ಪರಮಹಂಸ ಯೋಗಾನಂದರ ಜನನದ ಒಂದು ಶತಮಾನದ ನಂತರ, ಅವರು ನಮ್ಮ ಕಾಲದ ಪ್ರಮುಖ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ; ಮತ್ತು ಅವರ ಜೀವನ ಹಾಗೂ ಕಾರ್ಯದ ಪ್ರಭಾವವು ಬೆಳೆಯುತ್ತಲೇ ಇದೆ. ದಶಕಗಳ ಹಿಂದೆ ಅವರು ಪರಿಚಯಿಸಿದ ಅನೇಕ ಧಾರ್ಮಿಕ ಮತ್ತು ತಾತ್ವಿಕ ಪರಿಕಲ್ಪನೆಗಳು ಮತ್ತು ವಿಧಾನಗಳು ಈಗ ಶಿಕ್ಷಣ, ಮನೋವಿಜ್ಞಾನ, ಉದ್ಯಮ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿವೆ. ಅವು ಮಾನವ ಜೀವನದ ಹೆಚ್ಚು ಸಮಗ್ರವಾದ, ಮಾನವೀಯ ಮತ್ತು ಆಧ್ಯಾತ್ಮಿಕ ದೃಷ್ಟಿಗೆ ದೂರಗಾಮಿ ರೀತಿಯಲ್ಲಿ ಕೊಡುಗೆ ನೀಡುತ್ತಿವೆ.
ಪರಮಹಂಸ ಯೋಗಾನಂದರ ಬೋಧನೆಗಳನ್ನು ವಿವಿಧ ಕ್ಷೇತ್ರಗಳಲ್ಲಿ, ಅಂತೆಯೇ ವೈವಿಧ್ಯಮಯ ತಾತ್ವಿಕ ಮತ್ತು ಆಧ್ಯಾತ್ಮಿಕ ಆಂದೋಲನಗಳ ಪ್ರತಿಪಾದಕರಿಂದ ವ್ಯಾಖ್ಯಾನಿಸಲಾಗುತ್ತಿದೆ ಮತ್ತು ಸೃಜನಾತ್ಮಕವಾಗಿ ಅನ್ವಯಿಸಲಾಗುತ್ತಿದೆ ಎಂಬ ಸಂಗತಿಯು, ಅವರು ಕಲಿಸಿದ ಮಹಾನ್ ಪ್ರಾಯೋಗಿಕ ಉಪಯುಕ್ತತೆಯನ್ನು ಸೂಚಿಸುವುದು ಮಾತ್ರವಲ್ಲ, ಅವರು ಬಿಟ್ಟುಹೋದ ಆಧ್ಯಾತ್ಮಿಕ ಪರಂಪರೆಯು ಸಮಯ ಕಳೆದಂತೆ ದುರ್ಬಲಗೊಳ್ಳುವುದಿಲ್ಲ, ತುಂಡುತುಂಡಾಗುವುದಿಲ್ಲ ಅಥವಾ ವಿರೂಪಗೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೆಲವು ವಿಧಾನಗಳ ಅಗತ್ಯವನ್ನು ಕೂಡ ಇದು ಖಚಿತಪಡಿಸುತ್ತದೆ.
ಪರಮಹಂಸ ಯೋಗಾನಂದರ ಬಗೆಗಿನ ಮಾಹಿತಿಯ ಮೂಲಗಳ ವೈವಿಧ್ಯಗಳು ಹೆಚ್ಚುತ್ತಿರುವಂತೆ, ಓದುಗರು ಕೆಲವೊಮ್ಮೆ ಅವರ ಜೀವನ ಮತ್ತು ಬೋಧನೆಗಳನ್ನು ಪ್ರಕಾಶನವು ನಿಖರವಾಗಿ ಪ್ರಸ್ತುತಪಡಿಸುತ್ತದೆ ಎಂದು ಹೇಗೆ ನಂಬಬಹುದು ಎಂದು ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಪ್ರತಿಯಾಗಿ, ನಾವು ಹೇಳುವುದೇನೆಂದರೆ, ಪರಮಹಂಸಜಿಯವರು ತಮ್ಮ ಬೋಧನೆಗಳನ್ನು ಪ್ರಸಾರ ಮಾಡಲು ಮತ್ತು ಮುಂದಿನ ಪೀಳಿಗೆಗೆ ಅವುಗಳ ಪರಿಶುದ್ಧತೆ ಮತ್ತು ಸಮಗ್ರತೆಯನ್ನು ಕಾಪಾಡಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಅನ್ನು ಸ್ಥಾಪಿಸಿದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಸಂಸ್ಥೆಗಳ ಪ್ರಕಟಣಾ ಮಂಡಳಿಯ ಭಾಗವಾಗಿದ್ದ ಅವರ ಆಪ್ತ ಶಿಷ್ಯರನ್ನು ಪರಮಹಂಸ ಯೋಗಾನಂದರು ತಾವೇ ಸ್ವತಃ ಆಯ್ಕೆ ಮಾಡಿದರು ಮತ್ತು ತಮ್ಮ ಉಪನ್ಯಾಸಗಳು, ಬರಹಗಳು ಮತ್ತು ಯೋಗದಾ ಸತ್ಸಂಗ ಪಾಠಗಳನ್ನು ಸಿದ್ಧಪಡಿಸಲು ಹಾಗೂ ಪ್ರಕಟಿಸಲು ಅವರಿಗೆ ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡಿ ತರಬೇತಿ ನೀಡಿದರು. ತಮ್ಮ ಪ್ರೀತಿಯ ಜಗದ್ಗುರುವಿನ ಸಾರ್ವತ್ರಿಕ ಸಂದೇಶವು ತನ್ನ ಮೂಲ ಸತ್ವ ಹಾಗೂ ಯಥಾರ್ಥತೆಯನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುವಂತೆ ವೈಎಸ್ಎಸ್/ಎಸ್.ಆರ್.ಎಫ್. ಸಂಸ್ಥೆಗಳ ಪ್ರಕಟಣಾ ಮಂಡಳಿಯ ಸದಸ್ಯರು ಈ ಮಾರ್ಗದರ್ಶೀ ಸೂತ್ರಗಳನ್ನು ಪವಿತ್ರ ನ್ಯಾಸವೆಂದು ಭಾವಿಸುತ್ತಾರೆ.
ಜಗದಾದ್ಯಂತ ಆಧ್ಯಾತ್ಮಿಕ ಮತ್ತು ಲೋಕೋಪಕಾರಿ ಕಾರ್ಯವನ್ನು ಕೈಗೊಳ್ಳಲೆಂದು ಪರಮಹಂಸಜಿಯವರು ತಾವು ಸ್ಥಾಪಿಸಿದ ಈ ಸಂಸ್ಥೆಯನ್ನು ಗುರುತಿಸಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಹೆಸರು ಮತ್ತು ವೈಎಸ್ಎಸ್/ಎಸ್ಆರ್ಎಫ್ ಲಾಂಛನವನ್ನು (ಈ ಕೆಳಗೆ ತೋರಿಸಲಾಗಿದೆ) ತಾವೇ ಸೃಷ್ಟಿ ಮಾಡಿದರು. ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ಸ್ಥಾಪಿತವಾದ ಸಂಸ್ಥೆಯಿಂದ ಉಪಕ್ರಮಿಸಿರುವ ಹಾಗೂ ಅವರು ತಮ್ಮ ಬೋಧನೆಗಳನ್ನು ತಾವು ಸ್ವತಃ ಹೇಗೆ ನೀಡಬಯಸಿದ್ದರೋ ಹಾಗೆಯೇ ತಲುಪಿಸುವ ಬಗ್ಗೆ ಓದುಗರಿಗೆ ಆಶ್ವಾಸನೆ ನೀಡುತ್ತಾ ವೈಎಸ್ಎಸ್/ಎಸ್.ಆರ್.ಎಫ್. ಹೆಸರು ಹಾಗೂ ಲಾಂಛನಗಳು ಎಲ್ಲ ವೈಎಸ್ಎಸ್/ಎಸ್.ಆರ್.ಎಫ್. ಪುಸ್ತಕಗಳ, ಆಡಿಯೋ ಮತ್ತು ವೀಡಿಯೋ ಮುದ್ರಿಕೆಗಳು, ಫಿಲ್ಮ್ಗಳು ಮತ್ತು ಇತರ ಪ್ರಕಟಣೆಗಳ ಮೇಲೆ ಮುದ್ರಿತವಾಗಿರುತ್ತವೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಎಲ್ಲ ಪ್ರಮುಖ ಪ್ರಕಟಣೆಗಳು ತಮ್ಮ ಮುಖಪುಟದಲ್ಲಿ ಹೊಲೊಗ್ರಾಮ್ ಅನ್ನು ಹೊಂದಿರುತ್ತವೆ (ಬಲಕ್ಕೆ ತೋರಿಸಲಾಗಿದೆ). ಇದು ಓದುಗರಿಗೆ, ಪರಮಹಂಸ ಯೋಗಾನಂದರಿಂದ ಸ್ಥಾಪಿತವಾದ ಸಂಸ್ಥೆಯಿಂದ ಉಪಕ್ರಮಿಸಿರುವ ಬಗ್ಗೆ ಹಾಗೂ ಅವರು ತಮ್ಮ ಬೋಧನೆಗಳನ್ನು ತಾವು ಸ್ವತಃ ಹೇಗೆ ನೀಡಬಯಸಿದ್ದರೋ ಹಾಗೆಯೇ ತಲುಪಿಸುವ ಬಗ್ಗೆ ಆಶ್ವಾಸನೆ ನೀಡುತ್ತದೆ.
ಪರಮಹಂಸ ಯೋಗಾನಂದ — ಪೂರ್ವ ಮತ್ತು ಪಶ್ಚಿಮದ ಯೋಗಿ.