1935ರಲ್ಲಿ, ಯೋಗಾನಂದರು ತಮ್ಮ ಮಹಾನ್ ಗುರುಗಳೊಂದಿಗಿನ ಕಡೆಯ ಭೇಟಿಗಾಗಿ ಭಾರತಕ್ಕೆ ಹಿಂದಿರುಗಿದರು (ಎಡಕ್ಕೆ). (ಸ್ವಾಮಿ ಶ್ರೀ ಯುಕ್ತೇಶ್ವರರು ಮಾರ್ಚ್ 9, 1936ರಂದು ಮಹಾಸಮಾಧಿಯನ್ನು ಹೊಂದಿದರು.) ಯೂರೋಪ್, ಪ್ಯಾಲಸ್ಟೈನ್ ಮತ್ತು ಈಜಿಪ್ಟ್ಗಳ ಮೂಲಕ ಹಡಗಿನಲ್ಲಿ ಮತ್ತು ಮೋಟಾರು ಕಾರಿನಲ್ಲಿ ಪ್ರಯಾಣ ಮಾಡುತ್ತಾ, ಅವರು 1935ರ ಬೇಸಿಗೆಯಲ್ಲಿ ಮುಂಬೈಗೆ ಬಂದಿಳಿದರು.
ತಮ್ಮ ಜನ್ಮ ಭೂಮಿಯ ವರ್ಷಾದ್ಯಂತದ ಪ್ರವಾಸದಲ್ಲಿ, ಯೋಗಾನಂದರು ಇಡೀ ಉಪಖಂಡದ ನಗರಗಳಲ್ಲಿ ತರಗತಿಗಳನ್ನು ನಡೆಸಿದರು ಮತ್ತು ಕ್ರಿಯಾ ಯೋಗದ ದೀಕ್ಷೆಯನ್ನು ನೀಡಿದರು. ಕ್ರಿಯಾ ಯೋಗದ ದೀಕ್ಷೆಯನ್ನು ನೀಡಬೇಕೆಂದು ಕೇಳಿಕೊಂಡ ಮಹಾತ್ಮ ಗಾಂಧಿಯವರೊಡನೆ, ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಸರ್ ಸಿ.ವಿ. ರಾಮನ್; ಹಾಗೂ ರಮಣ ಮಹರ್ಷಿ ಮತ್ತು ಆನಂದಮಯಿ ಮಾ ಅವರೂ ಸೇರಿದಂತೆ ಭಾರತದ ಬಹು ಪ್ರಖ್ಯಾತರಾದ ಆಧ್ಯಾತ್ಮಿಕ ಸಂತರ ಜೊತೆಗಿನ ತಮ್ಮ ಭೇಟಿಯನ್ನು ಕೂಡ ಅವರು ಆನಂದಿಸಿದರು.
ಇದೇ ವರ್ಷದಲ್ಲಿ ಶ್ರೀ ಯುಕ್ತೇಶ್ವರರು ಅವರಿಗೆ ಪರಮಹಂಸ ಎಂಬ ಭಾರತದ ಅತ್ಯುತ್ಕೃಷ್ಟ ಆಧ್ಯಾತ್ಮಿಕ ಉಪಾಧಿಯನ್ನು ಅನುಗ್ರಹಿಸಿದರು. ಅಕ್ಷರಶಃ “ಅತಿಶ್ರೇಷ್ಠ ಹಂಸ” (ಆಧ್ಯಾತ್ಮಿಕ ವಿವೇಚನಾಶಕ್ತಿಯ ಒಂದು ಸಂಕೇತ), ಉಪಾಧಿಯು ಭಗವಂತನೊಡನೆಯ ಸಾಯುಜ್ಯದ ಪರಮೋಚ್ಚ ಸ್ಥಿತಿಯಲ್ಲಿ ನೆಲೆಗೊಂಡಿರುವುದನ್ನು ಸೂಚಿಸುತ್ತದೆ.
ಭಾರತದಲ್ಲಿರುವಾಗ, ಪರಮಹಂಸ ಯೋಗಾನಂದರು ಅಲ್ಲಿನ ತಮ್ಮ ಕಾರ್ಯಕ್ಕೆ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಕ್ಕೆ, ಒಂದು ಶಾಶ್ವತ ಬುನಾದಿಯನ್ನು ಖಾತರಿಪಡಿಸಿಕೊಂಡರು. ದಕ್ಷಿಣೇಶ್ವರ (ಕಲ್ಕತ್ತಾ ಬಳಿಯ ಗಂಗಾನದಿಯ ದಂಡೆಯ ಮೇಲೆ) ದಲ್ಲಿರುವ ತನ್ನ ಕೇಂದ್ರಕಾರ್ಯಾಲಯ (ಕೆಳಗಡೆ ಎಡಕ್ಕೆ) ಹಾಗೂ ರಾಂಚಿಯ ಮೊಟ್ಟ ಮೊದಲ ಆಶ್ರಮದಿಂದ ಸೊಸೈಟಿಯು ಇಂದಿಗೂ ನಿರಂತರವಾಗಿ ವರ್ಧಿಸುತ್ತಿದೆ — ಉಪಖಂಡದಾದ್ಯಂತದ ಶಾಲೆಗಳು, ಆಶ್ರಮಗಳು, ಧ್ಯಾನ ಕೇಂದ್ರಗಳು ಹಾಗೂ ಧರ್ಮಾರ್ಥ ಕಾರ್ಯಗಳ ಮೂಲಕ.
1936ರ ಕೊನೆಯಲ್ಲಿ ಅವರು ಅಮೇರಿಕಕ್ಕೆ ಹಿಂದಿರುಗಿ, ತಮ್ಮ ಜೀವನದ ಕಡೆಯವರೆಗೂ ಅಲ್ಲಿಯೇ ಉಳಿದರು.