ಶ್ರೀ ಶ್ರೀ ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ ಉಪಯುಕ್ತ ಚಿಂತನೆಗಳು
ಭಗವಂತನು ಆರೋಗ್ಯ, ಸಮೃದ್ಧಿ, ಜ್ಞಾನ, ಹಾಗೂ ಶಾಶ್ವತ ಆನಂದದ ಕಾರಂಜಿ. ನಾವು ನಮ್ಮ ಜೀವನವನ್ನು ಭಗವಂತನ ಸಂಸ್ಪರ್ಶದಿಂದ ಪರಿಪೂರ್ಣ ಮಾಡಿಕೊಳ್ಳುತ್ತೇವೆ. ಅವನಿಲ್ಲದೇ ಜೀವನ ಪರಿಪೂರ್ಣವಾಗುವುದಿಲ್ಲ. ನಿಮಗೆ ಜೀವನ, ಶಕ್ತಿ ಹಾಗೂ ಜ್ಞಾನವನ್ನು ದಯಪಾಲಿಸುತ್ತಿರುವ ಸರ್ವಸಮರ್ಥನ ಶಕ್ತಿಯ ಮೇಲೆ ನಿಮ್ಮ ಗಮನವನ್ನಿರಿಸಿ. ನಿರಂತರ ಸತ್ಯವು ನಿಮ್ಮ ಮನಸ್ಸಿಗೆ ಹರಿದುಬರಲಿ, ನಿರಂತರ ಶಕ್ತಿಯು ನಿಮ್ಮ ದೇಹದೊಳಗೆ ಹರಿದುಬರಲಿ, ಹಾಗೂ ನಿರಂತರ ಆನಂದವು ನಿಮ್ಮ ಆತ್ಮಕ್ಕೆ ಹರಿದುಬರಲಿ ಎಂದು ಪ್ರಾರ್ಥಿಸಿ. ಮುಚ್ಚಿದ ಕಣ್ಣುಗಳ ಕತ್ತಲೆಯ ಹಿಂದೆಯೇ ವಿಶ್ವದ ಅದ್ಭುತ ಶಕ್ತಿಗಳು, ಹಾಗೂ ಎಲ್ಲಾ ಮಹಾನ್ ಸಂತರು; ಹಾಗೂ ಅಂತ್ಯವಿಲ್ಲದ ಅನಂತತೆಯಿರುವುದು. ಧ್ಯಾನ ಮಾಡಿ, ಆಗ ನೀವು ಸರ್ವವ್ಯಾಪಿ ಪರಬ್ರಹ್ಮನ ಸತ್ಯವನ್ನು ಅರಿಯುವಿರಿ ಹಾಗೂ ಅದರ ನಿಗೂಢ ಕಾರ್ಯಗಳನ್ನು ನಿಮ್ಮ ಜೀವನದಲ್ಲಿ ಹಾಗೂ ಸೃಷ್ಟಿಯ ಎಲ್ಲಾ ವಿಜೃಂಭಣೆಗಳಲ್ಲಿ ಕಾಣುವಿರಿ.
— Journey to Self-realization
ನಿಮ್ಮನ್ನು ಅಜ್ಞಾನದ ಅಂಧಕಾರದಿಂದ ಎಚ್ಚರಗೊಳಿಸಿಕೊಳ್ಳಿ. ಮಾಯೆಯೆಂಬ ನಿದ್ರೆಯಲ್ಲಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರುವಿರಿ. ಎದ್ದೇಳಿ! ಕಣ್ಣು ತೆರೆಯಿರಿ, ಭಗವಂತನ ಮಹಿಮೆಯನ್ನು — ಎಲ್ಲಾ ವಸ್ತುಗಳ ಮೇಲೆ ಭಗವಂತನ ಬೆಳಕು ಹರಡುತ್ತಿರುವ ಅಗಾಧ ದೃಶ್ಯವನ್ನು ಕಾಣುವಿರಿ. ನಾನು ನಿಮಗೆ ದೈವೀ ವಾಸ್ತವವಾದಿಗಳಾಗಲು ಹೇಳುತ್ತಿದ್ದೇನೆ, ಆಗ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಭಗವಂತನಲ್ಲಿ ಪಡೆಯುವಿರಿ.
— The Divine Romance
ಎಲ್ಲಾ ಸಂಪತ್ತು ಬ್ಯಾಂಕ್‌ಗಳು, ಕಾರ್ಖಾನೆಗಳು ಮತ್ತು ಉದ್ಯೋಗಗಳಿಂದ ಹಾಗೂ ವೈಯಕ್ತಿಕ ಸಾಮರ್ಥ್ಯದಿಂದ ಬರುತ್ತದೆ ಎಂದು ಲಕ್ಷಾಂತರ ಜನರು ಭಾವಿಸುತ್ತಾರೆ. ಆದರೂ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಮಹಾ ಖಿನ್ನತೆಗಳು, ಜೀವನದ ಭೌತಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಲೌಕಿಕ ಹಂತಗಳನ್ನು ನಿಯಂತ್ರಿಸುವಂತಹ ಗೊತ್ತಿರುವ ಭೌತಿಕ ನಿಯಮಗಳ ಹೊರತಾಗಿ ದಿವ್ಯ ನಿಯಮಗಳೂ ಇವೆ ಎಂದು ಸಾಬೀತುಪಡಿಸುತ್ತವೆ. ಪ್ರತಿದಿನ ಆರೋಗ್ಯವಂತರಾಗಿರಲು, ಶ್ರೀಮಂತರಾಗಿರಲು, ಜಾಣರಾಗಿರಲು ಮತ್ತು ಸಂತೋಷದಿಂದಿರಲು ಶ್ರಮಿಸಿ; ಇತರರ ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ಕಿತ್ತುಕೊಳ್ಳುವ ಮೂಲಕ ಅಲ್ಲ, ಬದಲಿಗೆ ಅವರ ಸಂತೋಷ ಮತ್ತು ಯೋಗಕ್ಷೇಮವನ್ನು ನಿಮ್ಮದರೊಂದಿಗೆ ಸೇರಿಸುವ ಮೂಲಕ. ಜನಗಳ, ಕುಟುಂಬದ ಸದಸ್ಯರ ಮತ್ತು ರಾಷ್ಟ್ರಗಳ ಸಂತೋಷವು ಸಂಪೂರ್ಣವಾಗಿ ಪರಸ್ಪರ ಸಹಕಾರ ಅಥವಾ ನಿಸ್ವಾರ್ಥತೆಯ ನಿಯಮದ ಮೇಲೆ ಮತ್ತು ಈ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಜೀವಿಸುವುದರ ಮೇಲೆ ನಿರ್ಭರವಾಗಿರುತ್ತದೆ: “ತಂದೆಯೇ, ನಾವು ಸದಾ ನಿನ್ನನ್ನು ಸ್ಮರಿಸುತ್ತಿರುವಂತೆ ನಮ್ಮನ್ನು ಆಶೀರ್ವದಿಸು. ಎಲ್ಲ ಅನುಗ್ರಹಗಳೂ ನಿನ್ನಿಂದ ಹರಿಯುತ್ತವೆ ಎಂಬುದನ್ನು ನಾವು ಮರೆಯದಿರಲಿ.”
— Yogoda Satsanga Lessons
ಜಾಗತಿಕ ಕ್ರಾಂತಿ ನಡೆಯುತ್ತಿದೆ. ಇದು ಹಣಕಾಸಿನ ವ್ಯವಸ್ಥೆಯನ್ನು ಬದಲಾಯಿಸುತ್ತದೆ. ಅಮೆರಿಕದ ಕರ್ಮದ ಅಂತರಿಕ್ಷದಲ್ಲಿ ನಾನು ಒಂದು ಸುಂದರವಾದ ಚಿಹ್ನೆಯನ್ನು ನೋಡುತ್ತಿದ್ದೇನೆ: ಪ್ರಪಂಚದಲ್ಲಿ ಏನೇ ಆದರೂ, ಅವಳು ಇತರ ಅನೇಕ ದೇಶಗಳಿಗಿಂತ ಉತ್ತಮವಾಗಿರುತ್ತಾಳೆ. ಆದರೂ ಅಮೆರಿಕಾವು ವ್ಯಾಪಕವಾದ ಕ್ಲೇಶ, ಸಂಕಷ್ಟ ಮತ್ತು ಬದಲಾವಣೆಗಳನ್ನು ಅನುಭವಿಸುತ್ತದೆ….
ಇಡೀ ಜಗತ್ತಿಗೇ ಹೊದಿಸುವಷ್ಟು ಹಣವಿದೆ, ಮತ್ತು ಇಡೀ ಜಗತ್ತನ್ನು ಪೋಷಿಸುವಷ್ಟು ಆಹಾರವಿದೆ. ಸರಿಯಾದ ವಿತರಣೆ ಅಗತ್ಯ. ಜನರು ಸ್ವಾರ್ಥಿಗಳಾಗಿರದಿದ್ದರೆ, ಯಾರೂ ಹಸಿವಿನಿಂದಿರುವುದಿಲ್ಲ ಅಥವಾ ನಿರ್ಗತಿಕರಾಗಿರುವುದಿಲ್ಲ. ಮನುಷ್ಯನು ಭ್ರಾತೃತ್ವದತ್ತ ಗಮನ ಹರಿಸಬೇಕು. ಪ್ರತಿಯೊಬ್ಬರನ್ನೂ ತನ್ನವರಂತೆಯೇ ಪ್ರೀತಿಸುತ್ತ, ಪ್ರತಿಯೊಬ್ಬರೂ ಎಲ್ಲರಿಗಾಗಿ ಬದುಕಬೇಕು. ಮೌಂಟ್ ವಾಷಿಂಗ್ಟನ್‌ನಲ್ಲಿ ಯಾರಾದರೂ ಹಸಿವಿನಿಂದ ಬಳಲುತ್ತಿದ್ದರೆ, ನಾವೆಲ್ಲರೂ ಒಟ್ಟಾಗಿ ಸೇರಿ ಅವನನ್ನು ನೋಡಿಕೊಳ್ಳುತ್ತೇವೆ ಎಂದು ನನಗೆ ಖಾತ್ರಿಯಿದೆ. ಎಲ್ಲ ರಾಷ್ಟ್ರಗಳ ಎಲ್ಲ ಜನರೂ ಇಂತಹ ಸಹಭಾಗಿತ್ವದ ಮನೋಭಾವದಲ್ಲಿ ಬದುಕಬೇಕು.
ನನ್ನ ಸ್ವಂತದ್ದೇನೂ ಇಲ್ಲ, ಆದರೂ ನನಗೆ ಹಸಿವಾದಾಗ ಊಟ ಕೊಡಲು ಜಗತ್ತಿನಲ್ಲಿ ಸಾವಿರಾರು ಜನರಿದ್ದಾರೆ, ಏಕೆಂದರೆ ನಾನು ಸಾವಿರಾರು ಜನರಿಗೆ ಕೊಟ್ಟಿದ್ದೇನೆ. ತಾನು ಉಪವಾಸ ಬೀಳುವ ಸಾಧ್ಯತೆಯನ್ನು ಲೆಕ್ಕಿಸದೆ ಅವಶ್ಯಕತೆಯಿರುವ ಇತರ ವ್ಯಕ್ತಿಯ ಬಗ್ಗೆ ಯೋಚಿಸುವ ಯಾರಿಗೇ ಆದರೂ ಇದೇ ನಿಯಮ ಅನ್ವಯಿಸುತ್ತದೆ….— World Crisis
ಕೇವಲ ತಮ್ಮ ಅಭ್ಯುದಯವನ್ನು ಮಾತ್ರ ಅರಸುವವರು ಕೊನೆಯಲ್ಲಿ ಬಡವರಾಗೇ ಆಗುತ್ತಾರೆ, ಅಥವಾ ಮಾನಸಿಕ ಅಸಾಮರಸ್ಯದಿಂದ ಬಳಲುತ್ತಾರೆ; ಆದರೆ ಇಡೀ ಜಗತ್ತೇ ತಮ್ಮದೆಂದು ಭಾವಿಸುವವರು, ನಿಜವಾದ ಕಳಕಳಿಯಿಂದ ಸಮೂಹದ ಅಥವಾ ಜಗತ್ತಿನ ಅಭ್ಯುದಯಕ್ಕಾಗಿ ಕೆಲಸ ಮಾಡುವವರು…. ನ್ಯಾಯಸಮ್ಮತವಾದ ವೈಯಕ್ತಿಕ ಅಭ್ಯುದಯವನ್ನು ಕಂಡುಕೊಳ್ಳುತ್ತಾರೆ. ಇದೊಂದು ಖಚಿತ ಮತ್ತು ರಹಸ್ಯ ನಿಯಮ.
— Yogoda Satsanga Lessons
ಬರಲಿರುವ ಜಾಗತಿಕ ಬಿಕ್ಕಟ್ಟನ್ನು ಹೇಗೆ ಎದುರಿಸುವಿರಿ? ಉತ್ತಮ ಮಾರ್ಗವೆಂದರೆ ಸರಳ ಜೀವನ ಮತ್ತು ಉನ್ನತ ಚಿಂತನೆಯನ್ನು ಅಳವಡಿಸಿಕೊಳ್ಳುವುದು….
ಸೂಕ್ತವಾದ ವಾಸಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ, ಆದರೆ ನಿಮಗೆ ನಿಜವಾಗಿಯೂ ಬೇಕಾದುದಕ್ಕಿಂತ ದೊಡ್ಡದನ್ನಲ್ಲ ಮತ್ತು ಸಾಧ್ಯವಾದರೆ ತೆರಿಗೆಗಳು ಮತ್ತು ಬದುಕುವ ಇತರ ವೆಚ್ಚಗಳು ಹೆಚ್ಚಿರದ ಪ್ರದೇಶದಲ್ಲಿ. ನಿಮ್ಮ ಬಟ್ಟೆಗಳನ್ನು ನೀವೇ ಹೊಲಿದುಕೊಳ್ಳಿ; ನಿಮ್ಮ ಆಹಾರವನ್ನು ನೀವೇ ರಕ್ಷಿಸಿಡಿ. ನಿಮ್ಮ ತರಕಾರಿಯನ್ನು ಹಿತ್ತಲಲ್ಲಿ ನೀವೇ ಬೆಳೆಸಿಕೊಳ್ಳಿ. ಮತ್ತು ಸಾಧ್ಯವಾದರೆ, ಮೊಟ್ಟೆಗಳಿಗಾಗಿ ಕೆಲವು ಕೋಳಿಗಳನ್ನು ಸಾಕಿ. ತೋಟದಲ್ಲಿ ನೀವೇ ಕೆಲಸ ಮಾಡಿ, ಇಲ್ಲದಿದ್ದರೆ, ಮಾಲಿಗೆ ಸಂಬಳ ಕೊಡುವುದರಲ್ಲಿ ನೀವು ಹಣ ಕಳೆದುಕೊಳ್ಳುವಿರಿ. ಹುಸಿ ಮತ್ತು ದುಬಾರಿ ಸಂತೋಷಗಳನ್ನು ಅರಸದೆ ಜೀವನವನ್ನು ಸರಳವಾಗಿ ಇರಿಸಿಕೊಳ್ಳಿ ಮತ್ತು ಭಗವಂತ ಕೊಟ್ಟುದನ್ನು ಆನಂದಿಸಿ. ಉಪಯುಕ್ತ ಪುಸ್ತಕಗಳನ್ನು ಓದಲು, ಧ್ಯಾನ ಮಾಡಲು ಮತ್ತು ಜಟಿಲವಲ್ಲದ ಜೀವನವನ್ನು ಆನಂದಿಸಲು ನಿಮ್ಮ ಉಚಿತ ಸಮಯವನ್ನು ಬಳಸಿಕೊಳ್ಳಿ. ದೊಡ್ಡ ಮನೆ, ಎರಡು ಕಾರುಗಳು ಮತ್ತು ನೀವು ಪೂರೈಸಲು ಸಾಧ್ಯವಾಗದಂಥ ಸಮಯದ ಹಣ ಸಂದಾಯಗಳು ಮತ್ತು ಅಡಮಾನಕ್ಕಿಂತ, ಸರಳ ಜೀವನ, ಕಡಿಮೆ ಚಿಂತೆಗಳು ಮತ್ತು ಭಗವಂತನನ್ನು ಅರಸಲು ಸಮಯವನ್ನು ಹೊಂದಿರುವುದು ಉತ್ತಮವಲ್ಲವೆ? ಮನುಷ್ಯ ಮತ್ತೆ ಕೃಷಿ ಭೂಮಿಗೆ ಮರಳಬೇಕು; ಇದು ಆಗೇ ಆಗುತ್ತದೆ. ಇದು ಹಾಗಾಗುವುದಿಲ್ಲ ಎಂದು ನೀವು ಭಾವಿಸಿದರೆ, ನಿಮ್ಮದು ತಪ್ಪು ತಿಳುವಳಿಕೆ. ಆದರೆ ನಿಮ್ಮ ಮನೆ ಮತ್ತು ಉದ್ಯೋಗ ಎಲ್ಲೇ ಇದ್ದರೂ, ಐಷಾರಾಮಿಗಳನ್ನು ಕಡಿಮೆ ಮಾಡಿ, ಕಡಿಮೆ ಬೆಲೆಯ ಬಟ್ಟೆಗಳನ್ನು ಖರೀದಿಸಿ, ನಿಮಗೆ ನಿಜವಾಗಿಯೂ ಬೇಕಾಗಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ, ನಿಮ್ಮ ಸ್ವಂತ ಆಹಾರವನ್ನು ಬೆಳೆದುಕೊಳ್ಳಿ ಮತ್ತು ಹೆಚ್ಚಿನ ಭದ್ರತೆಗಾಗಿ ನಿಯತವಾಗಿ ಹಣವನ್ನು ತೆಗೆದಿರಿಸಿ.— World Crisis
ಈ ಜಗತ್ತಿನಲ್ಲಿ ಗಲಭೆಗಳು ಮತ್ತು ಕ್ಷೋಭೆಗಳು ಇದ್ದೇ ಇರುತ್ತವೆ. ನಿಮಗೇತರ ಚಿಂತೆ? ಭಗವಂತನಾಸರೆಗೆ ಹೋಗಿ, ಮಹಾತ್ಮರು ಹೋದಲ್ಲಿಗೆ, ಎಲ್ಲಿಂದ ಅವರು ಜಗತ್ತನ್ನು ವೀಕ್ಷಿಸುತ್ತ ಜಗತ್ತಿಗೆ ಸಹಾಯ ಮಾಡುತ್ತಿದ್ದಾರೋ ಅಲ್ಲಿಗೆ. ನಿಮಗೆ ಶಾಶ್ವತ ಸುರಕ್ಷತೆ ದೊರೆಯುತ್ತದೆ, ನಿಮಗೆ ಮಾತ್ರವಲ್ಲ, ನಮ್ಮ ಪ್ರಭು ಹಾಗೂ ತಂದೆಯಿಂದ ನಿಮ್ಮ ವಶಕ್ಕೆ ಜೋಪಾನ ಮಾಡಲೆಂದು ನೀಡಲ್ಪಟ್ಟ ಪ್ರೀತಿಪಾತ್ರರೆಲ್ಲರಿಗೂ.
— Yogoda Satsanga Lessons
ಪ್ರಭುವನ್ನು ನಿಮ್ಮ ಆತ್ಮದ ಮಾರ್ಗದರ್ಶಕನನ್ನಾಗಿಸಿಕೊಳ್ಳಿ. ಹಾಗೂ ನೀವು ಜೀವನದಲ್ಲಿ ನೆರಳಿನ ಹಾದಿಯಲ್ಲಿ ಸಾಗುವಾಗ ಅವನನ್ನು ನಿಮ್ಮ ಶೋಧಕ ದೀಪವನ್ನಾಗಿಸಿಕೊಳ್ಳಿ. ಅಜ್ಞಾನದ ರಾತ್ರಿಯಲ್ಲಿ ಅವನು ನಿಮ್ಮ ಚಂದ್ರಮ. ಎಚ್ಚರವಾಗಿದ್ದಾಗ ಅವನು ನಿಮ್ಮ ಸೂರ್ಯ. ಹಾಗೂ ಮರ್ತ್ಯ ಅಸ್ತಿತ್ವದ ಕರಾಳ ಸಮುದ್ರದ ಮೇಲೆ ಅವನು ನಿಮ್ಮ ಧ್ರುವತಾರೆ. ಅವನ ಮಾರ್ಗದರ್ಶನವನ್ನು ಅರಸಿ. ಪ್ರಪಂಚವು ತನ್ನ ಏರಿಳಿತಗಳೊಂದಿಗೆ ಹೀಗೆಯೇ ಮುಂದುವರೆಯುತ್ತಿರುತ್ತದೆ. ಸರಿಯಾದ ಮಾರ್ಗದರ್ಶನಕ್ಕಾಗಿ ನಾವೆತ್ತ ನೋಡುವುದು? ನಮ್ಮ ರೂಢಿಗತ ಅಭ್ಯಾಸಗಳು ಹಾಗೂ ನಮ್ಮ ಕುಟುಂಬದ, ನಮ್ಮ ದೇಶದ ಮತ್ತು ನಮ್ಮ ಜಗತ್ತಿನ ಪರಿಸರದ ಪ್ರಭಾವಗಳಿಂದಾಗಿ ನಮ್ಮೊಳಗೇಳುವ ಪೂರ್ವಗ್ರಹಗಳತ್ತ ಅಲ್ಲ; ಆದರೆ ನಮ್ಮೊಳಗಿನ ಸತ್ಯದ ಮಾರ್ಗದರ್ಶಕ ದನಿಯೆಡೆಗೆ.
— The Divine Romance
ನೆನಪಿರಲಿ, ಮನಸ್ಸಿನ ಕೋಟಿ ತರ್ಕಗಳಿಗಿಂತ ದೊಡ್ಡದೆಂದರೆ ನಿಮ್ಮೊಳಗೆ ಶಾಂತತೆಯ ಅನುಭವವಾಗುವವರೆಗೆ ಕುಳಿತು ಧ್ಯಾನ ಮಾಡುವುದು. ನಂತರ ಪ್ರಭುವಿಗೆ ಹೇಳಿ, “ನಾನು ಲಕ್ಷೋಪಲಕ್ಷ ವಿಧವಾಗಿ ಯೋಚಿಸಿದರೂ, ನಾನೊಬ್ಬನೇ ನನ್ನ ಸಮಸ್ಯೆಯನ್ನು ಬಗೆಹರಿಸಲಾರೆ, ಆದರೆ ಅದನ್ನು ನಿನ್ನ ಕೈಗಳಲ್ಲಿಟ್ಟು, ಮೊದಲು ನಿನ್ನ ಮಾರ್ಗದರ್ಶನವನ್ನು ಕೋರಿ, ನಂತರ ಸಂಭಾವ್ಯ ಪರಿಹಾರಕ್ಕಾಗಿ ಹಲವಾರು ದೃಷ್ಟಿಕೋನಗಳಿಂದ ಯೋಚಿಸುವ ಮೂಲಕ ಬಗೆಹರಿಸಿಕೊಳ್ಳಬಲ್ಲೆ.” ತಮಗೆ ತಾವು ಸಹಾಯ ಮಾಡಿಕೊಳ್ಳುವವರಿಗೆ ಭಗವಂತ ಸಹಾಯ ಮಾಡುತ್ತಾನೆ. ಧ್ಯಾನದಲ್ಲಿ ಭಗವಂತನ ಪ್ರಾರ್ಥನೆ ಮಾಡುವ ಮೂಲಕ ನಿಮ್ಮ ಮನಸ್ಸು ಶ್ರದ್ಧೆಯಿಂದ ತುಂಬಿ ಶಾಂತವಾಗಿದ್ದರೆ, ನಿಮಗೆ ನಿಮ್ಮ ಸಮಸ್ಯೆಗಳಿಗೆ ಹಲವಾರು ಉತ್ತರಗಳು ಕಾಣಿಸಿಕೊಳ್ಳುತ್ತವೆ; ನಿಮ್ಮ ಮನಸ್ಸು ಶಾಂತವಾಗಿರುವುದರಿಂದ ಅವುಗಳಲ್ಲಿ ನಿಮಗೆ ಅತ್ಯುತ್ತಮವಾದ ಪರಿಹಾರವನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಆ ಪರಿಹಾರಕ್ಕೆ ತಕ್ಕಂತೆ ನಡೆದುಕೊಳ್ಳಿ. ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಧರ್ಮದ ವಿಜ್ಞಾನವನ್ನು ಬಳಸಿಕೊಳ್ಳುವುದೆಂದರೆ ಇದೇ.
— The Divine Romance
ಭಯವು ಹೃದಯದಿಂದ ಬರುತ್ತದೆ. ನಿಮಗೆ ಯಾವುದೋ ಒಂದು ರೋಗದ ಅಥವಾ ಅಪಘಾತದ ಭಯ ಆವರಿಸಿಕೊಂಡರೆ, ಆಳವಾಗಿ, ನಿಧಾನವಾಗಿ ಮತ್ತು ಲಯಬದ್ಧವಾಗಿ ಅನೇಕ ಬಾರಿ ಉಚ್ಛ್ವಾಸ, ನಿಶ್ವಾಸ ಮಾಡುತ್ತ, ಪ್ರತಿ ನಿಶ್ವಾಸದೊಂದಿಗೆ ದೇಹವನ್ನು ಸಡಿಲಿಸಿ. ಇದು ರಕ್ತಪರಿಚಲನೆ ಸಾಮಾನ್ಯ ಸ್ಥಿತಿಗೆ ಬರಲು ನೆರವಾಗುತ್ತದೆ. ನಿಮ್ಮ ಹೃದಯ ನಿಜವಾಗಿಯೂ ಶಾಂತವಾಗಿದ್ದರೆ ನಿಮಗೆ ಭಯದ ಅನುಭವವಾಗುವುದೇ ಇಲ್ಲ.
— Living Fearlessly
ಭಗವಂತ ನಮಗೆ ರಕ್ಷಣೆಯ ಒಂದು ಅತ್ಯಮೋಘ ಸಾಧನವನ್ನು ಕೊಟ್ಟಿದ್ದಾನೆ — ಮಷಿನ್‌ಗನ್, ವಿದ್ಯುತ್ತು, ವಿಷಕಾರಿ ಅನಿಲ ಅಥವಾ ಯಾವುದೇ ಔಷಧಿಗಿಂತ ಪ್ರಬಲವಾದುದು, ಅದೇ ಮನಸ್ಸು. ಗಟ್ಟಿ ಮಾಡಬೇಕಾಗಿರುವುದು ಮನಸ್ಸನ್ನು….ಬದುಕಿನ ಸಾಹಸದ ಒಂದು ಮುಖ್ಯ ಭಾಗವೆಂದರೆ ಮನಸ್ಸನ್ನು ಹಿಡಿದಿರಿಸುವುದು, ಹಾಗೂ ಆ ನಿಯಂತ್ರಿತ ಮನಸ್ಸನ್ನು ಸತತವಾಗಿ ಭಗವಂತನಲ್ಲಿರಿಸುವುದು. ಇದು ಸುಖೀ ಮತ್ತು ಯಶಸ್ವೀ ಅಸ್ತಿತ್ವದ ರಹಸ್ಯ….ಅದು ಮಾನಸಿಕ ಶಕ್ತಿಯನ್ನು ಪ್ರಯೋಗಿಸುವುದರಿಂದ ಮತ್ತು ಧ್ಯಾನದಲ್ಲಿ ಮನಸ್ಸನ್ನು ಭಗವಂತನಲ್ಲಿ ಶ್ರುತಿಗೊಳಿಸುವುದರಿಂದ ಬರುತ್ತದೆ….ರೋಗ, ನಿರಾಶೆಗಳು ಮತ್ತು ಅನಾಹುತಗಳನ್ನು ಜಯಿಸುವ ಅತ್ಯಂತ ಸುಲಭದ ಮಾರ್ಗವೆಂದರೆ ನಿರಂತರವಾಗಿ ಭಗವಂತನೊಂದಿಗೆ ಶ್ರುತಿಗೊಂಡಿರುವುದು.
— Man's Eternal Quest
ನಿಜವಾದ ಸುಖ, ಶಾಶ್ವತ ಸುಖ ದೊರೆಯುವುದು ಭಗವಂತನಲ್ಲಿ, “ಯಾರನ್ನು ಹೊಂದುವುದರಿಂದ ಬೇರಾವ ಲಾಭವೂ ದೊಡ್ಡದೆನಿಸುವುದಿಲ್ಲವೊ ಅವನಲ್ಲಿ ಮಾತ್ರ.” ನಮ್ಮ ಎಲ್ಲಾ ಭಯಗಳಿಂದ ಏಕಮಾತ್ರ ಸುರಕ್ಷತೆ, ಏಕಮಾತ್ರ ಆಸರೆ, ಏಕಮಾತ್ರ ವಿಮೋಚನೆ ಇರುವುದು ಅವನಲ್ಲಿಯೇ. ನಿಮಗೆ ಈ ಜಗತ್ತಿನಲ್ಲಿ ಬೇರಾವ ರಕ್ಷಣೆಯೂ ಇಲ್ಲ, ಬೇರಾವ ಸ್ವಾತಂತ್ರ್ಯವೂ ಇಲ್ಲ. ನಿಜವಾದ ಸ್ವಾತಂತ್ರ್ಯವಿರುವುದು ಭಗವಂತನಲ್ಲಿ ಮಾತ್ರ. ಆದ್ದರಿಂದ ಬೆಳಿಗ್ಗೆ ಮತ್ತು ರಾತ್ರಿ ಧ್ಯಾನದಲ್ಲಿ, ಅಷ್ಟೇ ಅಲ್ಲದೆ ಇಡೀ ದಿನ ನೀವು ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲೂ ಅವನನ್ನು ಸಂಪರ್ಕಿಸಲು ತೀವ್ರವಾಗಿ ಪ್ರಯತ್ನಿಸಿ. ಭಗವಂತನಿದ್ದಲ್ಲಿ ಭಯವಿಲ್ಲ, ದುಃಖವಿಲ್ಲ ಎಂದು ಯೋಗ ಬೋಧಿಸುತ್ತದೆ. ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಯಶಸ್ವೀ ಯೋಗಿಯು ಅಚಲನಾಗಿ ನಿಲ್ಲಬಲ್ಲ; “ಪ್ರಭು, ನಾನೆಲ್ಲಿರುವೆನೋ ಅಲ್ಲಿಗೆ ನೀನು ಬರಲೇಬೇಕು” ಎಂಬ ಮನವರಿಕೆಯಲ್ಲಿ ಅವನು ಸುರಕ್ಷಿತನು.
— The Divine Romance
ಆತ್ಮಗಳ ಒಕ್ಕೂಟಕ್ಕಾಗಿ ಮತ್ತು ಸಂಯುಕ್ತ ವಿಶ್ವಕ್ಕಾಗಿ ನಾವು ನಮ್ಮ ಹೃದಯದಲ್ಲಿ ಪ್ರಾರ್ಥಿಸೋಣ. ಜನಾಂಗ, ಧರ್ಮ, ವರ್ಣ, ವರ್ಗ ಮತ್ತು ರಾಜಕೀಯ ಪೂರ್ವಗ್ರಹಗಳಿಂದ ನಾವು ವಿಭಜಿಸಲ್ಪಟ್ಟಿದ್ದೇವೆ ಎಂಬಂತೆ ಕಂಡರೂ, ಒಬ್ಬನೇ ಭಗವಂತನ ಮಕ್ಕಳಾಗಿ ನಾವು ನಮ್ಮ ಆತ್ಮಗಳಲ್ಲಿ ಭ್ರಾತೃತ್ವ ಮತ್ತು ವಿಶ್ವ ಐಕ್ಯತೆಯನ್ನು ಭಾವಿಸಲು ಸಮರ್ಥರಾಗಿದ್ದೇವೆ. ಜ್ಞಾನೋದಯ ಹೊಂದಿದ ಮಾನವನ ಆತ್ಮಸಾಕ್ಷಿಯ ಮೂಲಕ, ಭಗವಂತನಿಂದ ಮಾರ್ಗದರ್ಶಿಸಲ್ಪಡುವ ಪ್ರತಿಯೊಂದು ರಾಷ್ಟ್ರವು ಒಂದು ಉಪಯುಕ್ತ ಭಾಗವಾಗಿರುವಂತಹ ಸಂಯುಕ್ತ ವಿಶ್ವದ ಸೃಷ್ಟಿಗೆ ನಾವು ಕೆಲಸ ಮಾಡೋಣ. ನಮ್ಮ ಹೃದಯದಲ್ಲಿ ನಾವೆಲ್ಲರೂ ದ್ವೇಷ ಮತ್ತು ಸ್ವಾರ್ಥದಿಂದ ಮುಕ್ತರಾಗಲು ಕಲಿಯಲು ಸಾಧ್ಯವಿದೆ. ರಾಷ್ಟ್ರಗಳು ಸುಂದರವಾದ ಹೊಸ ನಾಗರಿಕತೆಯ ದ್ವಾರದ ಮೂಲಕ ಕೈಕೈ ಹಿಡಿದು ಸಾಗುವಂತಾಗಲು ಅವುಗಳ ನಡುವೆ ಸಾಮರಸ್ಯಕ್ಕಾಗಿ ನಾವು ಪ್ರಾರ್ಥಿಸೋಣ.
— Metaphysical Meditations
ಎಲ್ಲಕ್ಕಿಂತ ಹೆಚ್ಚಾಗಿ ನೀವು ಧ್ಯಾನದ ಮೂಲಕ ಭಗವಂತನನ್ನು ಅರಸುವುದರಲ್ಲಿ ನಿರತರಾಗಬೇಕೆಂದು ನಾನು ಒತ್ತಿಹೇಳುತ್ತೇನೆ….ಈ ಜೀವನದ ನೆರಳುಗಳ ಅಡಿಯಲ್ಲೇ ಭಗವಂತನ ಅದ್ಭುತ ಬೆಳಕಿದೆ. ಈ ವಿಶ್ವವು ಅವನಿರುವ ಬೃಹತ್ ಮಂದಿರ. ನೀವು ಧ್ಯಾನ ಮಾಡುವಾಗ, ಎಲ್ಲೆಲ್ಲೂ ಬಾಗಿಲುಗಳು ಅವನೆಡೆಗೆ ತೆರೆಯುತ್ತಿರುವುದನ್ನು ಕಾಣುವಿರಿ. ನೀವು ಅವನ ಸಂಸರ್ಗವನ್ನು ಹೊಂದಿದಾಗ, ಆ ಆನಂದ ಮತ್ತು ಶಾಂತಿಯನ್ನು ಪ್ರಪಂಚದ ಯಾವುದೇ ವಿನಾಶಗಳು ದೂರ ಮಾಡಲಾರವು.
— World Crisis