಿಸಿ ಮುಗುಳ್ನಕ್ಕರು. “ಅಯ್ಯೋ ನನ್ನ ಹುಡುಗಾ, ಸ್ವಿಟ್ಜರ್ಲೆಂಡ್‌ನಲ್ಲಿ ಗುರುಗಳಿಲ್ಲ”

ಆದ್ದರಿಂದ ನಾನು ಗುರುವಿಗಾಗಿ ಪ್ರಾರ್ಥಿಸತೊಡಗಿದೆ. ಒಬ್ಬ ಗುರುವಿಗಾಗಿ ನನ್ನ ಹಂಬಲ ಎಷ್ಟಿತ್ತೆಂದರೆ, ನಾನು ನನ್ನ ಊರಿಗೆ ಮರಳಿದ ನಂತರ, “ಅವರು” ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾದು ರೈಲ್ವೆ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದೆ. ಆದರೆ ಏನೂ ಆಗಲಿಲ್ಲ.

ನಾನು ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ನನ್ನ ತಂದೆಯ ವ್ಯಾಪಾರದಲ್ಲಿ ಎರಡು ನಿರಾಶಾದಾಯಕ ವರ್ಷಗಳ ಕಾಲ ಕೆಲಸ ಮಾಡಿದೆ. ಆ ಹೊತ್ತಿಗೆ, ನಾನು ಹಿಂದೂ ತತ್ವಶಾಸ್ತ್ರದಲ್ಲಿ ನನ್ನ ಆಸಕ್ತಿಯನ್ನು ಬಿಟ್ಟುಬಿಟ್ಟಿದ್ದೆ, ಏಕೆಂದರೆ ನನಗೆ ಗುರುವನ್ನು ಕಂಡುಹಿಡಿಯುವುದು ಹತಾಶಕರವಾಗಿತ್ತು. ನಾನು ಕಲೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ಮೂರು ವರ್ಷಗಳ ನಂತರ ಪ್ರಸಿದ್ಧ ವಾಸ್ತುಶಿಲ್ಪಿ ಫ್ರಾಂಕ್ ಲಾಯ್ಡ್ರೈ ಟ್ ಅವರೊಂದಿಗೆ ಅಧ್ಯಯನ ಮಾಡಲು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬರಲು ನನ್ನನ್ನು ಆಹ್ವಾನಿಸಲಾಯಿತು.

ನಾನು ಅಮೆರಿಕೆಗೆ ಹೋದ ಮೊದಲ ವಾರದಲ್ಲಿ, 1920 ರ ದಶಕದಲ್ಲಿ ಈ ದೇಶಕ್ಕೆ ವಲಸೆ ಬಂದ ಚಿಕ್ಕಪ್ಪನನ್ನು ಭೇಟಿಯಾದೆ. ಒಮ್ಮೆ ಮಾತುಮಾತಿನಲ್ಲಿ ಅವರು ಹಿಂದೂ ತತ್ವಶಾಸ್ತ್ರವನ್ನು ಪ್ರಸ್ತಾಪಿಸಿದರು. ವರ್ಷಗಳ ಹಿಂದೆ ನನಗೆ ಈ ವಿಷಯದಲ್ಲಿ ಆಸಕ್ತಿ ಇತ್ತು ಎಂದು ನಾನು ಅವರಿಗೆ ಹೇಳಿದಾಗ, ಅವರ ಮುಖವು ಬೆಳಗಿತು ಮತ್ತು ಅವರು ನನ್ನನ್ನು ತಮ್ಮ ಖಾಸಗಿ ಅಧ್ಯಯನಕ್ಕೆ ಕರೆದೊಯ್ದು ನನಗೆ ಯೋಗಿಯ ಆತ್ಮಕಥೆಯನ್ನು ತೋರಿಸಿದರು. ಮುಖಪುಟದಲ್ಲಿದ್ದ ಪರಮಹಂಸ ಯೋಗಾನಂದರ ಚಿತ್ರವನ್ನು ತೋರಿಸಿ ಅವರು ಕೇಳಿದರು: “ನೀನು ಇವರ ಬಗ್ಗೆ ಎಂದಾದರೂ ಕೇಳಿರುವಿಯಾ?” ನಾನು ಇಲ್ಲ ಎಂದು ಹೇಳಿದಾಗ, ಅವರು ಉತ್ತರಿಸಿದರು, “ನಾನು ನೋಡಿದವರಲ್ಲೇ ಅತ್ಯಂತ ದೊಡ್ಡ ವ್ಯಕ್ತಿ. ಅವರು ನಿಜವಾದ ಗುರು!”

“ನೀವು ಅವರನ್ನು ನೋಡಿರುವಿರಾ?” ನಾನು ಸಂಪೂರ್ಣ ಆಶ್ಚರ್ಯದಿಂದ ಕಿರುಚಿದೆ. “ಅವರು ಎಲ್ಲಿದ್ದಾರೆ — ಅಮೆರಿಕಾದಲ್ಲಿಲ್ಲ ಅಲ್ಲವೆ!?”

“ಹೌದು, ಅವರು ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಾರೆ.” ನಂತರ ತಾವು ಈ ದೇಶಕ್ಕೆ ಬಂದ ತರುಣದಲ್ಲೇ ಪರಮಹಂಸಜಿಯವರು ನೀಡಿದ ಉಪನ್ಯಾಸ ಮತ್ತು ತರಗತಿಗಳ ಸರಣಿಗೆ ಹೇಗೆ ಹಾಜರಾಗಿದ್ದರೆಂದು ತಿಳಿಸಿದರು. ಯೋಚಿಸ ಹೊರಟರೆ, ಇಷ್ಟು ವರ್ಷಗಳಿಂದ ನಾನು ಗುರುವಿಗಾಗಿ ಹಂಬಲಿಸುತ್ತಿರುವಾಗ, ನನ್ನ ಚಿಕ್ಕಪ್ಪನಿಗೆ ಒಬ್ಬ ಗುರು ಮತ್ತು ಅವರ ಬೋಧನೆಗಳು ತಿಳಿದಿದ್ದವು!

ನಾನು ಆತುರದಿಂದ ಪುಸ್ತಕವನ್ನು ಓದಿದೆ. ಅದೇ ಮೊದಲ ಪವಾಡ. ನಾನು ಎಷ್ಟು ಆಕರ್ಷಿತನಾಗಿದ್ದೆನೆಂದರೆ, ಇದೇ ಒಂದು ಪವಾಡ ಎಂದೂ ನನಗೆ ಅನಿಸಲಿಲ್ಲ, ಏಕೆಂದರೆ ಆ ಭಾಷೆಯಲ್ಲಿ ಪುಸ್ತಕವನ್ನು ಓದುವಷ್ಟು ಇಂಗ್ಲಿಷ್ ನನಗೆ ತಿಳಿದಿರಲಿಲ್ಲ. ಫ್ರಾಂಕ್ ಲಾಯ್ಡ್ ರೈಟ್ ಕೂಡ ಆತ್ಮಚರಿತ್ರೆ ಬರೆದಿದ್ದರು, ಆದರೆ ನಾನು ಮೊದಲ ಒಂದೆರಡು ಪುಟಗಳನ್ನು ಓದಲು ವ್ಯರ್ಥವಾಗಿ ಪ್ರಯತ್ನಿಸಿದ್ದೆ. ನಾನು ಆ ಪುಸ್ತಕವನ್ನು ಓದಲು ಸಾಧ್ಯವಾಗುವ ಮೊದಲು, ಇಂಗ್ಲಿಷ್ ಕಲಿಯಲು ನನಗೆ ಇಡೀ ಒಂದು ವರ್ಷ ಬೇಕಾಯಿತು. ಆದರೂ ನನಗೆ ಯೋಗಿಯ ಆತ್ಮಕಥೆಯನ್ನು ಮೊದಲಿನಿಂದ ಕೊನೆಯವರೆಗೆ ಓದಲು ಸಾಧ್ಯವಾಯಿತು.

ನನಗೆ ಬೇಕಾದುದನ್ನು ನಾನು ಕಂಡುಕೊಂಡೆ ಎಂದು ನನ್ನ ಮನಸ್ಸಿಗೆ ತಿಳಿದಿತ್ತು ಹಾಗೂ ಪರಮಹಂಸ ಯೋಗಾನಂದರ ಬೋಧನೆಗಳನ್ನು ಅಧ್ಯಯನ ಮಾಡಲು ಮತ್ತು ಭಗವಂತನನ್ನು ಕಂಡುಕೊಳ್ಳಲು ನಿರ್ಧರಿಸಿದೆ.

Iನಾನು ಹೆಚ್ಚು ಇಂಗ್ಲಿಷ್ ಕಲಿತ ಕೆಲವು ತಿಂಗಳುಗಳ ನಂತರ, ಗುರುಗಳನ್ನು ನೋಡುವ ಆಶಯದೊಂದಿಗೆ ಲಾಸ್ ಏಂಜಲೀಸ್‌ಗೆ ಪ್ರಯಾಣ ಮಾಡಲು ಸಾಧ್ಯವಾಯಿತು. ನಾನು ಮದರ್ ಸೆಂಟರ್‌ನ ಮೈದಾನವನ್ನು ಪ್ರವೇಶಿಸುತ್ತಿದ್ದಂತೆ, ಹಿಂದೆಂದೂ ಅನುಭವಿಸದಂತಹ ಅಗಾಧವಾದ ಶಾಂತಿಯನ್ನು ಅನುಭವಿಸಿದೆ. ನಾನು ಪವಿತ್ರ ನೆಲದ ಮೇಲೆ ನಿಂತಿದ್ದೇನೆ ಎಂದು ನನಗೆ ತಿಳಿದಿತ್ತು.

ಭಾನುವಾರ ಬೆಳಿಗ್ಗೆ ನಾನು ಹಾಲಿವುಡ್ ಮಂದಿರದಲ್ಲಿ ಪರಮಹಂಸಜಿಯವರ ಬೆಳಗಿನ ಸತ್ಸಂಗದಲ್ಲಿ ಭಾಗವಹಿಸಿದೆ. ನಾನು ಅವರನ್ನು ಮುಖತಃ ನೋಡಿದ್ದು ಅದೇ ಮೊದಲ ಬಾರಿ. ಅದೊಂದು ಮರೆಯಲಾಗದ ಅನುಭವವಾಗಿತ್ತು. ಸತ್ಸಂಗದ ನಂತರ, ಗುರುಗಳು ಕುರ್ಚಿಯ ಮೇಲೆ ಕುಳಿತುಕೊಂಡರು ಮತ್ತು ಹೆಚ್ಚಿನ ಭಕ್ತಜನ ಅವರಿಗೆ ವಂದಿಸಲು ಹೋದರು. ನಾನು ಸಾಲಿನಲ್ಲಿ ನಿಂತಾಗ ನನಗೆ ಹೇಗೆ ಅನಿಸಿತು ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಂತಿಮವಾಗಿ ನಾನು ಅವರ ಮುಂದೆ ನಿಂತಾಗ, ಅವರು ನನ್ನ ಕೈಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು ಮತ್ತು ನಾನು ಆ ಆಳವಾದ ಹೊಳೆಯುವ ಕೋಮಲ ಕಣ್ಣುಗಳಲ್ಲಿ ನೋಡಿದೆ. ಯಾವ ಮಾತನ್ನೂ ಆಡಲಿಲ್ಲ. ಆದರೆ ಅವರ ಕೈ ಮತ್ತು ಕಣ್ಣುಗಳ ಮೂಲಕ ವರ್ಣಿಸಲಾಗದ ಆನಂದವು ನನ್ನೊಳಗೆ ಹರಿಯುತ್ತಿರುವುದನ್ನು ನಾನು ಅನುಭವಿಸಿದೆ.

ನಾನು ಮಂದಿರವನ್ನು ಬಿಟ್ಟು ಸನ್‌ಸೆಟ್‌ ಬೂಲವಾರ್ಡ್‌ನ ಉದ್ದಕ್ಕೂ ದಿಗ್ಭ್ರಮೆಯಲ್ಲೇ ನಡೆದು ಹೋದೆ. ನಾನು ನೇರವಾಗಿ ನಡೆಯಲು ಸಾಧ್ಯವಾಗದಷ್ಟು ಸಂತೋಷದ ಅಮಲಿನಲ್ಲಿದ್ದೆ. ನಾನು ಕುಡುಕನಂತೆ ತೂರಾಡಿದೆ. ಅಷ್ಟೇ ಅಲ್ಲ, ನನ್ನೊಳಗಿನ ಸಂತೋಷವನ್ನು ತಡೆಯಲಾರದೆ ಜೋರಾಗಿ ನಗುತ್ತಿದ್ದೆ. ನಡೆದು ಹೋಗುತ್ತಿದ್ದ ಜನರು ತಿರುಗಿ ಬಿರುಗಣ್ಣು ಬಿಟ್ಟುಕೊಂಡು ನೋಡುತ್ತಿದ್ದರು; ಮತ್ತು ನನ್ನ ದಿಕ್ಕಿನಲ್ಲಿ ನಡೆಯುತ್ತಿದ್ದವರು, ಭಾನುವಾರ ಬೆಳಿಗ್ಗೆಯೇ ಸಾರ್ವಜನಿಕವಾಗಿ ಅತಿಕುಡಿತದ ಸ್ಥಿತಿ ಎಂದು ಭಾವಿಸಿ, ಅಸಹ್ಯದಿಂದ ತಲೆ ಅಲ್ಲಾಡಿಸುತ್ತ ಬದಿಗೆ ಸರಿಯುತ್ತಿದ್ದರು.

ಈ ಅನುಭವವಾಗಿ ಸ್ವಲ್ಪ ಸಮಯದ ನಂತರ, ನಾನು ಸಂನ್ಯಾಸಿಯಾಗಿ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಆಶ್ರಮವನ್ನು ಪ್ರವೇಶಿಸಿದೆ.

ಸ್ವಾಮಿ ಪ್ರೇಮಮೊಯಿ

ಮಂತ್ರಮುಗ್ಧರಾಗಿ, ಅವರು ಇಡೀ ಪುಸ್ತಕವನ್ನು ಒಂದೇ ಸಲಕ್ಕೆ ಓದಿ ಮುಗಿಸಿದರು. ಸ್ವಾಮಿ ಪ್ರೇಮಮೊಯಿ, ತಾನು ಇದುವರೆಗೆ ಭೇಟಿ ಮಾಡಿದವರೆಲ್ಲರಿಗಿಂತಲೂ ಮೀರಿದ ಆಧ್ಯಾತ್ಮಿಕ ಒಳನೋಟವನ್ನು ಲೇಖಕರು ಹೊಂದಿದ್ದಾರೆಂದು ಗುರುತಿಸಿ ಪರಮಹಂಸ ಯೋಗಾನಂದರಿಗೆ ಬರೆಯಲು ನಿರ್ಧರಿಸಿದರು.

ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಪರಮಹಂಸ ಯೋಗಾನಂದರ ಸಂನ್ಯಾಸಿ ಶಿಷ್ಯರಾಗಿದ್ದ, ಸೆಲ್ಫ್- ರಿಯಲೈಝೇಷನ್‌ ಫೆಲೋಶಿಪ್‌ನ ನಿರ್ವಾಹಕರಾದ ಸ್ವಾಮಿ ಪ್ರೇಮಮೊಯಿ ಅವರು 1990 ರಲ್ಲಿ ನಿಧನರಾಗುವವರೆಗೂ ಯುವ ಸಂನ್ಯಾಸಿಗಳಿಗೆ ಆಧ್ಯಾತ್ಮಿಕ ತರಬೇತಿ ನೀಡುತ್ತಿದ್ದರು. ಆ ಶಿಷ್ಯರಿಗೆ ಅವರು ಈ ಕಥೆಯನ್ನು ವಿವರಿಸಿದರು.

ಸ್ವಾಮಿ ಪ್ರೇಮಮೊಯಿ ಸ್ಲೊವೇನಿಯಾದಲ್ಲಿ ಜನಿಸಿದರು. ರಾಜವಂಶ ಮತ್ತು ಇತರ ಪ್ರಭಾವೀ ಜನಗಳೊಂದಿಗೆ ಅವರ ಪಾರಿವಾರಿಕ ಸಂಪರ್ಕಗಳ ಕಾರಣದಿಂದಾಗಿ, ಎರಡನೇ ಜಾಗತಿಕ ಯುದ್ಧದ ಕೊನೆಯಲ್ಲಿ ಅವರ ಹುಟ್ಟೂರನ್ನು ಕಮ್ಯುನಿಸ್ಟರು ಸ್ವಾಧೀನಪಡಿಸಿಕೊಂಡ ನಂತರ ಅವರು ಪಲಾಯನ ಮಾಡಲೇಬೇಕಾಯಿತು. 1950 ರಲ್ಲಿ, ಯು.ಎಸ್.ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಅವರನ್ನು ಅಮೆರಿಕಕ್ಕೆ ವಲಸೆ ಬರುವಂತೆ ಆಹ್ವಾನಿಸಿತು.

1950 ರ ಚಳಿಗಾಲದಲ್ಲಿ ನ್ಯೂಯಾರ್ಕ್‌ಗೆ ನೌಕಾಯಾನ ಮಾಡುವ ಸ್ವಲ್ಪ ಮುನ್ನ, ಸ್ವಾಮಿ ಪ್ರೇಮಮೊಯಿ ಅವರಿಗೆ ಕುಟುಂಬದ ಹಳೆಯ ಸ್ನೇಹಿತೆ, ಎವೆಲಿನಾ ಗ್ಲಾಂಜ್‌ಮನ್ ಒಂದು ವಿದಾಯದ ಉಡುಗೊರೆಯನ್ನು ನೀಡಿದರು. ಉಡುಗೊರೆಯ ಆಕಾರವನ್ನು ನೋಡಿ ಅದು ಕ್ಯಾಂಡಿಯ ಪೆಟ್ಟಿಗೆ ಎಂದು ಊಹಿಸಿದರು, ಮತ್ತು ಹಡಗಿನಲ್ಲಿ ಅದನ್ನು ಸಹ ಪ್ರಯಾಣಿಕರೊಂದಿಗೆ ಹಂಚಿಕೊಳ್ಳಲು ತೆರೆದರು. ಅವರ ಆಶ್ಚರ್ಯಕ್ಕೆ, ಅದು ಕ್ಯಾಂಡಿಯ ಪೆಟ್ಟಿಗೆ ಆಗಿರಲಿಲ್ಲ, ಬದಲಿಗೆ, ಒಂದು ಪುಸ್ತಕ — ಯೋಗಿಯ ಆತ್ಮಕಥೆ ಆಗಿತ್ತು.

ಉಡುಗೊರೆ ಕೊಟ್ಟ ಕಾರಣಕ್ಕಾಗಿ ಅವರ ಮನ ಕರಗಿದರೂ, ಪ್ರೇಮಮೊಯಿಗೆ ಆ ಕೂಡಲೇ ಅದನ್ನು ಓದುವ ಮನಸ್ಸಾಗಲಿಲ್ಲ. ಅವರು ಚಿಕ್ಕವರಾಗಿದ್ದಾಗ ಓದುವುದರಲ್ಲಿ ಅಪಾರ ಆಸಕ್ತಿ ಇರಿಸಿಕೊಂಡಿದ್ದರೂ ಆ ದಿನಗಳು ಆಗಿಹೋಗಿದ್ದವು (ನಂತರ ಅವರು ಮುಂದಿನ ತಮ್ಮ ಜೀವನದುದ್ದಕ್ಕೂ ಓದಿದ್ದಕ್ಕಿಂತ ಹೆಚ್ಚು, ಹದಿನೈದು ವರ್ಷಕ್ಕಿಂತ ಮೊದಲು ಓದಿದ್ದೇನೆ ಎಂದು ಹೇಳಿದರು). ಅಲ್ಲದೆ, ಹದಿಹರೆಯದವರಾಗಿದ್ದಾಗ ಭಗವದ್ಗೀತೆಯನ್ನು ಪ್ರೀತಿಸುತ್ತಿದ್ದು ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದ ಅವರು ಪೌರಸ್ತ್ಯ ತತ್ತ್ವಶಾಸ್ತ್ರದ ಬಗ್ಗೆ ಬಹಳ ತಿಳಿದಿದ್ದರು, ಈಗ, ಉಡುಗೊರೆಯಾಗಿ ಬಂದಿದ್ದ ಈ ಪುಸ್ತಕದ ವಿಷಯವನ್ನು ನೋಡಿದಾಗ, ಅವರ ಮೊದಲ ಪ್ರತಿಕ್ರಿಯೆ, “ನಾನು ಇದನ್ನು ಓದುವುದಿಲ್ಲ — ನಾನು ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ!”

ಅಮೆರಿಕಾದಲ್ಲಿ, ಅವರು ವಿವಿಧ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಂಡರು ಮತ್ತು ಅಂತಿಮವಾಗಿ ಅವರಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರ್ಸ್ಕ್‌ಜೋಲ್ಡ್‌ಗೆ ವೈಯಕ್ತಿಕ ಸಹಾಯಕರ ಸ್ಥಾನವನ್ನು ನೀಡಲಾಯಿತು. (ಅವರು ಕ್ಯಾಲಿಫೋರ್ನಿಯಾಗೆ ಬರುವ ಮುನ್ನ ಆ ಸ್ಥಾನವನ್ನು ನಿರಾಕರಿಸಿದರು.) ತಿಂಗಳುಗಳು ಕಳೆದವು — ಆತ್ಮಕಥೆಯು, ಸ್ವಾಮಿ ಪ್ರೇಮಮೊಯಿ ಅವರ ನ್ಯೂಯಾರ್ಕ್‌ ಮನೆಯಲ್ಲಿ ಓದಲ್ಪಡದೆ ಕಪಾಟಿನಲ್ಲಿಯೇ ಉಳಿಯಿತು. ಈ ಮಧ್ಯೆ, ಶ್ರೀಮತಿ ಗ್ಲಾನ್ಜ್‌ಮನ್ (ಆತ್ಮಕಥೆಯ ಇಟಾಲಿಯನ್ ಆವೃತ್ತಿಯ ಅನುವಾದಕರು) ಪುಸ್ತಕದ ಬಗ್ಗೆ ತಮ್ಮ ಸ್ನೇಹಿತನ ಅಭಿಪ್ರಾಯವನ್ನು ಕೇಳುತ್ತಲೇ ಇದ್ದರು. ಆದರೂ ಸ್ವಾಮಿ ಪ್ರೇಮಮೊಯಿ ಅದರ ಪುಟಗಳನ್ನು ನೋಡುವ ಸಾಹಸ ಮಾಡಲಿಲ್ಲ. ಅಂತಿಮವಾಗಿ ಶ್ರೀಮತಿ ಗ್ಲಾನ್ಜ್‌ಮನ್ ಅವರು ಈ ಇಂಗಿತವಿರುವ ಪದಗಳನ್ನು ಬರೆದರು: “ನಿಮಗೆ ಇಷ್ಟವಾಗಿದೆ ಎಂದು ಹೇಳಿ ಅಥವಾ ಇಲ್ಲ ಎಂದು ಹೇಳಿ; ಆದರೆ ಏನಾದರೂ ಒಂದನ್ನು ಹೇಳಿ!" ತಮ್ಮ ಜನ್ಮದಿನವಾದ ಮಾರ್ಚ್ 6 ರಂದು ವಿಚಾರಗ್ರಸ್ತ ಮನಸ್ಥಿತಿಯಲ್ಲಿ ಅವರು ತಮ್ಮ ಜೀವನದಲ್ಲಿ ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದರು — ಅವರು ಆ ಪುಸ್ತಕವನ್ನು ತೆಗೆದುಕೊಂಡು ಓದಲಾರಂಭಿಸಿದರು.

ಮಂತ್ರಮುಗ್ಧರಾಗಿ, ಅವರು ಇಡೀ ಪುಸ್ತಕವನ್ನು ಒಂದೇ ಸಲಕ್ಕೆ ಓದಿ ಮುಗಿಸಿದರು. ಸ್ವಾಮಿ ಪ್ರೇಮಮೊಯಿ, ತಾನು ಇದುವರೆಗೆ ಭೇಟಿ ಮಾಡಿದವರೆಲ್ಲರಿಗಿಂತಲೂ ಮೀರಿದ ಆಧ್ಯಾತ್ಮಿಕ ಒಳನೋಟವನ್ನು ಲೇಖಕರು ಹೊಂದಿದ್ದಾರೆಂದು ಗುರುತಿಸಿ ಪರಮಹಂಸ ಯೋಗಾನಂದರಿಗೆ ಬರೆಯಲು ನಿರ್ಧರಿಸಿದರು.

ಪತ್ರವನ್ನು ಪೋಸ್ಟ್‌ ಮಾಡುವಾಗ ಗುರುಗಳು ತಮ್ಮ ಐಹಿಕ ಜೀವನದ ಕೊನೆಯ ದಿನವನ್ನು ಕಳೆಯುತ್ತಿದ್ದಾರೆಂದು ಸ್ವಾಮಿ ಪ್ರೇಮಮೊಯಿ ಅವರಿಗೆ ತಿಳಿದಿರಲಿಲ್ಲ.

ಸ್ವಲ್ಪ ಸಮಯದ ನಂತರ, ಅವರ ಪತ್ರಕ್ಕೆ ಶ್ರೀ ದಯಾ ಮಾತಾ ಉತ್ತರಿಸಿದಾಗ ಸ್ವಾಮಿ ಪ್ರೇಮಮೊಯಿಗೆ ಗುರುಗಳ ನಿಧನದ ಬಗ್ಗೆ ತಿಳಿದುಬಂದಿತು. ಹಲವಾರು ತಿಂಗಳುಗಳು ಕಳೆದವು; ಸ್ವಾಮಿ ಪ್ರೇಮಮೊಯಿಯವರ ಮನಸ್ಸಿನಿಂದ ಪುಸ್ತಕ ಮತ್ತು ಅದರ ಲೇಖಕರ ಆಲೋಚನೆಯನ್ನು ಹೊರಹಾಕಲು ಸಾಧ್ಯವಾಗಲಿಲ್ಲ, ಮತ್ತು ಆ ಬೇಸಿಗೆಯಲ್ಲಿ ಅವರು ಪರಮಹಂಸಜಿಯವರ ಬೋಧನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕಾರಿನಲ್ಲಿ ಲಾಸ್ಏಂ ಜಲೀಸ್‌ಗೆ ಹೋಗಲು ನಿರ್ಧರಿಸಿದರು. ಅವರು ಪ್ರಪ್ರಥಮವಾಗಿ ಸೆಲ್ಫ್-‌ರಿಯಲೈಝೇಷನ್ ಫೆಲೋಶಿಪ್ ಪ್ರಧಾನ ಕಛೇರಿಯ ಮೈದಾನಕ್ಕೆ ಕಾಲಿಟ್ಟಾಗ, ಅಪರಿಚಿತರೊಬ್ಬರು ಮಂದಹಾಸದಿಂದ ತಕ್ಷಣವೇ ಅವರನ್ನು ಸಮೀಪಿಸಿದರು. ತೇಜಃಪುಂಜವಾದ ನಗುವಿನೊಂದಿಗೆ, ಆ ವ್ಯಕ್ತಿಯು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ, ಅತ್ಯಂತ ಸ್ವಾಗತಾರ್ಹ ಹಳೆಯ ಸ್ನೇಹಿತನಂತೆ ಪ್ರೀತಿಯಿಂದ ಅವರನ್ನು ಅಪ್ಪಿಕೊಂಡರು. ಯಾವುದೇ ಪದಗಳ ವಿನಿಮಯವಾಗಲಿಲ್ಲ, ಮತ್ತು ನಂತರವೇ ಸ್ವಾಮಿ ಪ್ರೇಮಮೊಯಿಯವರನ್ನು ಔಪಚಾರಿಕವಾಗಿ ಅವರ ಹೊಸ "ಹಳೆಯ ಸ್ನೇಹಿತ"ರಿಗೆ ಪರಿಚಯಿಸಲಾಯಿತು — ಶ್ರೀ ಶ್ರೀ ರಾಜರ್ಷಿ ಜನಕಾನಂದ, ಸಂಸ್ಥೆಯ ಅಧ್ಯಕ್ಷರು!

ಹೀಗೆ, ಪರಮಹಂಸಜಿಯವರು ತಮ್ಮ “ರಾಯಭಾರಿ” ಎಂದು ಹೇಳಿದ ಪುಸ್ತಕವು ಮತ್ತೊಂದು ಆತ್ಮದ ಮೇಲೆ ತನ್ನ ಮಾಂತ್ರಿಕತೆಯನ್ನು ಪ್ರದರ್ಶಿಸಿತು — ಏಕೆಂದರೆ ಆ ದಿನದಿಂದ, ಸ್ವಾಮಿ ಪ್ರೇಮಮೊಯಿಯವರ ಜೀವನಕ್ರಮ ನಿರ್ಧಾರಿತವಾಯಿತು.

ಸೋದರಿ ಶಾಂತಿ

“ನಾನು ಅದನ್ನು ರಾತ್ರಿಯಲ್ಲಿ ಓದುತ್ತಿದ್ದೆ ಮತ್ತು [ನನ್ನ ತಾಯಿ] ನಾನು ಕೆಲಸದಲ್ಲಿರುವಾಗ ಅದನ್ನು ಓದುತ್ತಿದ್ದರು. ಸತ್ಯದ ಜಗತ್ತನ್ನು ಪ್ರವೇಶಿಸುವ ಅನುಭವದಲ್ಲಿ ನಮ್ಮನ್ನು ನಾವು ಮುಳುಗಿಸಿಕೊಂಡ ರೀತಿಯನ್ನು ವಿವರಿಸಲು “ಓದುವಿಕೆ” ಎಂಬ ಶಬ್ದವು ಬಹುಶಃ ಅಸಮರ್ಪಕವಾಗಿದೆ. ಜೀವನದ ಮೂಲ, ಶಿಷ್ಯತ್ವ, ಕ್ರಿಯಾ ಯೋಗದ ವಿಶೇಷಾನುಗ್ರಹ ಎಲ್ಲವನ್ನೂ ಯೋಗಿಯ ಆತ್ಮಕಥೆಯಲ್ಲಿ ಸ್ಪಷ್ಟಪಡಿಸಲಾಗಿದೆ.”

1952ರಲ್ಲಿ ನಾನು ಲಾಸ್ ಏಂಜಲೀಸ್‌ನ ವಿಲ್‌ಶೈರ್ ಬೂಲವಾರ್ಡ್‌ನಲ್ಲಿರುವ ಅಂಬಾಸಿಡರ್ ಹೋಟೆಲ್‌ನಲ್ಲಿ ಸಹಾಯಕ ನಿರ್ವಾಹಕರಿಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ: ವಿಶಿಷ್ಟ ಪರಿಸರದಲ್ಲಿ ಆಕರ್ಷಕ ಕೆಲಸ, ಅಲ್ಲಿ ನಾನು ಹಲವಾರು ವಿಶ್ವ-ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾದೆ. ಆದರೆ ನನ್ನ ಕಿವಿಯಲ್ಲಿ ಬಿದ್ದ ಒಂದು ಹೆಸರಿನ ಶಬ್ದವು ನನ್ನ ಜೀವನದ ಮೇಲೆ ಬೀರಬಹುದಾದ ಪರಿಣಾಮ ನನಗೆ ತಿಳಿದಿರಲಿಲ್ಲ.

ಮಾರ್ಚ್ 6 ರಂದು, ಚಲನಚಿತ್ರ ನಿರ್ಮಾಪಕರ ಕಾರ್ಯದರ್ಶಿಯು ಹೋಟೆಲ್‌ಗೆ ಕರೆ ಮಾಡಿ, ಪರಮಹಂಸ ಯೋಗಾನಂದರಿಗೆ ಸಂದೇಶವನ್ನು ತಲುಪಿಸುವಂತೆ ಕೇಳಿಕೊಂಡರು. ನಾನು ಆ ಹೆಸರನ್ನು ಕೇಳಿದ ಕ್ಷಣ, ನನ್ನ ಎದೆಯಲ್ಲಿ ಒಂದು ದೊಡ್ಡ "ಜಾಗಟೆ" ಮೊಳಗಿತು; ನನ್ನ ತಲೆ ತಿರುಗಿತು, ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಸಂತೋಷವು ಉಕ್ಕಿ ಹರಿಯಿತು, ಮತ್ತು ಸಂದೇಶ ವಿತರಣೆಗೆ ವ್ಯವಸ್ಥೆ ಮಾಡಲು ನಾನು ರಿಝರ್ವೇಶನ್‌ ಟೇಬಲ್ಲಿನ ಕಡೆಗೆ ಹೋಗುವಾಗ ನನಗೆ ನೇರವಾಗಿ ನಡೆಯಲೂ ಸಾಧ್ಯವಾಗಲಿಲ್ಲ. ಭಾರತೀಯ ರಾಯಭಾರಿ ಮತ್ತು ಅವರ ಪರಿವಾರದವರು ಪ್ರಸ್ತುತ ಹೋಟೆಲ್‌ನಲ್ಲಿದ್ದರೂ, ಆ ಹೆಸರನ್ನು ಯಾರೂ ಹೋಟೆಲ್‌ನಲ್ಲಿ ನೋಂದಾಯಿಸಿಲ್ಲ ಎಂದು ನನಗೆ ತಿಳಿಸಲಾಯಿತು. ನನ್ನ ಕಛೇರಿಗೆ ಹಿಂತಿರುಗುವ ದಾರಿಯುದ್ದಕ್ಕೂ ನನ್ನ ಪ್ರಜ್ಞೆಯಲ್ಲಿ ಆ ಹೆಸರು ಸುತ್ತುತ್ತಲೇ ಇತ್ತು ಮತ್ತು ನನ್ನಲ್ಲಿ ಹೆಚ್ಚು ಹೆಚ್ಚು ಪ್ರೀತಿ ಮತ್ತು ಆನಂದ ತುಂಬಿಕೊಂಡಿತು. ಸ್ವಲ್ಪ ಸಮಯದ ನಂತರ ಚಲನಚಿತ್ರ ನಿರ್ಮಾಪಕರು ಕರೆ ಮಾಡಿ, "ನನ್ನ ಕಾರ್ಯದರ್ಶಿ ನಿಮಗೆ ಯಾವ ಹೆಸರನ್ನು ನೀಡಿದರು?" ಎಂದು ಕೇಳಿದರು. ನಾನು ಅವರಿಗೆ “ಪರಮಹಂಸ ಯೋಗಾನಂದ” ಎಂದು ಹೇಳಿದೆ ಆಗ ಅವರು, “ಅದನ್ನೇ ಅವರು ಹೇಳಿದ್ದು ಮತ್ತು ನಾನು ಕೇಳಿಸಿಕೊಂಡಿದ್ದು ಎಂದು ನಾನು ಭಾವಿಸಿದೆ! ಅದು ನಾನು ಅವರಿಗೆ ಕೊಟ್ಟ ಹೆಸರಲ್ಲ. ಅವರು ಅದನ್ನು ಏಕೆ ಹೇಳಿದರೆಂದು ಅವರಿಗೆ ತಿಳಿದಿಲ್ಲ!” ಎಂದು ಉದ್ಗರಿಸಿದರು.

ಆ ದಿನದ ಉಳಿದ ಸಮಯದಲ್ಲಿ ನಾನು ಆಂತರಿಕ ಅರಿವಿನ ವಿಚಿತ್ರ ಸ್ಥಿತಿಯಲ್ಲಿದ್ದೆ ಮತ್ತು ಆ ಹೆಸರಿನೊಂದಿಗೆ ಆಳವಾದ ಸಂಪರ್ಕವನ್ನು ಅನುಭವಿಸಿದೆ. ನಂತರ ಮಾರ್ಚ್ 7 ಬಂದಿತು, ಪರಮಹಂಸ ಯೋಗಾನಂದರ ಮಹಾಸಮಾಧಿಯ ವಿಧಿಲಿಖಿತ ದಿನ. ನಾನು ಅದರ ಬಗ್ಗೆ ಪತ್ರಿಕೆಯಲ್ಲಿ ಓದಿದೆ ಮತ್ತು ನಾನು ನನ್ನ ಅತ್ಯಂತ ಆತ್ಮೀಯ ಗೆಳೆಯನನ್ನು ಕಳೆದುಕೊಂಡೆ ಎಂದು ಭಾವಿಸಿದೆ. ಅದು ಆಘಾತಕಾರಿಯಾಗಿತ್ತು. ನನ್ನ ಜೀವನವು ಇದ್ದಕ್ಕಿದ್ದಂತೆ ಮುಗಿದುಹೋದಂತೆ ತೋರಿತು. ನಾನು ಅವರನ್ನು ಕಳೆದುಕೊಂಡೆ, ಎಂದು ಯೋಚಿಸುತ್ತಲೇ ಇದ್ದೆ! ನಾನು ಅವರಿಗಾಗಿ ನನ್ನ ಜೀವನದುದ್ದಕ್ಕೂ ಕಾಯುತ್ತಿದ್ದೆ ಮತ್ತು ನಾನು ಅವರನ್ನು ಕಳೆದುಕೊಂಡೆ! ಆದರೆ ನಾನು ಗುರುವನ್ನಾಗಲೀ ಅಥವಾ ಮಾರ್ಗವನ್ನಾಗಲೀ ಹುಡುಕುತ್ತಿರಲಿಲ್ಲವಾದ್ದರಿಂದ ನನ್ನ ಎಣಿಕೆಯ ಅರ್ಥವೇನೆಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ಆದರೂ, ನನ್ನ ಪ್ರಜ್ಞೆಯ ಆಳದಲ್ಲಿ, ನನ್ನ ಅಸ್ತಿತ್ವದ ಪ್ರಮುಖ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ ಎಂಬುದು ನಿಜವೆಂದು ನನಗೆ ತಿಳಿದಿತ್ತು.

ಆ ಕ್ಷಣದಿಂದ ನನ್ನ ಸುವ್ಯವಸ್ಥಿತ, ಹಾಗೂ ಸ್ವಲ್ಪ ಬೆಡಗಿನ ಜೀವನವು ನನಗೆ ಸರಿಹೊಂದದಾಯಿತು. ನಾನು ಇದ್ದಕ್ಕಿದ್ದಂತೆ ಪ್ರಮುಖ ಯೋಜನೆಗಳನ್ನು ರದ್ದುಗೊಳಿಸಿದೆ, ನನಗೆ ಪರಿಚಯವಿರುವ ಜನರನ್ನು ನೋಡುವುದನ್ನು ನಿಲ್ಲಿಸಿದೆ ಮತ್ತು ಪುಸ್ತಕಗಳ ಮೂಲಕ ಹುಡುಕಲಾರಂಭಿಸಿದೆ. ಪರಮಹಂಸ ಯೋಗಾನಂದರು ಎಂದಾದರೂ ಪುಸ್ತಕ ಬರೆದಿದ್ದಾರೆಯೇ ಎಂದು ನೋಡಬೇಕೆಂದು ನನಗೆ ಅನಿಸಲೇ ಇಲ್ಲ; ಅವರು ಹೋದರು ಮತ್ತು ನಾನು ಅವರನ್ನು ಕಳೆದುಕೊಂಡೆ ಎಂದಷ್ಟೇ ನನಗನಿಸಿದ್ದು. ನನ್ನ ಅಗತ್ಯದ ಆಳವನ್ನು ಪೂರೈಸದ, ಆಧ್ಯಾತ್ಮವನ್ನಾಧರಿಸಿದ ನಾಲ್ಕು ಪುಸ್ತಕಗಳನ್ನು ಓದಿದ ನಂತರ, ನಾನು ಮತ್ತೆ ಹಾಲಿವುಡ್ ಪಬ್ಲಿಕ್ ಲೈಬ್ರರಿಯಲ್ಲಿ ನನ್ನ ತಾಯಿಯೊಂದಿಗೆ ಪುಸ್ತಕಗಳ ಅದೇ ಸಾಲಿನಲ್ಲಿ ಹುಡುಕುತ್ತಿದ್ದೆ, ಆಕೆಗೆ ನನ್ನೊಳಗೆ ಉರಿಯುತ್ತಿರುವ ಬೆಂಕಿಯ ಬಗ್ಗೆ ಅಲ್ಪಸ್ವಲ್ಪ ತಿಳಿದಿತ್ತು. ನಾನು ಈಗಾಗಲೇ ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ ಎಂದು ನಾನು ಭಾವಿಸಿದ್ದ ಮೊದಲ ವಿಭಾಗವನ್ನು ಬಹುತೇಕ ಹಾದುಹೋದ ನಂತರ, ಒಂದು ಪುಸ್ತಕವು ಮೇಲಿನ ಕಪಾಟಿನಿಂದ ಬಿದ್ದು, ನನ್ನ ತಲೆಗೆ ಹೊಡೆದು ನೆಲಕ್ಕೆ ಪುಟಿಯಿತು. ನನ್ನ ತಾಯಿ ಅದನ್ನು ಎತ್ತಿ ನನ್ನ ಕಡೆಗೆ ತಿರುಗಿಸುತ್ತ ಅಚ್ಚರಿ ಪಟ್ಟರು — ಅದು ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ. ಅಲ್ಲಿ ನನ್ನೆದುರು ನನ್ನ ಹೃದಯ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಹೆಸರು ಮತ್ತು ಆತ್ಮವನ್ನೇ ಒಳಹೊಕ್ಕು ನೋಡುವಂತಹ ಕಣ್ಣುಗಳುಳ್ಳ ಮುಖ!

ನಾನು ಅದನ್ನು ರಾತ್ರಿಯಲ್ಲಿ ಓದುತ್ತಿದ್ದೆ ಮತ್ತು [ನನ್ನ ತಾಯಿ] ನಾನು ಕೆಲಸದಲ್ಲಿರುವಾಗ ಅದನ್ನು ಓದುತ್ತಿದ್ದರು. ಸತ್ಯದ ಜಗತ್ತನ್ನು ಪ್ರವೇಶಿಸುವ ಅನುಭವದಲ್ಲಿ ನಮ್ಮನ್ನು ನಾವು ಮುಳುಗಿಸಿಕೊಂಡ ರೀತಿಯನ್ನು ವಿವರಿಸಲು "ಓದುವಿಕೆ" ಎಂಬ ಶಬ್ದವು ಬಹುಶಃ ಅಸಮರ್ಪಕವಾಗಿದೆ. ಜೀವನದ ಮೂಲ, ಶಿಷ್ಯತ್ವ, ಕ್ರಿಯಾ ಯೋಗದ ವಿಶೇಷಾನುಗ್ರಹ ಎಲ್ಲವನ್ನೂ ಯೋಗಿಯ ಆತ್ಮಕಥೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಾವು ಹಾಲಿವುಡ್ ಟೆಂಪಲ್‌ನಲ್ಲಿನ ಸತ್ಸಂಗದಲ್ಲಿ ಭಾಗವಹಿಸಿದೆವು, ಅದು, ಅಂದು ಬೆಳಿಗ್ಗೆ ನಾನು ಗುರುಗಳ ಹೆಸರನ್ನು ದೂರವಾಣಿಯಲ್ಲಿ ಮೊದಲ ಬಾರಿ ಕೇಳಿದಾಗ ಆದ ಅದೇ ಶಕ್ತಿಯುತ "ಉಪಸ್ಥಿತಿ" ಯಿಂದ ಪರವಶಗೊಳಿಸಿತು. ಸತ್ಸಂಗದ ನಂತರ ಮೀರಾ ಮಾತಾ ಬಹಳ ಸೌಜನ್ಯತೆಯಿಂದ ನಮ್ಮನ್ನು ಬರಮಾಡಿಕೊಂಡರು ಮತ್ತು ಕೆಲವು ಕ್ಷಣಗಳ ನಂತರ ನನಗೆ, ಮೌಂಟ್ ವಾಷಿಂಗ್ಟನ್ ಮದರ್ ಸೆಂಟರ್‌ಗೆ ಹೋಗಿ ಅವರ ಮಗಳು ಮೃಣಾಲಿನಿ ಮಾತಾ ಅವರನ್ನು ಭೇಟಿಯಾಗುವಂತೆ ಸೂಚಿಸಿದರು. ನಾವು ಅಲ್ಲಿಗೆ ಹೋದೆವು ಹಾಗೂ ಸಂನ್ಯಾಸಿ ಶ್ರೇಣಿಯ ಬಗ್ಗೆ ಅರಿತುಕೊಂಡೆವು, ನಾನು ಮೂರನೇ ಬಾರಿಗೆ “ಸೆರೆಹಿಡಿಯಲ್ಪಟ್ಟೆ” — ಮೊದಲನೆಯದು ಪರಮಹಂಸ ಯೋಗಾನಂದರಿಂದ, ಎರಡನೆಯದು ಯೋಗಿಯ ಆತ್ಮಕಥೆಯಿಂದ ಮತ್ತು ಈಗ, ಭಗವಂತನಿಗೆ ಮಾತ್ರ ಸಮರ್ಪಿತವಾದ ಪರಿತ್ಯಾಗದ ಜೀವನದ ಆದರ್ಶದಿಂದ.

ಮಾರ್ಚ್ 6 ರಂದು ಪರಮಹಂಸಜಿಯವರ ಹೆಸರನ್ನು ಕೇಳಿದಾಗ ನನ್ನ ಮೇಲೆ ಪರಿಣಾಮ ಬೀರಿದ ಕಥೆಯನ್ನು ವಿವರಿಸಿದ ನಂತರ, ಅವರು ಅಂದು ಬೆಳಿಗ್ಗೆ ಹೋಟೆಲ್‌ನಲ್ಲಿ ಭಾರತದ ರಾಯಭಾರಿ, ಘನತೆವೆತ್ತ ಬಿನಯ್ ಆರ್. ಸೇನ್ ಅವರ ಉಪಹಾರ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ನನಗೆ ತಿಳಿಯಿತು. ಆ ಉಪಹಾರ ಸಮಾರಂಭ ನನ್ನ ಕಛೇರಿಯ ಪಕ್ಕದ ಕೋಣೆಯಲ್ಲೇ ನಡೆಯಿತು. ನಾನು ಕರೆ ಸ್ವೀಕರಿಸಿ, ಅವರ ಹೆಸರನ್ನು ಕೇಳಿದ ಸಮಯದಲ್ಲಿ ಗುರುಗಳು ನನ್ನ ಮೇಜಿನಿಂದ, ಗೋಡೆಯ ಇನ್ನೊಂದು ಬದಿಯಲ್ಲಿ ಕುಳಿತಿದ್ದರು.

ಗುರುಗಳು ತಮ್ಮ ಅತ್ಯಮೋಘ ಆತ್ಮಕಥೆಯ ಮೂಲಕ “ತಮ್ಮವರಾದ” ಎಲ್ಲರನ್ನೂ ಕರೆಯುತ್ತಿದ್ದಾರೆ. ನಮ್ಮಲ್ಲಿ ಕೆಲವರು ಪ್ರತಿಕ್ರಿಯಿಸಲು ಸ್ವಲ್ಪ ಹೆಚ್ಚೇ ಸಮಯ ತೆಗೆದುಕೊಳ್ಳುತ್ತೇವೆ ಮತ್ತು ನನಗಾದಂತೆ ತಲೆಯ ಮೇಲೆ ಹೊಡೆಸಿಕೊಳ್ಳಬೇಕಾಗುತ್ತದೆ! ಆದರೆ ಅವರ “ಧ್ವನಿ”ಯನ್ನು ಕೇಳುವ ಮತ್ತು ಅವರ ಕಹಳೆಯ ಕರೆಗೆ ಓಗೊಡುವ ಲಕ್ಷಾಂತರ ಜನರು ಎಷ್ಟು ಧನ್ಯರು.

ಇದನ್ನು ಹಂಚಿಕೊಳ್ಳಿ